ADVERTISEMENT

ಫುಟ್‌ಬಾಲ್: ಹೊರಬಿದ್ದ ಭಾರತ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2012, 19:30 IST
Last Updated 11 ಮಾರ್ಚ್ 2012, 19:30 IST

ಕಠ್ಮಂಡು (ಪಿಟಿಐ): ಗೆಲುವಿನ ಆಸೆ ಹೊಂದಿದ್ದ ಭಾರತ ಫುಟ್‌ಬಾಲ್ ತಂಡಕ್ಕೆ ಎಎಫ್‌ಸಿ ಚಾಲೆಂಜ್ ಕಪ್ ಟೂರ್ನಿಯಲ್ಲಿ ಮತ್ತೊಂದು ಸೋಲು ಬಂದಪ್ಪಳಿಸಿದೆ. ಆಡಿರುವ ಎರಡೂ ಪಂದ್ಯಗಳಲ್ಲಿ ನಿರಾಸೆ ಕಂಡಿರುವ ತಂಡ ಈಗ ಟೂರ್ನಿಯಿಂದ ಹೊರ ಬಿದ್ದಿದೆ.

ಭಾನುವಾರ ನಡೆದ `ಬಿ~ ಗುಂಪಿನ ಎರಡನೇ ಪಂದ್ಯದಲ್ಲಿ ಫಿಲಿಪ್ಪೀನ್ಸ್ 2-0ಗೋಲುಗಳಿಂದ ಭಾರತವನ್ನು ಸೋಲಿಸಿತು. ಫಿಲಿಪ್ ಜೇಮ್ಸ ಗೆಲುವಿನ ರೂವಾರಿ ಎನಿಸಿದರು. ಈ ಆಟಗಾರ 10ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಇನ್ನೊಂದು ಗೋಲನ್ನು 74ನೇ ನಿಮಿಷದಲ್ಲಿ ತಂದಿಟ್ಟರು. ಮೊದಲ ಪಂದ್ಯದಲ್ಲಿ ತಾಜಿಕಿಸ್ತಾನದ ಎದುರು ಭಾರತ ಸೋಲು ಕಂಡಿತ್ತು.

ಆರಂಭದಿಂದಲೂ ಎರಡೂ ತಂಡಗಳು ಚುರುಕಿನ ಆಟಕ್ಕೆ ಮುಂದಾಗಿದ್ದವು. ಮೊದಲಾರ್ಧದ ವೇಳೆಗೆ ವಿಜಯಿ ತಂಡ ಗೋಲು ಗಳಿಸಿದಾಗ ಭಾರತದ ಪಾಳೆಯದಲ್ಲಿ ಆತಂಕ ಮೂಡಿತ್ತು. ನಂತರವೂ ಸುನಿಲ್ ಚೆಟ್ರಿ ಪಡೆಗೆ ಗೋಲಿನ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಮುಂದಿನ ಪಂದ್ಯದಲ್ಲಿ ಭಾರತ ತಂಡ ಗುರುವಾರ ಕೊರಿಯಾ ಎದುರು ಆಡಲಿದೆ. ಟೂರ್ನಿಯಿಂದ ಹೊರಬಿದ್ದ ಕಾರಣ ಈ ಪಂದ್ಯಕ್ಕೆ ಹೆಚ್ಚಿನ ಮಹತ್ವ ಇಲ್ಲ.

ಫಿಫಾ ರ‌್ಯಾಂಕಿಂಗ್ ಪಟ್ಟಿಯಲ್ಲಿ ಫಿಲಿಪ್ಪಿನ್ಸ್ 156ನೇ ರ‌್ಯಾಂಕ್‌ನಲ್ಲಿದೆ. ಭಾರತ 154ನೇ ರ‌್ಯಾಂಕ್ ಹೊಂದಿದೆ. 1996ರ ದೋಹಾ ಪ್ರೀ ವಿಶ್ವಕಪ್, 2006ರ ಎಎಫ್‌ಸಿ ಚಾಲೆಂಜ್ ಕಪ್ ಹಾಗೂ ಮೆರ್ಡೆಕಾ ಕಪ್‌ನಲ್ಲಿ ಉಭಯ ತಂಡಗಳು ಮೂರು ಸಲ ಮುಖಾಮುಖಿಯಾಗಿದ್ದರೂ ಭಾರತಕ್ಕೆ ಜಯ ಒಲಿದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.