ADVERTISEMENT

ಪ್ರೊ ಕಬಡ್ಡಿ: ಮೋನುಗೆ ದಾಖಲೆ ಮೊತ್ತ

​ಪ್ರಜಾವಾಣಿ ವಾರ್ತೆ
Published 30 ಮೇ 2018, 20:12 IST
Last Updated 30 ಮೇ 2018, 20:12 IST
ಮೋನು ಗೋಯತ್‌
ಮೋನು ಗೋಯತ್‌   

ಮುಂಬೈ: ಹರಿಯಾಣದ ರೈಡರ್‌ ಮೋನು ಗೋಯತ್‌ ಅವರು ಬುಧವಾರ ಪ್ರೊ ಕಬಡ್ಡಿಯಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದರು.

ಆರನೇ ಆವೃತ್ತಿಯ ಆಟಗಾರರ ಹರಾಜಿನಲ್ಲಿ ಅವರು ₹1.51 ಕೋಟಿಗೆ ಮಾರಾಟವಾದರು. ಈ ಮೂಲಕ ಲೀಗ್‌ನಲ್ಲಿ ಅತಿ ಹೆಚ್ಚು ಮೊತ್ತ ಗಳಿಸಿದ ಮೊದಲ ಆಟಗಾರ ಎಂಬ ದಾಖಲೆ ತಮ್ಮದಾಗಿಸಿಕೊಂಡರು.

ಹರಿಯಾಣ ಸ್ಟೀಲರ್ಸ್‌ ಫ್ರಾಂಚೈಸ್‌, ಮೋನು ಅವರನ್ನು ಖರೀದಿಸಿತು. ಹೋದ ವರ್ಷ ಪಟ್ನಾ ಪೈರೇಟ್ಸ್‌ ತಂಡದಲ್ಲಿ ಆಡಿದ್ದ ಮೋನು 202 ಪಾಯಿಂಟ್ಸ್‌ ಕಲೆಹಾಕಿ ಗಮನ ಸೆಳೆದಿದ್ದರು. ಲೀಗ್‌ನಲ್ಲಿ ಒಟ್ಟು 39 ಪಂದ್ಯಗಳನ್ನು ಆಡಿರುವ ಅವರು ಒಟ್ಟು 250 ಪಾಯಿಂಟ್ಸ್‌ ಸಂಗ್ರಹಿಸಿದ್ದಾರೆ.

ADVERTISEMENT

ಈ ವರ್ಷದ ಆರಂಭದಲ್ಲಿ ನಡೆದಿದ್ದ ಫೆಡರೇಷನ್‌ ಕಪ್ ಕಬಡ್ಡಿ ಟೂರ್ನಿಯಲ್ಲಿ ಸರ್ವಿಸಸ್‌ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಮೋನು ಪ್ರಮುಖ ಪಾತ್ರವಹಿಸಿದ್ದರು.

ರಾಹುಲ್‌ ಚೌಧರಿ ಅವರು ಲೀಗ್‌ನಲ್ಲಿ ಎರಡನೇ ಅತಿ ಹೆಚ್ಚು ಮೊತ್ತ ಪಡೆದ ಹಿರಿಮೆ ತಮ್ಮದಾಗಿಸಿಕೊಂಡರು. ದಬಾಂಗ್‌ ಡೆಲ್ಲಿ ತಂಡ ₹1.29 ಕೋಟಿ ನೀಡಿ ರಾಹುಲ್‌ ಅವರನ್ನು ತನ್ನತ್ತ ಸೆಳೆದುಕೊಂಡಿತು.

ನಿತಿನ್‌ ತೋಮರ್‌, ದೀಪಕ್‌ ನಿವಾಸ್‌ ಹೂಡಾ ಮತ್ತು ರಿಷಾಂಕ್‌ ದೇವಾಡಿಗ ಅವರನ್ನೂ ಫ್ರಾಂಚೈಸ್‌ಗಳು ದೊಡ್ಡ ಮೊತ್ತ ನೀಡಿ ಖರೀದಿಸಿದವು.

