ADVERTISEMENT

ಪ್ರೀ ಕ್ವಾರ್ಟರ್‌ಗೆ ಮನೋಜ್

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2012, 19:30 IST
Last Updated 1 ಆಗಸ್ಟ್ 2012, 19:30 IST

ಲಂಡನ್: ಒಲಿಂಪಿಕ್ಸ್ ಬಾಕ್ಸಿಂಗ್‌ನಲ್ಲಿ ಭಾರತದ ಯಶಸ್ಸಿನ ಪ್ರಹಾರ ಮುಂದುವರಿದೆ. ಕಾರಣ ಪ್ರೀ ಕ್ವಾರ್ಟರ್ ಫೈನಲ್ ತಲುಪಿದವರ ಸಂಖ್ಯೆ ಐದಕ್ಕೇರಿದೆ. ಇದರೊಂದಿಗೆ ಪದಕದ ವಿಶ್ವಾಸವೂ ಹೆಚ್ಚಿದೆ.

ಎಕ್ಸ್‌ಸೆಲ್ ಅರೆನಾದಲ್ಲಿ ಮಂಗಳವಾರ ನಡೆದ 64 ಕೆ.ಜಿ.ವಿಭಾಗದಲ್ಲಿ ಅಮೋಘ ಪ್ರದರ್ಶನ ತೋರಿದ ಭಾರತದ ಮನೋಜ್ ಕುಮಾರ್ ಹದಿನಾರರ ಘಟ್ಟ ಪ್ರವೇಶಿಸಿದರು. ಅವರು 13-7 ಪಾಯಿಂಟ್‌ಗಳಿಂದ ತುರ್ಕಮೆನಿಸ್ತಾನದ ಸರ್ದಾರ್ ಹುದೇಬೆರ್ದಿಯೇವ್ ಎದುರು ಗೆದ್ದರು.

ಮೊದಲ ಸುತ್ತಿನಲ್ಲಿ ಅವರು ರಕ್ಷಣೆಗೆ ಹೆಚ್ಚು ಒತ್ತು ನೀಡಿದರು. ಹಾಗಾಗಿ 2-2 ಪಾಯಿಂಟ್‌ಗಳಿಂದ ಸಮಬಲ ಕಂಡು ಬಂದಿತು. ಆದರೆ ಎರಡನೇ ಸುತ್ತಿನಲ್ಲಿ ಬಲವಾದ ಮುಷ್ಟಿ ಪ್ರಹಾರದ ಮೂಲಕ 7-3ರಲ್ಲಿ ಗೆದ್ದರು. ನಂತರದ ಸುತ್ತಿನಲ್ಲೂ ಸಂಪೂರ್ಣ ಪಾರಮ್ಯ ಮೆರೆದರು. 

 ಈಗಾಗಲೇ ಲೈಟ್‌ವೇಟ್ (60ಕೆ.ಜಿ.) ವಿಭಾಗದಲ್ಲಿ ಜೈ ಭಗವಾನ್, 75 ಕೆ.ಜಿ.ವಿಭಾಗದಲ್ಲಿ ವಿಜೇಂದರ್ ಸಿಂಗ್ ಹಾಗೂ ಲೈಟ್ ಫ್ಲೈವೇಟ್ (49ಕೆ.ಜಿ.) ವಿಭಾಗದಲ್ಲಿ ದೇವೇಂದ್ರೂ ಸಿಂಗ್ ಪ್ರೀ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ವಿಕಾಸ್ ಕೃಷ್ಣನ್ (69 ಕೆ.ಜಿ.) 16ರ ಸುತ್ತಿಗೆ ಬೈ ಪಡೆದಿದ್ದರು. ಶಿವಥಾಪಾ ಹಾಗೂ ಸುಮಿತ್ ಸಾಂಗ್ವಾನ್ ಮಾತ್ರ ಹೊರಬಿದ್ದಿದ್ದಾರೆ. 

 ವಿಜೇಂದರ್ ಹಾಗೂ ಭಗವಾನ್ ಅವರ ಪ್ರೀ ಕ್ವಾರ್ಟರ್ ಫೈನಲ್ ಹೋರಾಟ ಗುರುವಾರ ನಡೆಯಲಿದೆ. ಬೀಜಿಂಗ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ವಿಜೇಂದರ್ ಅಮೆರಿಕದ ಟೆರೆಲ್ ಗೌಶಾ ಅವರನ್ನು ಎದುರಿಸಲಿದ್ದಾರೆ. ಭಗವಾನ್ ಕಜಕಸ್ತಾನದ ಗಾನಿ ಜೈಲಾವುವೊ ಎದುರು ಪೈಪೋಟಿ ನಡೆಸಲಿದ್ದಾರೆ.

ದೇವೇಂದ್ರೂ 16ರ ಘಟ್ಟದ ಹೋರಾಟದಲ್ಲಿ ಶನಿವಾರ ಮಾಂಗೋಲಿಯಾದ ಸೆರ್ದಾಂಬಾ ಪರೆಡೊರ್ಜ್ ಅವರನ್ನು ಎದುರಿಸಲಿದ್ದಾರೆ. ಮೇರಿ ಕೋಮ್ ಅವರ ಮೊದಲ ಬೌಟ್ ಆಗಸ್ಟ್ ಐದರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.