ಮೈಸೂರು: ಪಂದ್ಯದ ಆರಂಭದಿಂದ ಕೊನೆಯವರೆಗೂ ಬಿಗಿ ಹಿಡಿತ ಸಾಧಿಸಿದ ಬೆಂಗಳೂರು ತಂಡದ ವನಿತೆಯರು ಶನಿವಾರ ಮುಕ್ತಾಯವಾದ ಪ್ರಥಮ ಅಂತರ ಜಿಲ್ಲಾ ಮಹಿಳಾ ಫುಟ್‌ಬಾಲ್ ಟೂರ್ನಿಯ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆಯು ಮೈಸೂರು ವಿಶ್ವವಿದ್ಯಾಲ ಯದ ಮೈದಾನದಲ್ಲಿ ಆಯೋಜಿಸಿದ್ದ ಟೂರ್ನಿಯ ಫೈನಲ್‌ನಲ್ಲಿ ಬೆಂಗಳೂರು ತಂಡವು 5–0ಯಿಂದ ಕೊಡಗು ತಂಡದ ವಿರುದ್ಧ ಗೆದ್ದಿತು. ಪ್ರಥಮಾರ್ಧದಲ್ಲಿ ಮೂರು ಮತ್ತು ದ್ವಿತಿಯಾರ್ಧದಲ್ಲಿ ಎರಡು ಗೋಲು ಗಳಿಸಿದ ಬೆಂಗಳೂರು ವನಿತೆಯರು ಕೊಡಗಿನ ಆಟಗಾರ್ತಿಯರ ಯಾವುದೇ ಪ್ರಯತ್ನವೂ ಕೈಗೂಡದಂತೆ ನೋಡಿಕೊಂಡರು.
ಅಮೂಲ್ಯಾ (3ನೇ ನಿಮಿಷ) ಬೆಂಗಳೂರಿನ ಗೋಲು ಖಾತೆ ತೆರೆದರು. ನಂತರ ಗೀತಿಕಾ (13ನಿ, 47ನಿ) ಮತ್ತು ಮಧುಬಾಲಾ (25ನಿ, 49ನಿ) ತಲಾ ಎರಡು ಗೋಲು ಗಳಿಸಿದರು. ಕೊಡಗು ತಂಡದ ಮಾನಸಾ ಜೋಯಪ್ಪ ಚುರುಕಿನ ಆಟ ಪ್ರದರ್ಶಿಸಿದರು. ಆದರೆ, ಗೋಲು ಗಳಿಸಲು ಮಾತ್ರ ಸಾಧ್ಯವಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.