ADVERTISEMENT

ಪಾಕ್ ಕ್ರಿಕೆಟ್ ಕೊಳೆ ತೊಳೆಯಬೇಕು: ಅಶ್ರಫ್

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2011, 19:30 IST
Last Updated 21 ಅಕ್ಟೋಬರ್ 2011, 19:30 IST

ಲಾಹೋರ್ (ಪಿಟಿಐ): ಪಾಕ್ ಕ್ರಿಕೆಟ್ ಮುಖಕ್ಕೆ ಅಂಟಿರುವ ಕೊಳೆ ತೊಳೆಯುವುದೇ ತಮ್ಮ ಮೊದಲ ಆದ್ಯತೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಜಕಾ ಅಶ್ರಫ್ ಅವರು ಹೇಳಿದ್ದಾರೆ.

ಪಿಸಿಬಿ ಅಧ್ಯಕ್ಷರಾಗಿ ನೇಮಕಗೊಂಡಿದ್ದರೂ ಅಶ್ರಫ್ ಅವರು ಇನ್ನೂ ಅಧಿಕಾರ ವಹಿಸಿಕೊಂಡಿಲ್ಲ. ಕಾನೂನು ತೊಡಕುಗಳು ಇರುವ ಕಾರಣ ಪಾಕ್ ಸರ್ಕಾರವು ಹೊಸ ಅಧ್ಯಕ್ಷರ ನೇಮಕದ ಕುರಿತು ಇನ್ನೂ ಅಧಿಕೃತ ಪ್ರಕಟಣೆಯನ್ನು ಹೊರಡಿಸಿಲ್ಲ. ಆದ್ದರಿಂದ ಇಜಾಜ್ ಬಟ್ ಅವರಿಂದ ಆಡಳಿತವನ್ನು ಹಸ್ತಾಂತರ ಮಾಡಿಕೊಳ್ಳುವ ಪ್ರಕ್ರಿಯೆ ವಿಳಂಬವಾಗಿದೆ.

ಪಿಸಿಬಿ ಪ್ರಧಾನ ಪೋಷಕರಾಗಿರುವ ಆಸಿಫ್ ಅಲಿ ಜರ್ದಾರಿ ತಮ್ಮ ಪರಮಾಧಿಕಾರವನ್ನು ಬಳಸಿಕೊಂಡು ಅಧಿಕೃತ ಪ್ರಕಟಣೆ ಹೊರಡಿಸುವುದಕ್ಕೆ ಕ್ರೀಡಾ ಸಚಿವರಿಗೆ ಆದೇಶ ನೀಡಬಹುದು. ಆದರೆ ಮುಂದೆ ಎದುರಾಗಬಹುದಾದ ಕಾನೂನು ತೊಡಕುಗಳ ಕುರಿತು ಸರ್ಕಾರ ಚಿಂತನೆ ನಡೆಸಿದೆ.

ನೂತನ ಅಧ್ಯಕ್ಷರು ಅಧಿಕಾರ ಸ್ವೀಕರಿಸುವವರೆಗೆ ಪಿಸಿಬಿ ಪ್ರಧಾನ ನಿರ್ವಹಣಾ ಅಧಿಕಾರಿ ಸುಭಾನ್ ಅಹ್ಮದ್ ಅವರು ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಪಿಸಿಬಿ ಮೂಲಗಳು ತಿಳಿಸಿವೆ.

ಸ್ಪಾಟ್ ಫಿಕ್ಸಿಂಗ್ ಕೆಟ್ಟಕಾಲ: ತಮ್ಮ ಆಡಳಿತದ ಅವಧಿಯಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್ ಪ್ರಕರಣವು ಕೆಟ್ಟಕಾಲಘಟ್ಟ ಎಂದು ಪಿಸಿಬಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಿರುವ ಇಜಾಜ್ ಬಟ್ ಹೇಳಿದ್ದಾರೆ.

ಸ್ಪಾಟ್ ಫಿಕ್ಸಿಂಗ್‌ನಲ್ಲಿ ಪಾಕ್ ಆಟಗಾರರು ಸಿಕ್ಕಿಬಿದ್ದ ನಂತರ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯಲ್ಲಿ ಪಿಸಿಬಿ ಗೌರವವೂ ಕುಂದಿದೆ ಎನ್ನುವುದನ್ನು ಒಪ್ಪದ ಅವರು `ಯಾವುದೇ ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ಐಸಿಸಿ ನಮಗೆ ಎಲ್ಲ ರೀತಿಯಲ್ಲಿ ಬೆಂಬಲ ನೀಡಿದೆ~ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.