ಢಾಕಾ (ಪಿಟಿಐ): ಬಾಲಾ ದೇವಿ ಗಳಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಭಾರತ ಮಹಿಳಾ ತಂಡದವರು ಇಲ್ಲಿ ನಡೆಯುತ್ತಿರುವ 2012ರ ಲಂಡನ್ ಒಲಿಂಪಿಕ್‌ನ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಪಡೆದು ಶುಭಾರಂಭ ಮಾಡಿದರು.
ಇಲ್ಲಿನ ಬಂಗಬಂಧು ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಭಾರತ 3-0ಗೋಲುಗಳಿಂದ ಆತಿಥೇಯ ಬಾಂಗ್ಲಾದೇಶ ತಂಡವನ್ನು ಮಣಿಸಿ ಎರಡನೇ ಸುತ್ತಿಗೆ ಪ್ರವೇಶಿಸಿತು.
ಪಂದ್ಯದ ದ್ವಿತೀಯಾರ್ಧದಲ್ಲಿ ಮೂರು ಗೋಲು ಗಳಿಸಿದ ಬಾಲಾ ದೇವಿ ಭಾರತ ತಂಡದ ಗೆಲುವಿನ ರೂವಾರಿ ಎನಿಸಿದರು. ಉತ್ತಮ ಸ್ಟ್ರೇಕ್‌ಗಳ ಮೂಲಕ ಗೋಲಿನ ಖಾತೆ ಆರಂಭಿಸಿದ ಮಣಿಪುರದ ಬಾಲಾದೇವಿ 63ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದರು. ನಂತರ ಆರು ನಿಮಿಷದ ಅಂತರದಲ್ಲಿ ಮತ್ತೊಂದು ಗೋಲು ಕಲೆ ಹಾಕಿದರು. 84ನೇ ನಿಮಿಷದಲ್ಲಿಯೂ ಒಂದು ಗೋಲು ತಂದಿತ್ತು ‘ಹ್ಯಾಟ್ರಿಕ್’ ಗೌರವಕ್ಕೆ ಪಾತ್ರರಾದರು. ಭಾರತದ ಪ್ರಬಲ ಪೈಪೋಟಿಯಿಂದ ಒತ್ತಡಕ್ಕೆ ಒಳಗಾದ ಬಾಂಗ್ಲಾ ಯಾವುದೇ ಗೋಲು ಗಳಿಸಲಿಲ್ಲ.
ಮಾರ್ಚ್ 22ರಂದು ಎರಡನೇ ಸುತ್ತಿನ ಪಂದ್ಯವನ್ನು ಆಡಲಿರುವ ಭಾರತ ತಂಡ ಉಜ್ಬೇಕಿಸ್ತಾನದ ಸವಾಲನ್ನು ಎದುರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.