ಬೆಂಗಳೂರು: ಸತತ ನಾಲ್ಕನೇ ವಿಶ್ವಕಪ್ ಟ್ರೋಫಿಯ ಮೇಲೆ ಕಣ್ಣಿಟ್ಟಿರುವ ಆಸ್ಟ್ರೇಲಿಯಾ ತಂಡ ಪ್ರಸಕ್ತ ಟೂರ್ನಿಯಲ್ಲಿ ಎಲ್ಲ ಪಂದ್ಯಗಳನ್ನೂ ಗಂಭೀರವಾಗಿಯೇ ಪರಿಗಣಿಸಿದೆ. ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಕೀನ್ಯಾ ತಂಡವನ್ನು ಲಘುವಾಗಿ ಪರಿಗಣಿಸಿಲ್ಲ ಎಂದು ಆಸೀಸ್ ನಾಯಕ ರಿಕಿ ಪಾಂಟಿಂಗ್ ನುಡಿದರು.
‘ಎಷ್ಟು ಸಾಧ್ಯವೋ ಅಷ್ಟು ಚೆನ್ನಾದ ರೀತಿಯಲ್ಲಿ ಪಂದ್ಯಕ್ಕಾಗಿ ಸಜ್ಜಾಗಿದ್ದೇವೆ.ಸೊಗಸಾದ ಆಟ ಪ್ರದರ್ಶಿಸುವುದು ನಮ್ಮ ಗುರಿ. ಭಾನುವಾರ ಬಲಿಷ್ಠ ತಂಡವನ್ನೇ ಕಣಕ್ಕಿಳಿಸುವೆವು’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಪಾಂಟಿಂಗ್ ತಿಳಿಸಿದರು.
‘ಟೂರ್ನಿಯಲ್ಲಿ ಕೆಲವೊಂದು ಅಚ್ಚರಿಯ ಫಲಿತಾಂಶಗಳು ದಾಖಲಾಗಿವೆ. ಅಂತಹ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.ನಾವು ಎಂಟು ದಿನಗಳ ವಿಶ್ರಾಂತಿಯ ಬಳಿಕ ಈ ಪಂದ್ಯ ಆಡುತ್ತಿದ್ದೇವೆ. ತಂಡದ ಆಟಗಾರರು ಕಳೆದ ಐದು ದಿನಗಳಿಂದ ಕಠಿಣ ಅಭ್ಯಾಸ ನಡೆಸಿದ್ದಾರೆ. ಈ ರೀತಿಯಾಗಿ ತಾಲೀಮು ನಡೆಸಿದ್ದನ್ನು ನಾನು ನೋಡಿಯೇ ಇಲ್ಲ.ಇದೊಂದು ಧನಾತ್ಮಕ ಅಂಶ. ನಾವು ಯಾವುದೇ ಪಂದ್ಯವನ್ನು ಲಘುವಾಗಿ ಪರಿಗಣಿಸಿಲ್ಲ’ ಎಂದರು.
‘ಬೆಂಗಳೂರಿನಲ್ಲಿ ಆಡುವುದನ್ನು ಇಷ್ಟಪಡುವೆ. ಪಿಚ್ ಕೂಡಾ ಉತ್ತಮವಾಗಿದೆ. ದೊಡ್ಡ ಮೊತ್ತವನ್ನು ನಿರೀಕ್ಷಿಸಬಹುದು.ಟೂರ್ನಿಗೆ ಮುನ್ನ ಇಲ್ಲಿ ಎರಡು ಅಭ್ಯಾಸ ಪಂದ್ಯಗಳನ್ನಾಡಿದ್ದೆವು. ಆ ಪಿಚ್ ಅಷ್ಟೊಂದು ಉತ್ತಮವಾಗಿರಲಿಲ್ಲ. ಇಂಗ್ಲೆಂಡ್- ಐರ್ಲೆಂಡ್ ನಡುವಿನ ಪಂದ್ಯ ನಡೆದ ಅದೇ ಪಿಚ್‌ನಲ್ಲಿ ಭಾನುವಾರ ಆಡಲಿದ್ದೇವೆ’ ಎಂದು ಪಾಂಟಿಂಗ್ ತಿಳಿಸಿದರು.
ಭಾರತ- ಇಂಗ್ಲೆಂಡ್, ಐರ್ಲೆಂಡ್- ಇಂಗ್ಲೆಂಡ್ ತಂಡಗಳ ನಡುವಿನ ಪಂದ್ಯ ರೋಚಕ ಅಂತ್ಯಕಂಡಿತ್ತು. ‘ಈ ಎರಡು ಪಂದ್ಯಗಳು ನಡೆದ ಪಿಚ್ ಅತ್ಯುತ್ತಮವಾಗಿತ್ತು’ ಎಂದು ಅವರು ನುಡಿದರು.‘ಆಸೀಸ್ ತಂಡ ಟೂರ್ನಿಯಲ್ಲಿ ಇನ್ನೂ ಪೂರ್ಣ ಸಾಮರ್ಥ್ಯದೊಂದಿಗೆ ಆಡಿಲ್ಲ. ಆದ್ದರಿಂದ ಭಾನುವಾರ ಅತ್ಯುತ್ತಮ ಅಟ ಪ್ರದರ್ಶಿಸುವೆವು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.