ಬೆಂಗಳೂರು: ಐಟಿಸಿ ಮತ್ತು ಬೆಂಗಳೂರು ರೆಡ್ಸ್ ತಂಡಗಳು ಬಿಡಿಎಫ್‌ಎ ಆಶ್ರಯದಲ್ಲಿ ನಡೆಯುತ್ತಿರುವ `ಸಿ' ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಮಂಗಳವಾರದ ಪಂದ್ಯದಲ್ಲಿ ಗೆಲುವು ಸಾಧಿಸಿದವು.
ಅಶೋಕ ನಗರದಲ್ಲಿರುವ ರಾಜ್ಯ ಫುಟ್‌ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಐಟಿಸಿ 5-1 ಗೋಲುಗಳಿಂದ ಭಾರತ್ ಮಾತಾ ಎದುರು ಜಯದ ನಗೆ ಬೀರಿತು.
ವಿಜಯಿ ತಂಡದ ಸಂದೇಶ್ ಐದನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರೆ, ಅಮರ್‌ನಾಥ್ (21ನೇ ನಿಮಿಷ) ಎರಡನೇ ಗೋಲು ತಂದಿತ್ತರು. ಸೇಂದಿಲ್ 41, 55 ಮತ್ತು 57ನೇ ನಿಮಿಷದಲ್ಲಿ ಗೋಲು ಗಳಿಸಿ ಹ್ಯಾಟ್ರಿಕ್ ಗೌರವಕ್ಕೆ ಪಾತ್ರರಾದರಲ್ಲದೇ ಐಟಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇನ್ನೊಂದು ಪಂದ್ಯದಲ್ಲಿ ರೆಡ್ಸ್ ತಂಡ 5-1 ಗೋಲುಗಳಿಂದ ಬೆಂಗಳೂರು ವಾಂಡರರ್ಸ್ ಎದುರು ಜಯ ಸಾಧಿಸಿತು.
ಆಕಾಶ್ ಐದನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿ, ನಂತರ 37ನೇ ನಿಮಿಷದಲ್ಲಿ ಇನ್ನೊಂದು ಗೋಲನ್ನು ತಂದಿತ್ತರು. ಈ ತಂಡದ ಇನ್ನುಳಿದ ಗೋಲುಗಳನ್ನು ಜಾನ್ಸನ್ (10 ಹಾಗೂ 11ನೇ ನಿಮಿಷ) ಮತ್ತು ರಾಹುಲ್ (48ನೇ ನಿ.) ಗಳಿಸಿ ಬೆಂಗಳೂರು ರೆಡ್ಸ್ ತಂಡದ ಗೆಲುವಿನ ಪಾಲುದಾರರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.