ದೀಪಕ್‌ ಅವರು ₹1.15 ಕೋಟಿ ಮೊತ್ತಕ್ಕೆ ಜೈಪುರ ಪಿಂಕ್‌ ಪ್ಯಾಂಥರ್ಸ್‌ ಪಾಲಾದರು. ಪುಣೇರಿ ಪಲ್ಟನ್‌ ತಂಡ ಇಷ್ಟೇ ಮೊತ್ತ ನೀಡಿ ನಿತಿನ್‌ ಅವರನ್ನು ತನ್ನದಾಗಿಸಿಕೊಂಡಿತು.

ಮುಂಬೈಯಲ್ಲಿ ನೆಲೆಸಿರುವ ಉಡುಪಿಯ ರಿಷಾಂಕ್‌ ಅವರಿಗೆ ಯು.ಪಿ.ಯೋಧಾ ತಂಡ ₹1.11 ಕೋಟಿ ನೀಡಿ ಖರೀದಿಸಿತು.

ಇರಾನ್‌ನ ಆಟಗಾರ ಫಜೆಲ್‌ ಅತ್ರಾಚಲಿ ಕೂಡ ಕೋಟ್ಯಾ ಧಿಪತಿಯಾದರು. ಅವರನ್ನು ಯು ಮುಂಬಾ ತಂಡ ₹ 1 ಕೋಟಿ ನೀಡಿ ತನ್ನತ್ತ ಸೆಳೆದುಕೊಂಡಿತು.

ಮಂಜೀತ್‌ ಚಿಲಾರ್‌ ಅವರ ಮೇಲೆ ಯಾವ ಫ್ರಾಂಚೈಸ್‌ ಕೂಡ ಬಿಡ್‌ ಮಾಡಲಿಲ್ಲ. ಅವರನ್ನು ತಮಿಳ್‌ ತಲೈವಾಸ್‌ ತಂಡ ಮೂಲ ಬೆಲೆಗೆ (₹20 ಲಕ್ಷ) ಖರೀದಿಸಿತು. ಅನೂಪ್‌ ಕುಮಾರ್‌ ಅವರಿಗೆ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡ ₹30 ಲಕ್ಷ ನೀಡಿತು.

ಕರ್ನಾಟಕದ ಆಟಗಾರ ಜೀವ ಕುಮಾರ್‌ ಅವರು ₹ 40 ಲಕ್ಷಕ್ಕೆ ಯು.ಪಿ.ಯೋಧಾ ತಂಡದ ಪಾಲಾದರು. ದಕ್ಷಿಣ ಕನ್ನಡ ಜಿಲ್ಲೆಯ ರೈಡರ್‌ ಸುಖೇಶ್‌ ಹೆಗ್ಡೆ ಅವರನ್ನು ತಮಿಳ್‌ ತಲೈವಾಸ್‌ ₹28 ಲಕ್ಷ ನೀಡಿ ಖರೀದಿಸಿತು. ನೆಲಮಂಗಲದ ಡಿಫೆಂಡರ್‌ ಜೆ.ದರ್ಶನ್‌ ಕೂಡಾ (₹28 ಲಕ್ಷ) ತಲೈವಾಸ್‌ ತೆಕ್ಕೆಗೆ ಸೇರ್ಪಡೆಯಾದರು.

ರಣ್‌ ಸಿಂಗ್‌ (₹ 43 ಲಕ್ಷ; ಬೆಂಗಾಲ್‌ ವಾರಿಯರ್ಸ್‌), ಕುಲದೀಪ್‌ ಸಿಂಗ್‌ (₹22 ಲಕ್ಷ; ಪಟ್ನಾ ಪೈರೇಟ್ಸ್‌), ಶ್ರೀಕಾಂತ್ ತೆವಾಟಿಯಾ (₹25 ಲಕ್ಷ; ಬೆಂಗಾಲ್‌ ವಾರಿಯರ್ಸ್‌), ಮೋಹಿತ್‌ ಚಿಲಾರ್‌ (₹58 ಲಕ್ಷ, ಜೈಪುರ ಪಿಂಕ್‌ ಪ್ಯಾಂಥರ್ಸ್‌) ಕೂಡ ಫ್ರಾಂಚೈಸ್‌ಗಳ ಗಮನ ಸೆಳೆದರು.

ಬೆಂಗಳೂರು ಬುಲ್ಸ್‌ ತಂಡ ಮೊದಲ ದಿನ ಒಟ್ಟು ಆರು ಮಂದಿಯನ್ನು ಖರೀದಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.