ADVERTISEMENT

ಫೆಡರರ್‌ಗೆ ಆಘಾತ ನೀಡಿದ ಕೊಕ್ಕಿನಾಕಿನ್ಸ್‌

ಏಜೆನ್ಸೀಸ್
Published 25 ಮಾರ್ಚ್ 2018, 19:30 IST
Last Updated 25 ಮಾರ್ಚ್ 2018, 19:30 IST
ಆಸ್ಟ್ರೇಲಿಯಾದ ಥಾನಸಿ ಕೊಕ್ಕಿನಾಕಿನ್ಸ್‌
ಆಸ್ಟ್ರೇಲಿಯಾದ ಥಾನಸಿ ಕೊಕ್ಕಿನಾಕಿನ್ಸ್‌   

ಮಿಯಾಮಿ: ವಿಶ್ವದ ಅಗ್ರ ರ‍್ಯಾಂಕಿಂಗ್ ಆಟಗಾರ ರೋಜರ್ ಫೆಡರರ್‌ ಅವರ ಜಯದ ಓಟವನ್ನು 175ನೇ ರ‍್ಯಾಂಕ್‌ನ ಆಸ್ಟ್ರೇಲಿಯಾದ ಥಾನಸಿ ಕೊಕ್ಕಿನಾಕಿನ್ಸ್‌ ತಡೆಯುವ ಮೂಲಕ ಟೆನಿಸ್ ವಲಯದಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಇಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿದ್ದ ಫೆಡರರ್‌ ಅವರ ಸವಾಲು ಎರಡನೇ ಸುತ್ತಿನಲ್ಲಿಯೇ ಕೊನೆಗೊಂಡಿದೆ. ಸ್ವಿಟ್ಜರ್ಲೆಂಡ್‌ನ ಆಟಗಾರ ಈ ವರ್ಷ ತಮ್ಮ ಅಮೋಘ ಫಾರ್ಮ್‌ನಿಂದ ಎಟಿಪಿ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೆ ಏರಿದ್ದರು. ತಮಗಿಂತ ಕೆಳಗಿನ ರ‍್ಯಾಂಕ್‌ನ ಆಟಗಾರನ ಎದುರು ಸೋತಿದ್ದರಿಂದ ಅಗ್ರಪಟ್ಟವನ್ನು ಅವರು ಕಳೆದುಕೊಂಡಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದ ಪೈಪೋಟಿಯಲ್ಲಿ ಕೊಕ್ಕಿನಾಕಿನ್ಸ್‌ 3–6, 6–3, 7–6ರಲ್ಲಿ 20 ಗ್ರ್ಯಾಂಡ್‌ಸ್ಲಾಮ್‌ ಪ್ರಶಸ್ತಿಗಳ ಒಡೆಯ ಫೆಡರರ್‌ ಎದುರು ಜಯಭೇರಿ ದಾಖಲಿಸಿ ಸಂಭ್ರಮಿಸಿದರು.

ADVERTISEMENT

ಮೊದಲ ಸೆಟ್‌ನಲ್ಲಿ ಮೂರು ಗೇಮ್‌ ಮಾತ್ರ ಗೆದ್ದ ಕೊಕ್ಕಿನಾಕಿನ್ಸ್ ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದರು. ಆದರೆ ಮೂರನೇ ಸೆಟ್‌ನಲ್ಲಿ ಅವರ ಅಪೂರ್ವ ಆಟವನ್ನು ಫೆಡರರ್ ನಿರೀಕ್ಷಿಸಿರಲಿಲ್ಲ. ನಿಖರ ಸ್ಮ್ಯಾಷ್ ಮತ್ತು ರಿಟರ್ನ್‌ಗಳಿಂದ ಸ್ವಿಸ್ ಆಟಗಾರನಿಗೆ ತಬ್ಬಿಬ್ಬುಗೊಳಿಸಿದರು. ಟೈ ಬ್ರೇಕರ್‌ನಲ್ಲಿ ಆಸ್ಟ್ರೇಲಿಯಾದ ಆಟಗಾರ ಗೆಲುವು ಒಲಿಸಿಕೊಂಡರು. ಫೋರ್‌ಹ್ಯಾಂಡ್‌ ಹೊಡೆತಗಳಿಂದ ಕೊಕ್ಕಿನಾಕಿನ್ಸ್ ಗಮನಸೆಳೆದರು.

‘ನಾನು ಯೋಚಿಸಿದ್ದಕ್ಕಿಂತ ಹೆಚ್ಚು ತಾಳ್ಮೆಯಿಂದ ಆಡಿದೆ. ಪಂದ್ಯ ಗೆದ್ದ ಖುಷಿಯನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮುಂದಿನ ಪಂದ್ಯದಲ್ಲಿ ಇದೇ ಆಟ ಮುಂದುವರಿಸಬೇಕು. ಇದರಿಂದ ಮಾತ್ರ ಖುಷಿ ಶಾಶ್ವತವಾಗಿ ಉಳಿಯುತ್ತದೆ ಎಂಬುದು ನನ್ನ ನಂಬಿಕೆ’ ಎಂದು 21 ವರ್ಷದ ಕೊಕ್ಕಿನಾಕಿನ್ಸ್ ಹೇಳಿದ್ದಾರೆ.

