ADVERTISEMENT

ಪರುಪಳ್ಳಿ ಕಶ್ಯಪ್‌ಗೆ ಪ್ರಶಸ್ತಿ

ಆಸ್ಟ್ರಿಯನ್‌ ಓಪನ್‌ ಇಂಟರ್‌ನ್ಯಾಷನಲ್‌ ಚಾಲೆಂಜ್‌ ಬ್ಯಾಡ್ಮಿಂಟನ್‌ ಟೂರ್ನಿ

ಪಿಟಿಐ
Published 25 ಫೆಬ್ರುವರಿ 2018, 18:59 IST
Last Updated 25 ಫೆಬ್ರುವರಿ 2018, 18:59 IST
ಪರುಪಳ್ಳಿ ಕಶ್ಯಪ್‌
ಪರುಪಳ್ಳಿ ಕಶ್ಯಪ್‌   

ವಿಯೆನ್ನಾ: ಅಮೋಘ ಆಟ ಆಡಿದ ಭಾರತದ ಪರುಪಳ್ಳಿ ಕಶ್ಯಪ್‌, ಆಸ್ಟ್ರಿಯನ್‌ ಓಪನ್‌ ಇಂಟರ್‌ನ್ಯಾಷನಲ್‌ ಚಾಲೆಂಜ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಶನಿವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ ಹೋರಾ ಟದಲ್ಲಿ ಕಶ್ಯಪ್‌ 23–21, 21–14ರ ನೇರ ಗೇಮ್‌ಗಳಿಂದ ಮಲೇಷ್ಯಾದ ಜೂನ್‌ ವೀ ಚೀಮ್‌ ಅವರನ್ನು ಸೋಲಿಸಿದರು. ಈ ಮೂಲಕ ಮೂರು ವರ್ಷಗಳ ನಂತರ ಅಂತರರಾಷ್ಟ್ರೀಯ ಟೂರ್ನಿಯೊಂದರಲ್ಲಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು.

ಟೂರ್ನಿಯ ಆರಂಭದಿಂದಲೂ ಶ್ರೇಷ್ಠ ಆಟ ಆಡಿ ಗಮನ ಸೆಳೆದಿದ್ದ ಕಶ್ಯಪ್‌, ಫೈನಲ್‌ ಪಂದ್ಯದಲ್ಲೂ ಮೋಡಿ ಮಾಡಿದರು. ಅವರು 37 ನಿಮಿಷಗಳಲ್ಲಿ ಎದುರಾಳಿಯ ಸವಾಲು ಮೀರಿದರು.

ADVERTISEMENT

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಹೆಗ್ಗಳಿಕೆ ಹೊಂದಿರುವ ಕಶ್ಯಪ್‌ಗೆ ಮೊದಲ ಗೇಮ್‌ನಲ್ಲಿ ಪ್ರಬಲ ಪೈಪೋಟಿ ಎದುರಾಯಿತು. ವಿಶ್ವ ಕ್ರಮಾಂಕಪಟ್ಟಿಯಲ್ಲಿ 126ನೇ ಸ್ಥಾನ ಹೊಂದಿರುವ ಚೀಮ್‌ ಚುರುಕಿನ ಸರ್ವ್‌ ಮತ್ತು ಆಕರ್ಷಕ ಕ್ರಾಸ್‌ಕೋರ್ಟ್‌ ಹೊಡೆತಗಳ ಮೂಲಕ ಪಾಯಿಂಟ್ಸ್‌ ಗಳಿಸಿದರು. ಇದರಿಂದ ವಿಶ್ವಾಸ ಕಳೆದು ಕೊಳ್ಳದ ಕಶ್ಯಪ್‌, ಗುಣಮಟ್ಟದ ಆಟ ದತ್ತ ಚಿತ್ತ ನೆಟ್ಟರು.

ಭಾರತದ ಆಟಗಾರ ಬಾರಿಸುತ್ತಿದ್ದ ಬೇಸ್‌ಲೈನ್‌ ಹೊಡೆತಗಳನ್ನು ಹಿಂತಿರು ಗಿಸಲು ಪ್ರಯಾಸಪಟ್ಟ ಚೀಮ್‌ ಪಾಯಿಂಟ್ ಕೈಚೆಲ್ಲಿದರು.

ವಿರಾಮದ ನಂತರ ಇಬ್ಬರೂ ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು. ಹೀಗಾಗಿ ಗೇಮ್‌ನಲ್ಲಿ 17–17, 19–19, 20–20 ಹೀಗೆ ಸಮಬಲ ಕಂಡುಬಂತು. ಈ ಹಂತದಲ್ಲಿ ಮೂರು ಗೇಮ್‌ ಪಾಯಿಂಟ್‌ಗಳನ್ನು ಕಾಪಾಡಿಕೊಂಡ ಕಶ್ಯಪ್‌ ಸಂಭ್ರಮಿಸಿದರು.

ಎರಡನೇ ಗೇಮ್‌ನ ಆರಂಭ ದಿಂದಲೇ ಕಶ್ಯಪ್‌ ತುಂಬು ವಿಶ್ವಾಸದಿಂದ ಆಡಿದರು. ಎದುರಾಳಿಯ ತಂತ್ರಗಳಿಗೆ ಪ್ರತಿತಂತ್ರ ಹೆಣೆದ ಅವರು ಚುರುಕಿನ ಡ್ರಾಪ್‌ಗಳ ಮೂಲಕವೂ ಚೀಮ್‌ ಅವರನ್ನು ಕಂಗೆಡಿಸಿದರು.

ಈ ಮೂಲಕ ಮುನ್ನಡೆ ಕಾಯ್ದುಕೊಂಡು ಸಾಗಿದ ಭಾರತದ ಆಟಗಾರ, ಎದುರಾಳಿಯ ಮೇಲೆ ಒತ್ತಡ ಹೇರಿ ಸುಲಭವಾಗಿ ಗೆಲುವು ಒಲಿಸಿಕೊಂಡರು.

‘ಇಲ್ಲಿ ಪ್ರಶಸ್ತಿ ಗೆದ್ದಿರುವುದಕ್ಕೆ ಅತೀವ ಖುಷಿಯಾಗಿದೆ. ಗಾಯದ ಕಾರಣ ಹಿಂದಿನ ಅನೇಕ ಟೂರ್ನಿಗಳಲ್ಲಿ ಶ್ರೇಷ್ಠ ಆಟ ಆಡಲು ಆಗಿರಲಿಲ್ಲ. ಹೀಗಾಗಿ ತುಂಬಾ ನೋವಾಗಿತ್ತು. ಈ ಪ್ರಶಸ್ತಿ ಹಿಂದಿನ ನಿರಾಸೆಗಳನ್ನು ದೂರ ಮಾಡಿದೆ. ಸತತವಾಗಿ ನನ್ನನ್ನು ಬೆಂಬಲಿಸಿದ ಕುಟುಂಬದವರು ಮತ್ತು ಸ್ನೇಹಿತರಿಗೆ ನಾನು ಆಭಾರಿಯಾಗಿದ್ದೇನೆ’ ಎಂದು ಕಶ್ಯಪ್‌ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.