ADVERTISEMENT

ಪ್ರಶಸ್ತಿ ಗೆಲ್ಲುವುದೊಂದೇ ಗುರಿ: ಕೊಹ್ಲಿ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2018, 19:30 IST
Last Updated 4 ಏಪ್ರಿಲ್ 2018, 19:30 IST
ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ (ಬಲತುದಿ) ಅವರು ತಂಡದ ಸಲಹೆಗಾರ ಗ್ಯಾರಿ ಕರ್ಸ್ಟನ್‌ ಮತ್ತು ಆಟಗಾರ ಸರ್ಫರಾಜ್ ಖಾನ್‌ ಜೊತೆ ಮಾತುಕತೆ ನಡಸಿದರು ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್‌ ಪಿ.ಎಸ್‌.
ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ (ಬಲತುದಿ) ಅವರು ತಂಡದ ಸಲಹೆಗಾರ ಗ್ಯಾರಿ ಕರ್ಸ್ಟನ್‌ ಮತ್ತು ಆಟಗಾರ ಸರ್ಫರಾಜ್ ಖಾನ್‌ ಜೊತೆ ಮಾತುಕತೆ ನಡಸಿದರು ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್‌ ಪಿ.ಎಸ್‌.   

ಬೆಂಗಳೂರು (ಪಿಟಿಐ): ಎಲ್ಲ ವಿಭಾಗಗಳಲ್ಲೂ ಬಲಿಷ್ಠವಾಗಿರುವ ತಂಡ ಮೊದಲ ‍ಪ್ರಶಸ್ತಿಯ ಸಂಭ್ರಮ ಅನುಭವಿಸುವಂತೆ ಮಾಡುವುದೇ ನನ್ನ ಗುರಿ. ಇದಕ್ಕಾಗಿ ಅರ್ಪಣಾ ಮನೋಭಾವದಿಂದ ಆಡಲಿದ್ದೇನೆ’ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಅಭ್ಯಾಸದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಪ್ರೇಕ್ಷಕರ ಮನ ಗೆಲ್ಲುವುದ
ಕ್ಕಿಂತಲೂ ಮಿಗಿಲಾಗಿ ತಂಡಕ್ಕೆ ಪ್ರಶಸ್ತಿ ಗೆದ್ದುಕೊಡುವುದು ನನ್ನ ಉದ್ದೇಶ’ ಎಂದರು.

ಅತ್ಯುತ್ತಮ ಆಟಗಾರರನ್ನು ಹೊಂದಿದ್ದರೂ ಆರ್‌ಸಿಬಿಗೆ ಇಲ್ಲಿಯವರೆಗೆ ಐಪಿಎಲ್‌ನಲ್ಲಿ ಪ್ರಶಸ್ತಿ ಗೆಲ್ಲಲು ಆಗಲಿಲ್ಲ. ಮೂರು ಬಾರಿ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಎಡವಿದ ಈ ತಂಡ ಕಳೆದ ಬಾರಿ ಕೊನೆಯ ಸ್ಥಾನಕ್ಕೆ ಇಳಿದಿತ್ತು.

ADVERTISEMENT

‘ಹತ್ತು ವರ್ಷಗಳಿಂದ ಬೆಂಗಳೂರು ತಂಡದ ಜೊತೆ ಇದ್ದೇನೆ. ಮೂರು ಬಾರಿ ಫೈನಲ್‌ನಲ್ಲಿ ಸೋತಿದ್ದೇವೆ. ಆದರೆ ಈ ಬಾರಿ ಪ್ರಶಸ್ತಿ ಗೆಲ್ಲುವುದಕ್ಕಾಗಿ ತಂಡದ ಪ್ರತಿಯೊಬ್ಬರೂ ಸಂಪೂರ್ಣ ಶ್ರಮ ಹಾಕಲಿದ್ದಾರೆ’ ಎಂದರು.

‘ಇಲ್ಲಿಯವರೆಗೆ ಬ್ಯಾಟಿಂಗ್ ನಮ್ಮ ತಂಡದ ಶಕ್ತಿಯಾಗಿತ್ತು. ಆದರೆ ಈ ಬಾರಿ ಬೌಲಿಂಗ್ ವಿಭಾಗವೂ ಬಲ ಪಡೆದುಕೊಂಡಿದೆ. ಬೌಲರ್‌ಗಳಿಗೆ ಇನ್ನಷ್ಟು ಶಕ್ತಿ ತುಂಬಲು ಈಗ ಪ್ರಯತ್ನಿಸಲಾಗುತ್ತಿದೆ. ಇದರ ಪರಿಣಾಮವನ್ನು ಪಂದ್ಯಗಳಲ್ಲಿ ಕಾಣಬಹುದು’ ಎಂದು ಅವರು ಅಭಿಪ್ರಾಯಪಟ್ಟರು.

ಯಜುವೇಂದ್ರ ಚಾಹಲ್‌, ವಾಷಿಂಗ್ಟನ್ ಸುಂದರ್‌, ಎಂ.ಅಶ್ವಿನ್‌, ಪವನ್ ನೇಗಿ ಮತ್ತು ಇಂಗ್ಲೆಂಡ್‌ನ ಆಲ್‌ರೌಂಡರ್‌ ಮೊಯಿನ್ ಅಲಿ ಅವರನ್ನು ಒಳಗೊಂಡ ಸ್ಪಿನ್‌ ವಿಭಾಗವನ್ನು ಆರ್‌ಸಿಬಿ ಹೊಂದಿದೆ.

ಉಮೇಶ್‌ ಯಾದವ್‌, ಕ್ರಿಸ್ ವೋಕ್ಸ್‌, ನವದೀಪ್ ಸೈನಿ, ಮಹಮ್ಮದ್ ಸಿರಾಜ್‌ ಮತ್ತು ಟಿಮ್ ಸೌಥಿ ಅವರು ವೇಗದ ಬೌಲಿಂಗ್ ವಿಭಾಗಕ್ಕೆ ಬಲ ತುಂಬಲಿದ್ದಾರೆ.

ತಂಡ ಈ ಬಾರಿ ಹೊಸ ಆಟಗಾರರನ್ನು ಕೂಡ ಹೊಂದಿದ್ದು ಅವರು ತಂಡದಲ್ಲಿ ಸ್ಥಾನ ಗಳಿಸಿರುವುದಕ್ಕೆ ರೋಮಾಂಚನಗೊಂಡಿದ್ದಾರೆ ಎಂದು ಕೊಹ್ಲಿ ಹೇಳಿದರು.

‘ಉತ್ತಮ ಕಾಣಿಕೆ ನೀಡಲು ಸಾಧ್ಯವಿರುವ ಆಟಗಾರರು ಸಾಕಷ್ಟು ಮಂದಿ ನಮ್ಮೊಂದಿಗೆ ಇದ್ದಾರೆ. ಅವರು ಖಂಡಿತವಾಗಿ ತಂಡದ ಸ್ವತ್ತು ಆಗಲಿದ್ದಾರೆ’ ಎಂದು ಕೊಹ್ಲಿ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.