‘ಮೊದಲ ಸೆಟ್‌ನಲ್ಲಿ ಫೆಡರರ್‌ ಮೇಲೆ ನಾನು ಯಾವುದೇ ಒತ್ತಡ ಹಾಕಲಿಲ್ಲ. ಆದರೆ ಎರಡನೇ ಸೆಟ್‌ನಲ್ಲಿ ಫೆಡರರ್‌ ಎದುರು ನನಗೆ ಸುಲಭ ಗೆಲುವು ಸಿಕ್ಕಿತು. ಆದರೆ ನಿರ್ಣಾಯಕ ಸೆಟ್‌ನಲ್ಲಿ ನಾನು ಪೈಪೋಟಿ ನೀಡಿದೆ’ ಎಂದು ಅವರು ಹೇಳಿದರು.

ಫೆಡರರ್‌ ಈ ಋತುವಿನ ಆಸ್ಟ್ರೇಲಿಯಾ ಓಪನ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು. ರೋಟೆಡಾಮ್ ಟೂರ್ನಿಯಲ್ಲಿ ಚಾಂಪಿಯನ್ ಆದ ಬಳಿಕ ಫೆಬ್ರುವರಿಯಲ್ಲಿ ಅಗ್ರ ರ‍್ಯಾಂಕಿಂಗ್ ಸ್ಥಾನಕ್ಕೆ ಏರಿದ್ದರು.

‘ಈ ಪಂದ್ಯದಲ್ಲಿ ನನಗೆ ಆಡಲು ಸಾಧ್ಯವಾಗಿಲ್ಲ. ಈ ರೀತಿಯ ಪಂದ್ಯಗಳಿಂದ ನಾವು ಕಲಿಯುವುದು ಸಾಕಷ್ಟು ಇದೆ’ ಎಂದು ಫೆಡರರ್ ಹೇಳಿದ್ದಾರೆ.

ಕೊಕ್ಕಿನಾಕಿನ್ಸ್‌ ಚಿಕ್ಕ ವಯಸ್ಸಿನಲ್ಲಿಯೇ ಗಾಯದ ಸಮಸ್ಯೆ ಅನುಭವಿಸಿದ್ದಾರೆ. 2003ರಲ್ಲಿ ಸ್ಪೇನ್‌ನ ಫ್ಯಾನ್ಸಿಸ್ಕೊ ಕಾಲ್ವೆಟ್‌ ಅವರು 178ನೇ ರ‍್ಯಾಂಕಿಂಗ್ ಸ್ಥಾನದಲ್ಲಿ ಇದ್ದಾಗ ಅಗ್ರ ರ‍್ಯಾಂಕಿಂಗ್ ಆಟಗಾರನಿಗೆ ಸೋಲುಣಿಸಿದ್ದರು. ಆ ಬಳಿಕ ಈ ಸಾಧನೆಯನ್ನು ಕೊಕ್ಕಿನಾಕಿನ್ಸ್ ಮಾಡಿದ್ದಾರೆ.

ಮುಂದಿನ ಪಂದ್ಯದಲ್ಲಿ ಅವರು ಸ್ಪೇನ್‌ನ ಫರ್ನಾಂಡೊ ವರ್ಡಾಸ್ಕೊ ಎದುರು ಆಡಲಿದ್ದಾರೆ. ಜೆಕ್ ಗಣರಾಜ್ಯದ 10ನೇ ಶ್ರೇಯಾಂಕದ ಆಟಗಾರ ಥಾಮಸ್ ಬೆರ್ಡಿಕ್‌ 6–1, 6–4ರಲ್ಲಿ ಜಪಾನ್‌ನ ಯೋಶಿಟೊ ನಿಶಿಯೊಕೊ ಎದುರು ಗೆದ್ದರು.

ಹಲೆಪ್‌ಗೆ ಸೋಲು: ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಆಟಗಾರ್ತಿ ಸಿಮೊನಾ ಹಲೆಪ್‌ ಸೋತಿದ್ದಾರೆ. ಮಹಿಳೆಯರ ಸಿಂಗಲ್ಸ್ ವಿಭಾಗದ ಪೈಪೋಟಿಯಲ್ಲಿ ಪೋಲೆಂಡ್‌ನ ಅಗ್ನಿಸ್ಕಾ ರಾಂಡ್ವಾಸ್ಕಾ ಅವರು 3–6, 6–2, 6–3ರಲ್ಲಿ ಹಲೆಪ್‌ಗೆ ಸೋಲುಣಿಸಿದ್ದಾರೆ.

ಮುಂದಿನ ಪಂದ್ಯದಲ್ಲಿ ಅಗ್ನಿಸ್ಕಾ ಅವರು ವಿಕ್ಟೋರಿಯಾ ಅಜರೆಂಕಾ ಎದುರು ಆಡಲಿದ್ದಾರೆ. ಅಜರೆಂಕಾ 3–6, 6–4, 6–1ರಲ್ಲಿ ಲಾಟ್ವಿಯಾದ ಅನಸ್ತಸಿಜಾ ಸೆವಾಸ್ತೊವಾ ಎದುರು ಗೆದ್ದಿದ್ದಾರೆ.

ಮೂರನೇ ಸುತ್ತಿನಲ್ಲಿ ಗಾರ್ಬೈನ್ ಮುಗುರುಜಾ 6–2, 6–1ರಲ್ಲಿ ಅಮೆರಿಕದ ಕ್ರಿಸ್ಟಿಯಾನಾ ಮೆಕಲೆ ಎದುರು ಗೆದ್ದರು. ಐದನೇ ಶ್ರೇಯಾಂಕದ ಕರೊಲಿನಾ ಪ್ಲಿಸ್ಕೋವಾ 6–4, 1–6, 7–6ರಲ್ಲಿ ತೈವಾನ್‌ನ ಸು ವಿ ವಿರುದ್ಧ ಜಯಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.