ADVERTISEMENT

ಪಾಠ ಕಲಿಯದಿದ್ದರೆ ಕೈಬಿಡಲಿದೆ ಟ್ರೋಫಿ- ಪಾಂಟಿಂಗ್

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2011, 19:30 IST
Last Updated 20 ಮಾರ್ಚ್ 2011, 19:30 IST

ಕೊಲಂಬೊ (ಪಿಟಿಐ): ಪಾಕಿಸ್ತಾನ ತಂಡದ ಎದುರಿನ ಸೋಲಿನಿಂದ ಕಂಗೆಟ್ಟಿರುವ ಆಸ್ಟ್ರೇಲಿಯಾ ತಂಡದ ನಾಯಕ ರಿಕಿ ಪಾಂಟಿಂಗ್, ‘ತುರ್ತಾಗಿ ಬ್ಯಾಟಿಂಗ್‌ನಲ್ಲಿ ತಂಡ ಸುಧಾರಣೆ ಮಾಡಿಕೊಳ್ಳದಿದ್ದರೆ ವಿಶ್ವಕಪ್ ಟ್ರೋಫಿ ಉಳಿಸಿಕೊಳ್ಳುವುದು ಅಸಾಧ್ಯದ ಮಾತಾಗುತ್ತದೆ’ ಎಂದು ಆಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ.

‘ಎ’ ಗುಂಪಿನ ಕೊನೆಯ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 176 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗಿತ್ತು. ಪಾಕಿಸ್ತಾನ ತಂಡ ಇನ್ನೂ ಒಂಬತ್ತು ಓವರ್‌ಗಳು ಬಾಕಿ ಇರುವಂತೆಯೇ ನಾಲ್ಕು ವಿಕೆಟ್ ಅಂತರದಿಂದ ಪಂದ್ಯ ಜಯಿಸಿತ್ತು. 1999ರ ವಿಶ್ವಕಪ್‌ನಿಂದ ಅಜೇಯವಾಗಿ ಉಳಿದಿದ್ದ ತಂಡ ತನ್ನ 34ನೇ ಪಂದ್ಯದಲ್ಲಿ ಸೋಲು ಅನುಭವಿಸಿತ್ತು.

‘ಪಂದ್ಯದಲ್ಲಿ ನಾವು ಎಸಗಿರುವ ಪ್ರಮಾದದಿಂದ ಬಹುಬೇಗ ಪಾಠ ಕಲಿಯಬೇಕು. ಎಲ್ಲರೂ ಈ ಪಂದ್ಯದ ವಿಷಯವಾಗಿಯೇ ಮಾತನಾಡುವಂತಾಗಿದೆ. ಈ ವೈಫಲ್ಯದಿಂದ ಹೊರಬರುವುದು ಕಷ್ಟ. ಆದರೆ, ಈಗಿಂದೀಗಲೇ ಪಾಠ ಕಲಿಯುವುದು ಅನಿವಾರ್ಯ’ ಎಂದು ಪಾಂಟಿಂಗ್ ತಿಳಿಸಿದ್ದಾರೆ.

ADVERTISEMENT

‘ಶನಿವಾರದ ಪಂದ್ಯದಲ್ಲಿ ನಾವು ಬ್ಯಾಟ್ ಮಾಡಿದ ರೀತಿಯನ್ನು ಕಂಡಾಗ ಇಂತಹ ಬ್ಯಾಟಿಂಗ್ ಬಲವನ್ನು ಇಟ್ಟುಕೊಂಡು ವಿಶ್ವಕಪ್ ಗೆಲ್ಲುವುದು ಸಾಧ್ಯವೇ ಇಲ್ಲ ಎನಿಸಿತು. ಈ ವಿಷಯವಾಗಿ ಪುನರಾವಲೋಕನದ ಅಗತ್ಯವಿದೆ. ಪ್ರಶಸ್ತಿ ಗೆಲ್ಲುವಂತಹ ಆಟ ಆಡಬೇಕಿದೆ’ ಎಂದು ಅವರು ಹೇಳಿದ್ದಾರೆ.

‘ಎ’ ಗುಂಪಿನಲ್ಲಿ ತೃತೀಯ ಸ್ಥಾನ ಗಳಿಸಿರುವ ಆಸ್ಟ್ರೇಲಿಯಾ ತಂಡ ಕ್ವಾರ್ಟರ್‌ಫೈನಲ್‌ನಲ್ಲಿ ‘ಬಿ’ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ತಂಡವನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.