ADVERTISEMENT

ಪೋಸ್ಟಲ್‌ಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 8 ಜನವರಿ 2012, 19:30 IST
Last Updated 8 ಜನವರಿ 2012, 19:30 IST

ಬೆಂಗಳೂರು: ಚುರುಕಿನ ಪ್ರದರ್ಶನ ನೀಡಿದ ಪೋಸ್ಟಲ್ ತಂಡದವರು ಇಲ್ಲಿ ನಡೆಯುತ್ತಿರುವ ಡಿ.ಎಸ್. ಮೂರ್ತಿ ಮತ್ತು ವಿ. ಕರುಣಾಕರನ್ ಸ್ಮಾರಕ ಹಾಕಿ ಟೂರ್ನಿಯ ಪಂದ್ಯದಲ್ಲಿ ಭರ್ಜರಿ ಗೆಲುವು ಪಡೆದರು.

ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಪೋಸ್ಟಲ್ 5-1 ರಲ್ಲಿ ನವೀನ್ ಹಾಕಿ ಕ್ಲಬ್ ತಂಡವನ್ನು ಮಣಿಸಿತು. ತಲಾ ಎರಡು ಗೋಲುಗಳನ್ನು ಗಳಿಸಿದ ಶಂಕರ್ (7 ಮತ್ತು 44ನೇ ನಿಮಿಷ) ಹಾಗೂ ಸ್ಯಾಮುಯೆಲ್ ನಿರಂಜನ್ (27 ಮತ್ತು 51) ಪೋಸ್ಟಲ್ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ತಂಡದ ಇನ್ನೊಂದು ಗೋಲನ್ನು ತಾರಾನಾಥ 35ನೇ ನಿಮಿಷದಲ್ಲಿ ಗಳಿಸಿದರು. ನವೀನ್ ಕ್ಲಬ್ ತಂಡದ ಏಕೈಕ ಗೋಲನ್ನು ಪ್ರವೀಣ್ ಕುಮಾರ್ 29ನೇ ನಿಮಿಷದಲ್ಲಿ ಗಳಿಸಿದರು. ಕೆಜಿಎಫ್‌ನ ಐಡಿಯಲ್   ಸ್ಪೋರ್ಟ್ಸ್ ಕ್ಲಬ್ ಮತ್ತು ಫ್ಲೈಯಿಂಗ್ ಹಾಕಿ ಕ್ಲಬ್ ತಂಡಗಳ ನಡುವಿನ ಪಂದ್ಯ ರೋಚಕತೆಯಿಂದ ಕೂಡಿತ್ತು. ಟೈಬ್ರೇಕರ್‌ನಲ್ಲಿ ಐಡಿಯಲ್ ಕ್ಲಬ್ 6-5 ರಲ್ಲಿ ಗೆಲುವು ಪಡೆಯಿತು.

ನಿಗದಿತ ಅವಧಿಯಲ್ಲಿ ಉಭಯ ತಂಡಗಳು 2-2 ಗೋಲುಗಳಿಂದ ಸಮಬಲ ಸಾಧಿಸಿದ್ದವು. ಇದರಿಂದ ವಿಜೇತರ ನಿರ್ಣಯಕ್ಕೆ ಪೆನಾಲ್ಟಿ ಶೂಟೌಟ್ ಮೊರೆಹೋಗಲಾಯಿತು. ಅಂತಿಮವಾಗಿ ಐಡಿಯಲ್ ಕ್ಲಬ್ ಗೆಲುವಿನ ನಗು ಬೀರಿತು.

ಪಂದ್ಯದ ಎಂಟನೇ ನಿಮಿಷದಲ್ಲಿ ಷಣ್ಮುಗಂ ಚೆಂಡನ್ನು ಗುರಿ ಸೇರಿಸಿ ಐಡಿಯಲ್ ಕ್ಲಬ್‌ಗೆ ಮುನ್ನಡೆ ತಂದಿತ್ತರೆ, ಅಪ್ಪಚ್ಚು (17ನೇ ನಿಮಿಷ) ಗಳಿಸಿದ ಗೋಲಿನ ನೆರವಿನಿಂದ ಫ್ಲೈಯಿಂಗ್ ತಂಡ ತಿರುಗೇಟು ನೀಡಿತು. ಮಾತ್ರವಲ್ಲ 24ನೇ ನಿಮಿಷದಲ್ಲಿ ವಿಮಲ್ ಚೆಂಡನ್ನು ಗುರಿ ಸೇರಿಸಿ ಫ್ಲೈಯಿಂಗ್‌ಗೆ 2-1ರ ಮುನ್ನಡೆ ತಂದಿತ್ತರು.

ಫ್ಲೈಯಿಂಗ್ ತಂಡ ಇದೇ ಮುನ್ನಡೆಯನ್ನು ಕೊನೆಯವರೆಗೆ ಕಾಪಾಡಿಕೊಳ್ಳುವಲ್ಲಿ ವಿಫಲವಾಯಿತು. ಐಡಿಯಲ್ ಕ್ಲಬ್‌ನ ಶಂಕರ್ 55ನೇ ನಿಮಿಷದಲ್ಲಿ ಗೋಲು ಗಳಿಸಿ ಪಂದ್ಯ ಮತ್ತೆ ಸಮನಾಗುವಂತೆ ನೋಡಿಕೊಂಡರು. ಟೈಬ್ರೇಕರ್‌ನಲ್ಲಿ ಫ್ಲೈಯಿಂಗ್ ತಂಡಕ್ಕೆ ಅದೃಷ್ಟ ಕೈಕೊಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.