ADVERTISEMENT

ಪಾಕ್ ವಿರುದ್ಧದ ಸವಾಲಿಗೆ ಸಜ್ಜು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2011, 18:05 IST
Last Updated 25 ಫೆಬ್ರುವರಿ 2011, 18:05 IST

ಈ ಬಾರಿಯ ವಿಶ್ವಕಪ್‌ನಲ್ಲಿ ನಾವು ಉತ್ತಮ ಆರಂಭವನ್ನು ಪಡೆದಿದ್ದೇವೆ. ಕೆನಡಾ ವಿರುದ್ಧದ ಪಂದ್ಯದಲ್ಲಿ 210 ರನ್‌ಗಳ ವಿಜಯ ಸಾಧಿಸಿದ್ದು ಸಮಾಧಾನ. ಕೆನಡಾ ನಾವು ನಿರೀಕ್ಷಿಸಿದಷ್ಟು ಪ್ರಬಲ ಪೈಪೋಟಿಯನ್ನು ನೀಡಲಿಲ್ಲ. ಆ ಪಂದ್ಯದಲ್ಲಿನ ಯಶಸ್ಸಿಗಾಗಿ ಸಂಭ್ರಮಿಸಿ ತಣ್ಣಗಾಗುವ ಕಾಲವಿದಲ್ಲ. ಸವಾಲಿನ ಹಾದಿ ಇನ್ನೂ ಮುಂದಿದೆ. ಸಾಕಷ್ಟು ದೂರ ಕ್ರಮಿಸಬೇಕು. ಯಾವುದೇ ಟೂರ್ನಿ ಹಾಗೂ ಸರಣಿಯಲ್ಲಿ ಆರಂಭದಲ್ಲಿ ಉತ್ತಮ ಫಲಿತಾಂಶ ಪಡೆಯುವುದು ಅನುಕೂಲ. ಅದರಿಂದ ಉತ್ಸಾಹದಿಂದ ಮುನ್ನುಗ್ಗಲು ಸಾಧ್ಯವಾಗುತ್ತದೆ. ಶನಿವಾರ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಯಶಸ್ಸು ಪಡೆಯುವ ಭರವಸೆಯೊಂದಿಗೆ ಸಜ್ಜಾಗಿದ್ದೇವೆ. ಅದೊಂದು ಸವಾಲಿನ ಪಂದ್ಯ ಎನ್ನುವುದು ಸ್ಪಷ್ಟ. ಪಾಕ್ ಸುಲಭದ ತುತ್ತು ಆಗುವುದಿಲ್ಲ ಎನ್ನುವುದೂ ಗೊತ್ತು.

ಹಂಬಂಟೋಟಾ ಪಂದ್ಯದಲ್ಲಿ ನಮ್ಮ ತಂಡದ ಆಟಗಾರರು ಆಡಿದ ರೀತಿಯು ಮೆಚ್ಚುವಂಥದು. ಪಂದ್ಯದ ಪ್ರತಿಯೊಂದು ಹಂತದಲ್ಲಿ ಅಗತ್ಯಕ್ಕೆ ತಕ್ಕ ಪ್ರದರ್ಶನವನ್ನು ನೀಡಿದರು. ಜೊತೆಯಾಟಗಳು ಬೆಳೆದಿದ್ದರಿಂದ ಇನಿಂಗ್ಸ್ ಕಟ್ಟುವುದೂ ಕಷ್ಟವಾಗಲಿಲ್ಲ. ಬೌಲರ್‌ಗಳು ಕೂಡ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದರು. ಆ ಪಂದ್ಯ ಮುಗಿಸಿಕೊಂಡು ಹೆಲಿಕಾಫ್ಟರ್‌ನಲ್ಲಿಯೇ ಹಂಬಂಟೋಟಾದಿಂದ ಕೊಲಂಬೊಕ್ಕೆ ಸೋಮವಾರ ಬಂದೆವು. ಕೆಲವು ದಿನ ವಿಶ್ರಾಂತಿ ಪಡೆಯುವುದಕ್ಕೂ ಅವಕಾಶ ಸಿಕ್ಕಿತು. ನೆಟ್ಸ್‌ನಲ್ಲಿಯೂ ನಮ್ಮ ಆಟಗಾರರು ಸಾಕಷ್ಟು ಹೊತ್ತು ಅಭ್ಯಾಸ ಮಾಡಿದ್ದಾರೆ. ಪಾಕ್ ಎದುರು ವಿಶ್ವಾಸದಿಂದ ಹೋರಾಡುವ ಶಕ್ತಿಯನ್ನೂ ಒಗ್ಗೂಡಿಸಿಕೊಂಡಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಕ್ಷೇತ್ರದಲ್ಲಿ ಕಳೆದ ಐದಾರು ತಿಂಗಳ ಅವಧಿಯಲ್ಲಿ ಏನು ಆಯಿತು ಎನ್ನುವುದು ಮುಖ್ಯವಲ್ಲ. ಅಂಗಳದ ಹೊರಗಿನ ಸಮಸ್ಯೆಗಳಿಂದಾಗಿ ಸಂಕಷ್ಟಕ್ಕೊಳಗಾಗಿದ್ದ ತಂಡ ಅದಾಗಿದ್ದರೂ, ಆಟದಲ್ಲಿ ಗುಣಮಟ್ಟವನ್ನು ಕಾಯ್ದುಕೊಂಡು ಸಾಗಿದೆ. ಆದ್ದರಿಂದ ಅದನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಪಾಕ್ ವಿರುದ್ಧ ಹಿಂದೆಯೂ ಅನೇಕ ಪಂದ್ಯಗಳನ್ನು ಆಡಿದ್ದೇವೆ. 
-ಗೇಮ್‌ಪ್ಲಾನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.