ADVERTISEMENT

ಫೈನಲ್‌ಗೆ ಕೋಲ್ಕತ್ತ ನೈಟ್ ರೈಡರ್ಸ್

​ಪ್ರಜಾವಾಣಿ ವಾರ್ತೆ
Published 22 ಮೇ 2012, 19:30 IST
Last Updated 22 ಮೇ 2012, 19:30 IST
ಫೈನಲ್‌ಗೆ ಕೋಲ್ಕತ್ತ ನೈಟ್ ರೈಡರ್ಸ್
ಫೈನಲ್‌ಗೆ ಕೋಲ್ಕತ್ತ ನೈಟ್ ರೈಡರ್ಸ್   

ಪುಣೆ (ಪಿಟಿಐ): ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸತತ ವೈಫಲ್ಯದ ಕಾರಣ ಟೀಕೆಗೆ ಗುರಿಯಾಗಿದ್ದ ಯೂಸುಫ್ ಪಠಾಣ್ ಕೊನೆಗೂ ಮಿಂಚಿದ್ದಾರೆ. ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡದವರು ಡೆಲ್ಲಿ ಡೇರ್‌ಡೆವಿಲ್ಸ್‌ಗೆ 18 ರನ್‌ಗಳಿಂದ ಆಘಾತ ನೀಡಿ, ಫೈನಲ್ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.

ಸುಬ್ರತಾ ರಾಯ್ ಸಹಾರಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಐಪಿಎಲ್ ಟೂರ್ನಿಯ `ಪ್ಲೇಆಫ್~ ಪ್ರಥಮ ಅರ್ಹತಾ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು. ಈ ಸವಾಲಿನ ಗುರಿ ಬೆನ್ನಟ್ಟಿದ ಡೇರ್‌ಡೆವಿಲ್ಸ್ ತನ್ನ ಪಾಲಿನ ಇಪ್ಪತ್ತು ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿ ನಿರಾಸೆ ಹೊಂದಿತು.

ಆದರೆ ಅದು ಫೈನಲ್‌ಗೆ ರಹದಾರಿ ಪಡೆಯಲು ಇನ್ನೊಂದು ಅವಕಾಶವಿದೆ ಎನ್ನುವುದನ್ನು ಮರೆಯುವಂತಿಲ್ಲ. ಸುನಿಲ್ ನಾರಾಯಣ (24ಕ್ಕೆ2) ಬಿಗುವಿನ ಬೌಲಿಂಗ್ ದಾಳಿ ನಡೆಸಿದ್ದು ಡೆವಿಲ್ಸ್ ಸೋಲಿಗೆ ಕಾರಣವಾದ ಇನ್ನೊಂದು ಮಹತ್ವದ ಅಂಶ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಮುಂದಾದ ರೈಡರ್ಸ್‌ಗೆ ಉತ್ತಮ ಆರಂಭ ಲಭಿಸಿತು. ಆದರೆ ಇದನ್ನು ಸದುಪಯೋಗಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಏಕೆಂದರೆ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಗೌತಮ್ ಗಂಭೀರ್ ಹಾಗೂ ಬ್ರೆಂಡನ್ ಮೆಕ್ಲಮ್ ಮೊದಲ ವಿಕೆಟ್‌ಗೆ  35 ಎಸೆತಗಳಲ್ಲಿ 48 ರನ್ ಗಳಿಸಿ ದೊಡ್ಡ ಮೊತ್ತದ ಸೂಚನೆ ನೀಡಿದ್ದರು. ಆದರೆ ಗಂಭೀರ್ (32; 16 ಎ, 3 ಬೌ, 2 ಸಿ.) ರನ್‌ಔಟ್ ಆಗ್ದ್ದಿದು ಎಡವಟ್ಟಿಗೆ ಕಾರಣವಾಯಿತು.

ಮೆಕ್ಲಮ್ ಹಾಗೂ ಜಾಕ್ ಕಾಲಿಸ್ ಕೂಡ ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲರಾದರು. ಆದರೆ ಯೂಸುಫ್ ಪಠಾಣ್ ಹಾಗೂ ಲಕ್ಷ್ಮಿರತನ್ ಶುಕ್ಲಾ  ರೋಚಕ ತಿರುವಿಗೆ ಕಾರಣರಾದರು. ಇವರಿಬ್ಬರು ತಂಡದ ರನ್‌ರೇಟ್ ಹೆಚ್ಚಿಸುವಲ್ಲಿ ಶ್ರಮಿಸಿದರು.

