ADVERTISEMENT

ಫುಟ್‌ಬಾಲ್‌: ಈಸ್ಟ್‌ ಬೆಂಗಾಲ್‌ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 19:59 IST
Last Updated 17 ಸೆಪ್ಟೆಂಬರ್ 2013, 19:59 IST

ಕೋಲ್ಕತ್ತ (ಪಿಟಿಐ): ಈಸ್ಟ್‌ ಬೆಂಗಾಲ್‌ ತಂಡದವರು ಮಂಗಳವಾರ ಇಲ್ಲಿ ನಡೆದ ಎಎಫ್‌ಸಿ ಕಪ್‌ (ಮೊದಲ ಹಂತ) ಫುಟ್‌ಬಾಲ್‌ ಟೂರ್ನಿಯ ಕ್ವಾರ್ಟರ್‌ ಫೈನಲ್ಸ್‌ನಲ್ಲಿ ಗೆಲುವು ಸಾಧಿಸಿದರು.

ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಈಸ್ಟ್‌ ಬೆಂಗಾಲ್‌ ತಂಡ 1–0 ಗೋಲಿ­ನಿಂದ ಇಂಡೊನೇಷ್ಯಾದ     ಸೆಮೆನ್‌ ಪದಾಂಗ್‌ ತಂಡವನ್ನು ಸೋಲಿಸಿತು.

ಸುಮಾರು 40 ಸಾವಿರಕ್ಕೂ ಅಧಿಕ ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣದಲ್ಲಿ ಪಂದ್ಯದ 71ನೇ ನಿಮಿಷದಲ್ಲಿ ಬದಲಿ ಆಟಗಾರ ರಿಯುಜಿ ಸುಯೊಕಾ ಚೆಂಡನ್ನು ಗುರಿ ಸೇರಿಸಿದರು.

ಸುಯಾಕೊ 55ನೇ ನಿಮಿಷದಲ್ಲಿ ವಶುಮ್‌ ಬದಲಿಗೆ ಕಣಕ್ಕಿಳಿದಿದ್ದರು. ನೂತನ ಕೋಚ್‌ ಬ್ರೆಜಿಲ್‌ನ ಮಾರ್ಕೊಸ್‌ ಫಲೋಪಾ ಅವರ ಈ ಪ್ರಯೋಗ ಯಶಸ್ವಿಯಾಯಿತು. ಇಂಡೊನೇಷ್ಯಾದ ಪದಾಂಗ್‌ ತಿರುಗೇಟು ನೀಡಲು ಭಾರಿ ಪ್ರಯತ್ನ ಹಾಕಿತು. ಆದರೆ ಯಶಸ್ಸು ಲಭಿಸಲಿಲ್ಲ.

ಈಸ್ಟ್‌ ಬೆಂಗಾಲ್‌ ತಂಡದವರು ಈಗ ಸೆಮಿಫೈನಲ್‌ ಪಂದ್ಯದ ಮೇಲೆ ಕಣ್ಣಿಟ್ಟಿದ್ದಾರೆ. ಈ ತಂಡದವರು ಸೆಪ್ಟೆಂಬರ್‌ 24ರಂದು ಆಗುಸ್‌ ಸಲೀಮ್‌ ಕ್ರೀಡಾಂಗಣದಲ್ಲಿ ನಡೆಯಲಿ­ರುವ ಕ್ವಾರ್ಟರ್‌ ಫೈನಲ್ಸ್‌ (ಎರಡನೇ ಲೆಗ್‌)  ಪಂದ್ಯದಲ್ಲಿ ಆತಿಥೇಯ ಪದಾಂಗ್‌ ಎದುರು ಆಡಲಿದ್ದಾರೆ.

2004–05ರಲ್ಲಿ ಗೋವಾದ ಡೆಂಪೊ ಸ್ಪೋರ್ಟ್‌ ತಂಡದವರು ಈ ಟೂರ್ನಿಯ ಸೆಮಿಫೈನಲ್‌ ತಲುಪಿದ್ದರು. ಅದನ್ನು ಹೊರತುಪಡಿಸದರೆ ಭಾರತದ ಯಾವುದೇ ತಂಡ ನಾಲ್ಕರ ಘಟ್ಟ ತಲುಪಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.