ADVERTISEMENT

ಬಲಿಷ್ಠ ತಂಡಗಳ ಮುಖಾಮುಖಿ: ಬಪೆ,ಗ್ರೀಜ್‌ಮನ್ ಮೇಲೆ ನಿರೀಕ್ಷೆ

ಫ್ರಾನ್ಸ್‌ ತಂಡಕ್ಕೆ ಆಸ್ಟ್ರೇಲಿಯಾದ ಸವಾಲು

ಏಜೆನ್ಸೀಸ್
Published 15 ಜೂನ್ 2018, 19:30 IST
Last Updated 15 ಜೂನ್ 2018, 19:30 IST

ಕಜಾನ್‌, ರಷ್ಯಾ(ರಾಯಿಟರ್ಸ್‌): ಈ ಬಾರಿಯ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಅತ್ಯುತ್ತಮ ಸಾಮರ್ಥ್ಯ ತೋರಿದ ಎರಡು ಬಲಿಷ್ಠ ತಂಡಗಳ ಹಣಾಹಣಿಗೆ ಇಲ್ಲಿನ ಕಜಾನ ಅರೆನಾ ಕ್ರೀಡಾಂಗಣ ಸಜ್ಜಾಗಿದೆ. ಶನಿವಾರ ನಡೆಯಲಿರುವ ‘ಸಿ’ ಗುಂಪಿನ ಪಂದ್ಯದಲ್ಲಿ ಈ ತಂಡಗಳು ಸೆಣಸಲಿವೆ.

ಮೋಡ ಮುಸುಕಿದ, ತಂಪಾದ ವಾತಾವರಣದಲ್ಲಿ ನಡೆಯಲಿರುವ ಈ ಪಂದ್ಯವನ್ನು ಈ ಬಾರಿಯ ಆರಂಭಿಕ ಹಂತದ ಪ್ರಮುಖ ಪಂದ್ಯಗಳಲ್ಲಿ ಒಂದು ಎಂದೇ ಫುಟ್‌ಬಾಲ್‌ ಪಂಡಿತರು ಪರಿಗಣಿಸಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಹೊಂಡುರಾಸ್ ಎದುರು 3–0ಯಿಂದ ಗೆದ್ದ ನಂತರ ಉತ್ತಮ ಲಯವನ್ನು ಕಾಯ್ದುಕೊಂಡು ಬಂದಿರುವ ಫ್ರಾನ್ಸ್‌ 2016ರ ಯೂರೊ ಕಪ್‌ನಲ್ಲೂ ಅಮೋಘ ಸಾಧನೆ ಮಾಡಿದೆ. ಈ ಟೂರ್ನಿಯ ಫೈನಲ್‌ನಲ್ಲಿ ಪೋರ್ಚುಗಲ್‌ ವಿರುದ್ಧ ತಂಡ ಸೋತಿತ್ತು. ತಂಡದ ಬಪೆ ಮತ್ತು ಗ್ರೀಜ್‌ಮನ್ ಮೇಲೆ ಎಲ್ಲರ ಕಣ್ಣೂ ನೆಟ್ಟಿದ್ದು ಇವರಿಬ್ಬರು ಆಸ್ಟ್ರೇಲಿಯಾದ ರಕ್ಷಣಾ ವಿಭಾಗಕ್ಕೆ ಸವಾಲೆಸೆಯಲು ಸಜ್ಜಾಗಿದ್ದಾರೆ.

ADVERTISEMENT

ಇನ್ನೊಂದೆಡೆ, ಆಸ್ಟ್ರೇಲಿಯಾ ಕೂಡ ಭರವಸೆಯಲ್ಲಿದ್ದು ಮೊದಲ ಪಂದ್ಯದಲ್ಲಿ ಗೆದ್ದು ವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಮುಂದಾಗಿದೆ. ತಂಡದ ಎಲ್ಲ ಆಟಗಾರರೂ ಉತ್ತಮ ಲಯದಲ್ಲಿರುವುದರಿಂದ ಕಣಕ್ಕೆ ಇಳಿಸಬೇಕಾದ 11 ಮಂದಿಯನ್ನು ಆಯ್ಕೆ ಮಾಡುವುದೇ ಕೋಚ್‌ ಬೆರ್ಟ್‌ ವ್ಯಾನ್‌ ಮಾರ್ವಿಕ್ ಅವರಿಗೆ ತಲೆನೋವು ಉಂಟುಮಾಡಲಿದೆ. ತಂಡದ ರಕ್ಷಣಾ ವಿಭಾಗ ಬಲಿಷ್ಠವಾಗಿದೆ. ಆದರೆ ಫಾರ್ವರ್ಡ್ ವಿಭಾಗದ ಚುಕ್ಕಾಣಿ ಹಿಡಿಯುವವರು ಯಾರು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಗಲಿಲ್ಲ. ಆ್ಯಂಡ್ರ್ಯೂ ನಬೋಟ್‌ ಹೆಗಲಿಗೆ ಈ ಹೊಣೆಯನ್ನು ಹೊರಿಸುವ ಸಾಧ್ಯತೆ ಹೆಚ್ಚಿದೆ.

20ನೇ ವರ್ಷಾಚರಣೆ: ಫ್ರಾನ್ಸ್‌ ತಂಡದ 1998ರಲ್ಲಿ ಮೊದಲ ಬಾರಿ ವಿಶ್ವಕಪ್ ಗೆದ್ದಿತ್ತು. ಈ ಅಮೋಘ ಸಾಧನೆಗೆ ಈಗ ಇಪ್ಪತ್ತು ವರ್ಷಗಳು ತುಂಬಿವೆ. ಈ ವರೆಗೆ ಒಮ್ಮೆ ಮಾತ್ರ ಪ್ರಶಸ್ತಿ ಗೆದ್ದು ಒಂದು ಬಾರಿ ರನ್ನರ್ ಅಪ್ ಆಗಿರುವ ತಂಡ ಈ ಬಾರಿ ಇತಿಹಾಸ ಮರುಕಳಿಸುವ ನಿರೀಕ್ಷೆಯಲ್ಲಿದೆ.

ಫ್ರಾನ್ಸ್ ವಿರುದ್ಧ ಗೆಲ್ಲಬೇಕಾದರೆ ಪೂರ್ಣ ಪ್ರಮಾಣದ ಸಾಮರ್ಥ್ಯದಿಂದ ಆಡಬೇಕಾಗಿದೆ. ಅದಕ್ಕೆ ನಮ್ಮ ತಂಡ ಸಜ್ಜಾಗಿದೆ. ಪ್ರೇಕ್ಷಕರ ಬೆಂಬಲ ನನ್ನ ದೊಡ್ಡ ಬಲ.
–ಜಾಕ್ಸನ್ ಇರ್ವಿನ್, ಆಸ್ಟ್ರೇಲಿಯಾದ ಮಿಡ್‌ಫೀಲ್ಡರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.