ಹಾಗಾಗಿ ನೈಟ್ ರೈಡರ್ಸ್ 150 ರನ್‌ಗಳ ಗಡಿ ದಾಟಿತು. ಐಪಿಎಲ್ ಹರಾಜಿನಲ್ಲಿ ಒಂಬತ್ತೂವರೆ ಕೋಟಿ ರೂ.ಗೆ ರೈಡರ್ಸ್ ಪಾಲಾಗಿದ್ದ ಯೂಸುಫ್ ಲೀಗ್ ಪಂದ್ಯಗಳಲ್ಲಿ ಸತತ ವೈಫಲ್ಯ ಕಂಡಿದ್ದರು.
ಆದರೂ ನಾಯಕ ಗಂಭೀರ್ ಈ ಆಲ್‌ರೌಂಡರ್‌ನನ್ನು ತಂಡದಿಂದ ಕೈಬಿಟ್ಟಿರಲಿಲ್ಲ.

ಈ ಪಂದ್ಯದಲ್ಲಿ ಅವರು ತಮ್ಮ ಮೇಲೆ ಇಟ್ಟಿದ್ದ ನಂಬಿಕೆಯನ್ನು ಉಳಿಸಿಕೊಂಡರು. ಪಠಾಣ್ ಕೇವಲ 21 ಎಸೆತಗಳಲ್ಲಿ 40 ರನ್ ಗಳಿಸಿದರು. ಅವರ ಬಿರುಸಿನ ಆಟದಲ್ಲಿ 3 ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳಿದ್ದವು.
ಅವರಿಗೆ ಉತ್ತಮ ಬೆಂಬಲ ನೀಡಿದ ಶುಕ್ಲಾ ಕೇವಲ 11 ಎಸೆತಗಳಲ್ಲಿ  24 ರನ್ ಗಳಿಸಿದರು. ಈ ಜೋಡಿ ಕೊನೆಯ 24 ಎಸೆತಗಳಲ್ಲಿ 56 ರನ್ ಕಲೆಹಾಕಿತು.

ಈ ಪಂದ್ಯದಲ್ಲಿ ಸೋಲು ಕಂಡಿದ್ದರೂ ಡೆಲ್ಲಿ ಡೇರ್ ಡೆವಿಲ್ಸ್‌ಗೆ ಯಾವುದೇ ಅಪಾಯವಿಲ್ಲ. ಏಕೆಂದರೆ ಸೋತಿರುವ ಈ ತಂಡಕ್ಕೆ ಇನ್ನೊಂದು ಅವಕಾಶವಿದೆ. ಮೇ 25ರಂದು ಚೆನ್ನೈನಲ್ಲಿ ನಡೆಯಲಿರುವ ಎರಡನೇ ಅರ್ಹತಾ ಪಂದ್ಯದಲ್ಲಿ ಆಡುವ ಅವಕಾಶವಿದೆ. ಬೆಂಗಳೂರಿನಲ್ಲಿ ಬುಧವಾರ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡವು ವೀರೇಂದ್ರ ಸೆಹ್ವಾಗ್ ನಾಯಕತ್ವದ ತಂಡಕ್ಕೆ ಎದುರಾಳಿಯಾಗಿ ನಿಲ್ಲಲಿದೆ.

ಸ್ಕೋರ್ ವಿವರ:
ಕೋಲ್ಕತ್ತ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 162

ಬ್ರೆಂಡನ್ ಮೆಕ್ಲಮ್ ಸಿ ಡೇವಿಡ್ ವಾರ್ನರ್ ಬಿ ಪವನ್ ನೇಗಿ  31
ಗೌತಮ್ ಗಂಭೀರ್ ರನ್‌ಔಟ್ (ವೇಣುಗೋಪಾಲ್ ರಾವ್)  32
ಜಾಕ್ ಕಾಲಿಸ್ ಸಿ ರಾಸ್ ಟೇಲರ್ ಬಿ ಉಮೇಶ್ ಯಾದವ್   30
ಶಕೀಬ್ ಅಲ್ ಹಸನ್ ಸಿ ನಮನ್ ಓಜಾ ಬಿ ಇರ್ಫಾನ್ ಪಠಾನ್   01
ಯೂಸುಫ್ ಪಠಾಣ್ ಔಟಾಗದೆ  40
ಲಕ್ಷ್ಮಿರತನ್ ಶುಕ್ಲಾ ಔಟಾಗದೆ  24
ಇತರೆ: (ಲೆಗ್‌ಬೈ-2, ವೈಡ್-2)  04
ವಿಕೆಟ್ ಪತನ: 1-48 (ಗಂಭೀರ್; 5.5); 2-87 (ಮೆಕ್ಲಮ್; 12.4); 3-91 (ಶಕೀಬ್; 13.4); 4-106 (ಕಾಲಿಸ್; 15.6).
ಬೌಲಿಂಗ್: ಇರ್ಫಾನ್ ಪಠಾಣ್ 4-0-20-1 (ವೈಡ್-1), ಉಮೇಶ್ ಯಾದವ್ 4-0-37-1 (ವೈಡ್-1), ಮಾರ್ನ್ ಮಾರ್ಕೆಲ್ 4-0-37-0, ವರುಣ್ ಆ್ಯರನ್ 4-0-48-0, ಪವನ್ ನೇಗಿ 4-0-18-1.


