ಲಂಡನ್ (ಎಪಿ/ಐಎಎನ್‌ಎಸ್): ಬಲಿಷ್ಠ ಬ್ರೆಜಿಲ್ ಹಾಗೂ ಮೆಕ್ಸಿಕೊ ತಂಡಗಳು ಒಲಿಂಪಿಕ್ಸ್ ಪುರುಷರ ಫುಟ್‌ಬಾಲ್ ಟೂರ್ನಿಯ ಫೈನಲ್‌ನಲ್ಲಿ ಚಿನ್ನದ ಪದಕಕ್ಕಾಗಿ ಶನಿವಾರ ಪೈಪೋಟಿ ನಡೆಸಲಿವೆ.
ಈ ಪಂದ್ಯ ವೆಂಬ್ಲೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಫುಟ್‌ಬಾಲ್‌ನಲ್ಲಿ ಹಲವು ಸಾಧನೆಗಳಿಗೆ ಕಾರಣವಾಗಿರುವ ಐದು ಬಾರಿಯ ವಿಶ್ವ ಚಾಂಪಿಯನ್ ಬ್ರೆಜಿಲ್ ಒಲಿಂಪಿಕ್ಸ್‌ನಲ್ಲಿ ಇದುವರೆಗೆ ಚಿನ್ನದ ಪದಕ ಗೆದ್ದಿಲ್ಲ.
ರಿವಾಲ್ಡೊ, ರಾಬೆರ್ಟೊ ಕಾರ್ಲೊಸ್, ರೊನಾಲ್ಡೊ ಹಾಗೂ ರೊನಾಲ್ಡಿನೊ ಅವರಂತಹ ಆಟಗಾರರು ಇದ್ದಾಗಲೂ ಈ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ.
ಆದರೆ ಈ ಬಾರಿ ಆ ನಿರಾಸೆಯನ್ನು ಹೋಗಲಾಡಿಸುವ ವಿಶ್ವಾಸದಲ್ಲಿ ಬ್ರೆಜಿಲ್ ತಂಡವಿದೆ. ನೇಮರ್ ಅವರಂಥ ಆಟಗಾರರನ್ನು ಒಳಗೊಂಡಿರುವ ಈ ತಂಡ ಚೊಚ್ಚಲ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದೆ.
ಬ್ರೆಜಿಲ್ 1988ರಲ್ಲಿ ಫೈನಲ್ ತಲುಪಿತ್ತು. ಆದರೆ 1-2ರಲ್ಲಿ ಸೋವಿಯತ್ ಒಕ್ಕೂಟದ ಎದುರು ನಿರಾಸೆ ಅನುಭವಿಸಿತ್ತು. ಆ ತಂಡದಲ್ಲಿ ರೊಮಾರಿಯೊ ಹಾಗೂ ಬೆಬೆಟೊ ಅವರಂತಹ ಶ್ರೇಷ್ಠ ಆಟಗಾರರು ಇದ್ದರು. ಆ ಬಳಿಕ ಇದೇ ಮೊದಲ ಬಾರಿ ಫೈನಲ್‌ನಲ್ಲಿ ಆಡುತ್ತಿದೆ.
ಪೀಲೆ ಉಪಸ್ಥಿತಿ: ಫುಟ್‌ಬಾಲ್ ದಂತಕತೆ ಪೀಲೆ ಈ ಪಂದ್ಯವನ್ನು ವೀಕ್ಷಿಸಲು ಆಗಮಿಸಲಿದ್ದಾರೆ. ಬ್ರೆಜಿಲ್ ಮೂರು ಬಾರಿ ವಿಶ್ವ ಚಾಂಪಿಯನ್ ಆಗಲು ಪೀಲೆ ಕಾರಣರಾಗಿದ್ದರು.
`ಒಲಿಂಪಿಕ್ಸ್‌ನಲ್ಲಿ ಬ್ರೆಜಿಲ್ ಚಿನ್ನ ಗೆದ್ದಿಲ್ಲ ಎಂದು ಜನರು ಹೇಳುತ್ತಾರೆ. ನಾನು 17 ವರ್ಷ ವಯಸ್ಸಿನಲ್ಲಿದ್ದಾಗಲೇ ವಿಶ್ವಕಪ್‌ನಲ್ಲಿ ಆಡಲು ಶುರು ಮಾಡಿದೆ. ನಾನು ವೃತ್ತಿಪರ ಆಟಗಾರನಾದೆ ಆ ಸಮಯದಲ್ಲಿ ವೃತ್ತಿಪರ ಆಟಗಾರರು ಒಲಿಂಪಿಕ್ಸ್ ನಲ್ಲಿಆಡುತ್ತಿರಲಿಲ್ಲ. ಈಗ ಸ್ಥಿತಿ ಹಾಗಿಲ್ಲ.
ಆದ್ದರಿಂದ ಚಿನ್ನ ಗೆಲ್ಲಲು ಸಮಯ ಈಗ ಬಂದಿದೆ. ಚಿನ್ನದ ಪದಕದೊಂದಿಗೆಯೇ ನಾವು ಬ್ರೆಜಿಲ್‌ಗೆ ಹಿಂತಿರುಗಬೇಕು. ಏಕೆಂದರೆ ನಮ್ಮ ಸಾಧನೆಗಳ ಪಟ್ಟಿಯಲ್ಲಿ ಇದರ ಅನುಪಸ್ಥಿತಿ ಕಾಡುತ್ತಿದೆ~ ಎಂದು ಪೀಲೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.