ADVERTISEMENT

ಫ್ರೆಂಚ್ ಓಪನ್ ಹಣಾಹಣಿ ಇಂದಿನಿಂದ

ಹಾಲಿ ಚಾಂಪಿಯನ್‌ ನಡಾಲ್‌ಗೆ ಮೊದಲ ಸುತ್ತಿನಲ್ಲಿ ಡೊಲ್ಗೊಪೊಲೊವ್ ಎದುರಾಳಿ; ಫೆಡರರ್‌ ಕಣದಲ್ಲಿಲ್ಲ

ಏಜೆನ್ಸೀಸ್
Published 26 ಮೇ 2018, 19:30 IST
Last Updated 26 ಮೇ 2018, 19:30 IST
ಪ್ರದರ್ಶನ ಪಂದ್ಯದ ಸಂದರ್ಭದಲ್ಲಿ ನೊವಾಕ್ ಜೊಕೊವಿಚ್ ಮತ್ತು ರಫೆಲ್ ನಡಾಲ್‌ ಪ್ರೇಕ್ಷಕರತ್ತ ನಗೆ ಸೂಸಿದರು  ರಾಯಿಟರ್ಸ್ ಚಿತ್ರ
ಪ್ರದರ್ಶನ ಪಂದ್ಯದ ಸಂದರ್ಭದಲ್ಲಿ ನೊವಾಕ್ ಜೊಕೊವಿಚ್ ಮತ್ತು ರಫೆಲ್ ನಡಾಲ್‌ ಪ್ರೇಕ್ಷಕರತ್ತ ನಗೆ ಸೂಸಿದರು ರಾಯಿಟರ್ಸ್ ಚಿತ್ರ   

ಪ್ಯಾರಿಸ್‌: ಟೆನಿಸ್ ಪ್ರಪಂಚ ಕಾತರದಿಂದ ಕಾಯುತ್ತಿರುವ ಫ್ರೆಂಚ್ ಓಪನ್ ಟೂರ್ನಿಯ ಮುಖ್ಯ ಸುತ್ತು ಭಾನುವಾರ ಆರಂಭಗೊಳ್ಳಲಿದ್ದು ಹಾಲಿ ಚಾಂಪಿಯನ್‌ ರಫೆಲ್ ನಡಾಲ್‌, ವೀನಸ್ ವಿಲಿಯಮ್ಸ್‌, ಅಲೆಕ್ಸಾಂಡರ್ ಡೊಲ್ಗೊಪೊಲೊವ್‌, ನೊವಾಕ್ ಜೊಕೊವಿಚ್  ಗಮನ ಸೆಳೆಯಲು ಸಜ್ಜಾಗಿದ್ದಾರೆ.

ಮೊದಲ ಮೂರು ದಿನ ಪ್ರಥಮ ಸುತ್ತಿನ ಪಂದ್ಯಗಳು ನಡೆಯಲಿದ್ದು 30 ಮತ್ತು 31 ರಂದು ಎರಡನೇ ಸುತ್ತಿನ ಪಂದ್ಯಗಳು ನಡೆಯಲಿವೆ. ರೋಜರ್ ಫೆಡರರ್, ಚುಂಗ್ ಹ್ಯಾನ್‌, ಫಿಲಿಪ್ ಕ್ರಾಜ್ನೊವಿಚ್‌, ಮಿಲಾಸ್ ರಾನಿಕ್‌ ಮುಂತಾದವರು ಆಡದಿರಲು ನಿರ್ಧರಿಸಿದ್ದಾರೆ.

ಪುರುಷರ ವಿಭಾಗದಲ್ಲಿ ನಡಾಲ್‌ಗೆ ಅಗ್ರಶ್ರೇಯಾಂಕ ನೀಡಲಾಗಿದ್ದು, ಅವರ ಮೊದಲ ಪಂದ್ಯ 54ನೇ ರ‍್ಯಾಂಕ್‌ ಹೊಂದಿರುವ ಅಲೆಕ್ಸಾಂಡರ್ ಡೊಲ್ಗೊಪೊಲೊವ್‌ ವಿರುದ್ಧ ನಡೆಯಲಿದೆ.