ಡೆಲ್ಲಿ ಡೇರ್ ಡೆವಿಲ್ಸ್: 20 ಓವರುಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 144
ಡೇವಿಡ್ ವಾರ್ನರ್ ಸಿ ಬ್ರೆಂಡನ್ ಮೆಕ್ಲಮ್ ಬಿ ಶಕೀಬ್ ಅಲ್ ಹಸನ್  07
ವೀರೇಂದ್ರ ಸೆಹ್ವಾಗ್ ಸಿ ಬ್ರೆಂಡನ್ ಮೆಕ್ಲಮ್ ಬಿ ಲಕ್ಷ್ಮೀಪತಿ ಬಾಲಾಜಿ  10
ನಮನ್ ಓಜಾ ಸಿ ಗೌತಮ್ ಗಂಭೀರ್ ಬಿ ರಜತ್ ಭಾಟಿಯಾ  29
ಮಾಹೇಲ ಜಯವರ್ಧನೆ ಸ್ಟಂಪ್ಡ್ ಮೆಕ್ಲಮ್ ಬಿ ಇಕ್ಬಾಲ್ ಅಬ್ದುಲ್ಲಾ  40
ವೈ.ವೇಣುಗೋಪಾಲ್ ರಾವ್ ಸಿ ರಜತ್ ಭಾಟಿಯಾ ಬಿ ಜಾಕ್ ಕಾಲಿಸ್  13
ಪವನ್ ನೇಗಿ ಸ್ಟಂಪ್ಡ್ ಬ್ರೆಂಡನ್ ಮೆಕ್ಲಮ್ ಬಿ ಸುನಿಲ್ ನಾರಾಯಣ  14
ರಾಸ್ ಟೇಲರ್ ಸಿ ದೇವವೃತ ದಾಸ್ ಬಿ ಜಾಕ್ ಕಾಲಿಸ್  11
ಇರ್ಫಾನ್ ಪಠಾಣ್ ಔಟಾಗದೆ  06
ಮಾರ್ನ್ ಮಾರ್ಕೆಲ್ ಸಿ ರಜತ್ ಭಾಟಿಯಾ ಬಿ ಸುನಿಲ್ ನಾರಾಯಣ  00
ಉಮೇಶ್ ಯಾದವ್ ಔಟಾಗದೆ 01
ಇತರೆ: (ಬೈ-4, ಲೆಗ್‌ಬೈ-4, ವೈಡ್-5)  13
ವಿಕೆಟ್ ಪತನ: 1-24 (ಡೇವಿಡ್ ವಾರ್ನರ್; 1.6), 2-24 (ವೀರೇಂದ್ರ ಸೆಹ್ವಾಗ್; 2.1), 3-83 (ನಮನ್ ಓಜಾ; 10.2), 4-108 (ಮಾಹೇಲ ಜಯವರ್ಧನೆ; 14.4), 5-120 (ವೈ.ವೇಣುಗೋಪಾಲ್ ರಾವ್; 16.5), 6-133 (ರಾಸ್ ಟೇಲರ್; 18.5), 7-142 (ಪವನ್ ನೇಗಿ; 19.3), 8-142 (ಮಾರ್ನ್ ಮಾರ್ಕೆಲ್; 19.4).
ಬೌಲಿಂಗ್: ಲಕ್ಷ್ಮೀಪತಿ ಬಾಲಾಜಿ 2-0-11-1 (ವೈಡ್-1), ಶಕೀಬ್ ಅಲ್ ಹಸನ್ 4-0-36-1, ಜಾಕ್ ಕಾಲಿಸ್ 4-0-24-2 (ವೈಡ್-3), ಸುನಿಲ್ ನಾರಾಯಣ 4-0-24-2, ಇಕ್ಬಾಲ್ ಅಬ್ದುಲ್ಲಾ 4-0-25-1, ರಜತ್ ಭಾಟಿಯಾ 2-0-16-1  
ಫಲಿತಾಂಶ: ಕೋಲ್ಕತ್ತ ನೈಟ್ ರೈಡರ್ಸ್‌ಗೆ 18 ರನ್‌ಗಳ ಗೆಲುವು.
ಪಂದ್ಯ ಶ್ರೇಷ್ಠ: ಯೂಸುಫ್ ಪಠಾಣ್ (ಕೋಲ್ಕತ್ತ ನೈಟ್ ರೈಡರ್ಸ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT