ADVERTISEMENT

ಪ್ರಶಸ್ತಿ ಸುತ್ತಿಗೆ ಬಾಷ್, ಓರಿಯನ್ಸ್

ರಾಜ್ಯ `ಸಿ' ಡಿವಿಷನ್ ಲೀಗ್ ಚಾಂಪಿಯನ್‌ಷಿಪ್

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 19:59 IST
Last Updated 25 ಜೂನ್ 2013, 19:59 IST

ಬೆಂಗಳೂರು: ಉತ್ತಮ ಪ್ರದರ್ಶನ ತೋರಿದ ಬಾಷ್ ತಂಡ ರಾಜ್ಯ ಬಾಸ್ಕೆಟಬಾಲ್ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ಎಸ್.ರಂಗರಾಜನ್ ಸ್ಮಾರಕ ಟೂರ್ನಿಯ `ಸಿ' ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನ ಸೆಮಿಫೈನಲ್ ಹಣಾಹಣಿಯಲ್ಲಿ 58-38 ಪಾಯಿಂಟ್‌ಗಳಿಂದ ಎಂಸಿಎಚ್‌ಎಸ್ ತಂಡವನ್ನು ಮಣಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿದೆ.

ಕಂಠೀರವ ಹೊರಾಂಗಣ ಕ್ರೀಡಾಂಗಣದ ಕೋರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ಅಶ್ವಿನ್ ಶೆಟ್ಟಿ (22) ಹಾಗೂ ಶೈಲೇಂದ್ರ (12) ವಿಜಯಿ ತಂಡದ ಪರ ಉತ್ತಮ ಪ್ರದರ್ಶನ ತೋರಿ ಗೆಲುವಿನ ರೂವಾರಿ ಎನಿಸಿದರು. ಪಂದ್ಯದ ವಿರಾಮದ  ವೇಳೆಗೆ 26-21ರಲ್ಲಿ ಮುನ್ನಡೆ       ಸಾಧಿಸಿದ್ದ ಬಾಷ್ ತಂಡ, ಉತ್ತರಾರ್ಧದಲ್ಲೂ ಅದೇ ಪ್ರದರ್ಶನ ಮುಂದುವರಿಸಿತು.

ಅಂತಿಮವಾಗಿ 58-38 ಪಾಯಿಂಟ್‌ಗಳಿಂದ ಎಂಸಿಎಚ್‌ಎಸ್ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿತು. ಎಂಸಿಎಚ್‌ಎಸ್ ತಂಡದ ಕಲ್ಯಾಣ್ ಸುಂದರಂ (13) ಹಾಗೂ ಪವನ್‌ಕುಮಾರ (12) ಮಾಡಿದ ಪ್ರಯತ್ನ ಸೋಲಿನ ಅಂತರ ಕುಗ್ಗಿಸಲಷ್ಟೇ ನೆರವಾಯಿತು.

ದಿನದ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಓರಿಯನ್ಸ್ ಸ್ಪೋರ್ಟ್ಸ್ ಕ್ಲಬ್ 63-44 ಪಾಯಿಂಟ್‌ಗಳಿಂದ ಬಿಇಎಂಎಲ್ ಮೈಸೂರು ವಿರುದ್ಧ ಜಯ ಸಾಧಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು. ಸುಹಾಸ್ (17) ಹಾಗೂ ಪವನ್ ಪ್ರಸಾದ್ (15) ವಿಜಯಿ ತಂಡದ ಗೆಲುವಿನ ರೂವಾರಿ ಎನಿಸಿದರು.

ಇದಕ್ಕೂ ಮುನ್ನ ನಡೆದ ಎಂಟರ ಘಟ್ಟದಲ್ಲಿ ಬಾಷ್ ತಂಡ 51-41ರಲ್ಲಿ ಸಹಕಾರ ನಗರ ಬಾಸ್ಕೆಟ್‌ಬಾಲ್ ಕ್ಲಬ್ ವಿರುದ್ಧವೂ; ಬಿಇಎಂಎಲ್ ಮೈಸೂರು ತಂಡ 53-36ರಲ್ಲಿ ಪಟ್ಟಾಭಿರಾಮ್‌ನಗರ ಬಾಸ್ಕೆಟ್‌ಬಾಲ್ ಕ್ಲಬ್ ಮೇಲೂ; ಓರಿಯನ್ಸ್ ಸ್ಪೋರ್ಟ್ಸ್ ಕ್ಲಬ್ 51-37ರಲ್ಲಿ ವಿಮನಾಪುರ ಸ್ಪೋರ್ಟ್ಸ್ ಕ್ಲಬ್ ವಿರುದ್ಧವೂ ಜಯ ಗಳಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.