ADVERTISEMENT

ಪ್ರಸಿದ್ಧ ಮಿಂಚಿನ ದಾಳಿ: ಕರ್ನಾಟಕಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2017, 19:59 IST
Last Updated 12 ನವೆಂಬರ್ 2017, 19:59 IST
ಬರೋಡ ತಂಡದ ದೀಕ್ಷಿತ್‌ ಪಟೇಲ್‌ ಅವರ ವಿಕೆಟ್‌ ಪಡೆದ ಶುಭಾಂಗ್‌ ಹೆಗ್ಡೆ ಸಂಭ್ರಮಿಸಿದರು ಪ್ರಜಾವಾಣಿ ಚಿತ್ರ: ಇರ್ಷಾದ್‌ ಮಹಮ್ಮದ್‌
ಬರೋಡ ತಂಡದ ದೀಕ್ಷಿತ್‌ ಪಟೇಲ್‌ ಅವರ ವಿಕೆಟ್‌ ಪಡೆದ ಶುಭಾಂಗ್‌ ಹೆಗ್ಡೆ ಸಂಭ್ರಮಿಸಿದರು ಪ್ರಜಾವಾಣಿ ಚಿತ್ರ: ಇರ್ಷಾದ್‌ ಮಹಮ್ಮದ್‌   

ಮೈಸೂರು: ಪ್ರಭಾವಿ ಬೌಲಿಂಗ್ ದಾಳಿ ಸಂಘಟಿಸಿದ ಕರ್ನಾಟಕ ತಂಡ ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ 23 ವರ್ಷ ವಯಸ್ಸಿನೊಳಗಿನವರ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಬರೋಡ ವಿರುದ್ಧ 9 ವಿಕೆಟ್‌ಗಳಿಂದ ಜಯಿಸಿತು.

ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾನುವಾರ ಗೆಲುವಿಗೆ 65 ರನ್‌ ಗಳಿಸಬೇಕಿದ್ದ ಆತಿಥೇಯ ತಂಡ 13.2 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ನಾಲ್ಕು ದಿನಗಳ ಪಂದ್ಯ ಎರಡೇ ದಿನಗಳಲ್ಲಿ ಕೊನೆಗೊಂಡಿತು. 27 ಎಸೆತಗಳಲ್ಲಿ ಅಜೇಯ 40 ರನ್‌ ಗಳಿಸಿದ ಅಭಿಷೇಕ್‌ ರೆಡ್ಡಿ ಆತಿಥೇಯರ ಗೆಲುವನ್ನು ಸುಲಭಗೊಳಿಸಿದರು.

ಎಲೀಟ್‌ ‘ಸಿ’ ಗುಂಪಿನಲ್ಲಿರುವ ಕರ್ನಾಟಕ ಎಲ್ಲ ನಾಲ್ಕು ಪಂದ್ಯಗಳನ್ನು ಆಡಿದ್ದು, 16 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನಕ್ಕೇರಿತು. 13 ಪಾಯಿಂಟ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದ ಬರೋಡ ತಂಡ ಎರಡನೇ ಸ್ಥಾನಕ್ಕೆ ಕುಸಿಯಿತು.

ADVERTISEMENT

ಮೊದಲ ಪಂದ್ಯದಲ್ಲಿ ಆಂಧ್ರ ಎದುರು ಇನಿಂಗ್ಸ್ ಸೋಲು ಅನುಭವಿಸಿದ್ದ ಕರ್ನಾಟಕ ಆ ಬಳಿಕ ಪುಟಿದೆದ್ದು ನಿಂತಿದೆ. ರೈಲ್ವೇಸ್ ವಿರುದ್ಧ ಇನಿಂಗ್ಸ್ ಗೆಲುವು ಪಡೆದಿತ್ತಲ್ಲದೆ ಬಂಗಾಳ ಎದುರು ಡ್ರಾ ಮಾಡಿಕೊಂಡಿತ್ತು.

ಬೌಲರ್‌ಗಳ ಮಿಂಚು: ಮೊದಲ ಇನಿಂಗ್ಸ್‌ನಲ್ಲಿ ಕೇವಲ 85 ರನ್‌ ಗಳಿಸಿದ್ದ ಬರೋಡ ತಂಡ ಎರಡನೇ ಇನಿಂಗ್ಸ್‌ನಲ್ಲೂ ಕರ್ನಾಟಕದ ಶಿಸ್ತಿನ ದಾಳಿಯ ಮುಂದೆ ಪರದಾಟ ನಡೆಸಿ 176 ರನ್‌ಗಳಿಗೆ ಆಲೌಟಾಯಿತು. ಪ್ರಸಿದ್ಧ ಎಂ.ಕೃಷ್ಣ 35 ರನ್ ನೀಡಿ ನಾಲ್ಕು ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ಇದಕ್ಕೂ ಮುನ್ನ ಐದು ವಿಕೆಟ್‌ಗೆ 129 ರನ್‌ಗಳೊಂದಿಗೆ ಮೊದಲ ಇನಿಂಗ್ಸ್ ಮುಂದುವರಿಸಿದ್ದ ಆತಿಥೇಯ ತಂಡ 62.2 ಓವರ್‌ಗಳಲ್ಲಿ 197 ರನ್‌ಗಳಿಗೆ ಆಲೌಟಾಯಿತು.

ಸಂಕ್ಷಿಪ್ತ ಸ್ಕೋರ್:

ಬರೋಡ: ಮೊದಲ ಇನಿಂಗ್ಸ್ 85 ಮತ್ತು 51 ಓವರ್‌ಗಳಲ್ಲಿ 176 (ಮಾಹಿರ್‌ ಶೇಖ್‌ 45, ಧ್ರುವ ಪಟೇಲ್ 78, ಪ್ರಸಿದ್ಧ ಎಂ.ಕೃಷ್ಣ 35ಕ್ಕೆ 4, ಕೆ.ಎನ್.ಭರತ್ 29ಕ್ಕೆ 3, ಶುಭಾಂಗ್ ಹೆಗ್ಡೆ 69ಕ್ಕೆ 3)

ಕರ್ನಾಟಕ: ಮೊದಲ ಇನಿಂಗ್ಸ್‌ 62.2 ಓವರ್‌ಗಳಲ್ಲಿ 197 (ಬಿ.ಆರ್.ಶರತ್ 41, ಗುರ್ಜೀಂದರ್ ಸಿಂಗ್ ಮಾನ್ 48ಕ್ಕೆ 4, ಶ್ಲೋಕ್ ದೇಸಾಯಿ 9ಕ್ಕೆ 2) ಮತ್ತು 13.2 ಓವರ್‌ಗಳಲ್ಲಿ 1 ವಿಕೆಟ್‌ಗೆ 66 (ಅಭಿನವ್ ಮನೋಹರ್ 14, ಅಭಿಷೇಕ್ ರೆಡ್ಡಿ ಔಟಾಗದೆ 40).

ಫಲಿತಾಂಶ: ಕರ್ನಾಟಕಕ್ಕೆ 9 ವಿಕೆಟ್ ಗೆಲುವು ಹಾಗೂ ಆರು ಪಾಯಿಂಟ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.