ADVERTISEMENT

ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌: ಕ್ವಾರ್ಟರ್‌ಗೆ ಪ್ರಣಯ್‌, ಸಿಂಧು

ಪಿಟಿಐ
Published 27 ಅಕ್ಟೋಬರ್ 2017, 19:55 IST
Last Updated 27 ಅಕ್ಟೋಬರ್ 2017, 19:55 IST
ಸೂಪರ್ ಸರಣಿ ಬ್ಯಾಡ್ಮಿಂಟನ್‌ ಟೂರ್ನಿ
ಸೂಪರ್ ಸರಣಿ ಬ್ಯಾಡ್ಮಿಂಟನ್‌ ಟೂರ್ನಿ   

ಪ್ಯಾರಿಸ್‌: ಗೆಲುವಿನ ಓಟ ಮುಂದುವರಿಸಿರುವ ಎಚ್‌.ಎಸ್‌.ಪ್ರಣಯ್‌ ಮತ್ತು ಪಿ.ವಿ.ಸಿಂಧು ಅವರು ಫ್ರೆಂಚ್‌ ಓಪನ್‌ ಸೂಪರ್ ಸರಣಿ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್‌ ಹಣಾಹಣಿಯಲ್ಲಿ ಪ್ರಣಯ್‌ 21–11, 21–12ರಲ್ಲಿ ಡೆನ್ಮಾರ್ಕ್‌ನ ಹಾನ್ಸ್‌ ಕ್ರಿಸ್ಟಿಯನ್‌ ವಿಟ್ಟಿಂಗಸ್‌ ಅವರನ್ನು ಪರಾಭವಗೊಳಿಸಿದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿರುವ ಪ್ರಣಯ್‌ 31 ನಿಮಿಷಗಳಲ್ಲಿ ಎದುರಾಳಿಯ ಸವಾಲು ಮೀರಿದರು.

ADVERTISEMENT

ಹಿಂದಿನ ಪಂದ್ಯಗಳಲ್ಲಿ ಬಲಿಷ್ಠ ಆಟಗಾರರನ್ನು ಮಣಿಸಿ ವಿಶ್ವಾಸದಿಂದ ಬೀಗುತ್ತಿದ್ದ ಪ್ರಣಯ್‌ ಎರಡೂ ಗೇಮ್‌ಗಳಲ್ಲೂ ಮೋಡಿ ಮಾಡಿದರು.

ಎಂಟರ ಘಟ್ಟದ ಹೋರಾಟದಲ್ಲಿ ಪ್ರಣಯ್‌, ಕೊರಿಯಾದ ಜಿಯಾನ್‌ ಹೈಯೊಕ್‌ ಜಿನ್‌ ವಿರುದ್ಧ ಆಡುವರು.

ಮಹಿಳೆಯರ ಸಿಂಗಲ್ಸ್‌ ವಿಭಾಗದ 16ರ ಘಟ್ಟದ ಹಣಾಹಣಿಯಲ್ಲಿ ಸಿಂಧು 21–14, 21–13ರಲ್ಲಿ ಜಪಾನ್‌ನ ಸಯಾಕ ಟಕಹಶಿ ಅವರನ್ನು ಸೋಲಿಸಿದರು.

ಮುಂದಿನ ಸುತ್ತಿನಲ್ಲಿ ಸಿಂಧುಗೆ ಚೀನಾದ ಚೆನ್‌ ಯುಫಿ ಸವಾಲು ಎದುರಾಗಲಿದೆ. ಡೆನ್ಮಾರ್ಕ್‌ ಓಪನ್‌ನ ಆರಂಭಿಕ ಸುತ್ತಿನಲ್ಲಿ ಯುಫಿ, ಸಿಂಧು ವಿರುದ್ಧ ಗೆದ್ದಿದ್ದರು. ಈ ಸೋಲಿಗೆ ಮುಯ್ಯಿ ತೀರಿಸಿಕೊಳ್ಳಲು ಭಾರತದ ಆಟಗಾರ್ತಿಗೆ ಉತ್ತಮ ಅವಕಾಶ ಸಿಕ್ಕಿದೆ.

ಎಂಟರ ಘಟ್ಟಕ್ಕೆ ಶ್ರೀಕಾಂತ್‌: ಇಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿರುವ ಶ್ರೀಕಾಂತ್‌ ಎರಡನೇ ಸುತ್ತಿನಲ್ಲಿ 21–19, 21–17ರಲ್ಲಿ ಹಾಂಕಾಂಗ್‌ನ ವಾಂಗ್‌ ವಿಂಗ್‌ ಕಿ ವಿನ್ಸೆಂಟ್‌ ಅವರನ್ನು ಮಣಿಸಿ ಎಂಟರ ಘಟ್ಟಕ್ಕೆ ಮುನ್ನಡೆದರು. ಈ ಹೋರಾಟ 37 ನಿಮಿಷ ನಡೆಯಿತು.

ಇನ್ನೊಂದು ಪಂದ್ಯದಲ್ಲಿ ಬಿ.ಸಾಯಿ ಪ್ರಣೀತ್‌ 13–21, 17–21ರಲ್ಲಿ ಜಪಾನ್‌ನ ಕೆಂಟಾ ನಿಶಿಮೊಟೊ ವಿರುದ್ಧ ಪರಾಭವಗೊಂಡರು.

ಪುರುಷರ ಡಬಲ್ಸ್‌ ವಿಭಾಗದಲ್ಲಿ ಭಾರತದ ಸವಾಲು ಎತ್ತಿಹಿಡಿದಿರುವ ಸಾತ್ವಿಕ್‌ ಸಾಯಿರಾಜ್‌ ರಂಕಿರೆಡ್ಡಿ ಮತ್ತು ಚಿರಾಗ್‌ ಸೇನ್‌ ಕ್ವಾರ್ಟರ್ ಫೈನಲ್‌ ಹಂತಕ್ಕೇರಿದರು.

ಎರಡನೇ ಸುತ್ತಿನಲ್ಲಿ ಭಾರತದ ಜೋಡಿ 22–20, 12–21, 21–19ರಲ್ಲಿ ಕೆನಡಾದ ಕಾನ್‌ರಡ್‌ ಪೀಟರ್ಸನ್‌ ಮತ್ತು ಕೋಲ್ಡಿಂಗ್‌ ಅವರಿಗೆ ಆಘಾತ ನೀಡಿತು.

ಸೈನಾ ನೆಹ್ವಾಲ್‌ ಹೋರಾಟ ಎರಡನೇ ಸುತ್ತಿನಲ್ಲಿ ಅಂತ್ಯವಾಯಿತು. ಅವರು 9–21, 21–23ರಲ್ಲಿ ಜಪಾನ್‌ನ ಅಕಾನೆ ಯಮಗುಚಿಗೆ ಶರಣಾದರು.

ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕಿ ರೆಡ್ಡಿ 16–21, 14–21ರಲ್ಲಿ ಜಪಾನ್‌ನ ಮಿಸಾಕಿ ಮತ್ಸುತೊಮೊ ಮತ್ತು ಅಯಾಕ ಟಕಹಶಿ ವಿರುದ್ಧ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.