ADVERTISEMENT

ಮಹಿಳೆಯರ ವಿಭಾಗದಲ್ಲಿ ರೊಮೇನಿಯಾದ ಸಿಮೋನಾ ಹಲೆಪ್ ಅವರಿಗೆ ಮೊದಲ ಶ್ರೇಯಾಂಕ ನೀಡಲಾಗಿದ್ದು ಡೆನ್ಮಾರ್ಕ್‌ನ ಕರೋಲಿನಾ ವೋಜ್ನಿಯಾಕಿ ಎರಡನೇ ಶ್ರೇಯಾಂಕ ಹೊಂದಿದ್ದಾರೆ.

ಮೊದಲ ದಿನ ಒಟ್ಟು ಆರು ಅಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ. ಪುರುಷರ ಸಿಂಗಲ್ಸ್‌ನ ಮೊದಲ ಪಂದ್ಯದಲ್ಲಿ ಸರ್ಬಿಯಾದ ವಿಕ್ಟರ್‌ ಟ್ರೊಯ್ಕಿ ಬಲ್ಗೇರಿಯಾದ ಗ್ರಿಗರ್‌ ಡಿಮಿಟ್ರೊವ್ ವಿರುದ್ಧ ಸೆಣಸಲಿದ್ದಾರೆ. ನಂತರ ಪ್ರಾನ್ಸ್‌ನ ಲೂಕಾಸ್‌ ಪೌಲಿ ಹಾಗೂ ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ ನಡುವೆ ಹಣಾಹಣಿ ನಡೆಯಲಿದೆ.

ಮಹಿಳೆಯರ ವಿಭಾಗದ ಸಿಂಗಲ್ಸ್‌ನ ಮೊದಲ ಪಂದ್ಯದಲ್ಲಿ ಫ್ರಾನ್ಸ್‌ನ ಅಲಿಜ್‌ ಕಾರ್ನೆಟ್‌ ಇಟಲಿಯ ಸಾರಾ ಎರಾನಿ ಅವರನ್ನು ಎದುರಿಸುವರು. ಎರಡನೇ ಪಂದ್ಯದಲ್ಲಿ ಲಾಟ್ವಿಯಾದ ಜೆಲೆನಾ ಓಸ್ತಪೆಂಕೊ ಉಕ್ರೇನ್‌ನ ಕಾಥೆರಿನಾ ಕೊಜ್ಲೊವಾ ಎದುರು ಸೆಣಸುವರು. ವೀನಸ್ ವಿಲಿಯಮ್ಸ್‌ ಚೀನಾದ ಕ್ವಾಂಗ್ ವಾಂಗ್‌ ಅವರ ಸವಾಲನ್ನು ಎದುರಿಸುವರು.

ಉಕ್ರೇನ್‌ನ ಎಲಿನಾ ಸ್ವಿಟೋಲಿನಾ, ಅಲೆಕ್ಸಾಂಡರ್ ಜ್ವೆರೆವ್‌, ಜೂ ನಿಶಿಕೋರಿ, ಡೇವಿಡ್ ಗೊಫಿನ್‌, ಅನೆಟ್ ಕೊಂತವೇಟ್‌ ಮೊದಲಾದವರು ಕೂಡ ಮೊದಲ ದಿನ ಕಣಕ್ಕೆ ಇಳಿಯುವರು.

ನಡಾಲ್‌, ಯೂಕಿ ಬಾಂಭ್ರಿ
ಎರಡನೇ ದಿನವಾದ ಸೋಮವಾರ ರಫೆಲ್ ನಡಾಲ್ ಮೊದಲ ಪಂದ್ಯ ಆಡಲಿದ್ದಾರೆ. ಭಾರತದ ಯೂಕಿ ಬಾಂಭ್ರಿ ಕೂಡ ಸೋಮವಾರ ಕಣಕ್ಕೆ ಇಳಿಯಲಿದ್ದಾರೆ. ಜೊಕೊವಿಚ್ ಪಂದ್ಯವೂ ಇದೇ ದಿನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.