ADVERTISEMENT

`ಬಾಂಗಾ ಬೀಟ್ಸ್ ಕನಸಿನ ತಂಡ'

ಬೆಂಗಳೂರು ಫ್ರಾಂಚೈಸ್‌ನ ಕೋಚ್ ವಿಮಲ್ ಖುಷಿಯ ಮಾತು

​ಪ್ರಜಾವಾಣಿ ವಾರ್ತೆ
Published 22 ಜುಲೈ 2013, 19:59 IST
Last Updated 22 ಜುಲೈ 2013, 19:59 IST

ನವದೆಹಲಿ: `ಬಾಂಗಾ ಬೀಟ್ಸ್ ಫ್ರಾಂಚೈಸ್‌ಗೆ ನಮ್ಮ ಇಚ್ಛೆಯ ಆಟಗಾರರು ಲಭಿಸಿದ್ದಾರೆ. ಇದು ನಮ್ಮ ಕನಸಿನ ತಂಡ. ಚಾಂಪಿಯನ್ ಆಟಗಾರ ಪಿ.ಕಶ್ಯಪ್ ಹರಾಜಿನಲ್ಲಿ ಒಲಿದಿದ್ದು ನಮ್ಮ ಬಲವನ್ನು ಮತ್ತಷ್ಟು ಹೆಚ್ಚಿಸಿದೆ' ಎಂದು ಬೆಂಗಳೂರು ಕೋಚ್ ವಿಮಲ್ ಕುಮಾರ್ ಖುಷಿ ವ್ಯಕ್ತಪಡಿಸಿದರು.

`ಕಶ್ಯಪ್‌ಗಾಗಿಯೇ ನಾವು ಹೆಚ್ಚು ಹಣ ಮೀಸಲಿರಿಸಿದ್ದೆವು. ಪ್ರದ್ಯಾ ಗಾದ್ರೆ ಅವರನ್ನು ಖರೀದಿಸಲು ಪ್ರಯತ್ನಿಸಿದೆವು. ಆದರೆ ಹರಾಜಿನಲ್ಲಿ ಅವರ ಬೆಲೆ ಹೆಚ್ಚುತ್ತಾ ಹೋಯಿತು. ಹಾಗಾಗಿ ಅಪರ್ಣಾ ಬಾಲನ್ ಅವರನು ಖರೀದಿಸಿದೆವು. ಇದು ಕೂಡ ಒಳ್ಳೆಯ ತೀರ್ಮಾನ. ಈ ತಂಡ ಸಮತೋಲನದಿಂದ ಕೂಡಿದೆ' ಎಂದು ಅವರು ಹೇಳಿದರು.

ಬಾಂಗ್ಲಾ ಬೀಟ್ಸ್ ತಂಡದಲ್ಲಿ ಆತಿಥೇಯ ಇಬ್ಬರು ಆಟಗಾರರು ಇದ್ದಾರೆ. ಅವರೆಂದರೆ ಅರವಿಂದ್ ಭಟ್ ಹಾಗೂ ಆದಿತ್ಯ ಪ್ರಕಾಶ್. ಅಷ್ಟು ಮಾತ್ರವಲ್ಲದೇ, ವಿಶ್ವದ ಆರನೇ ರ್‍ಯಾಂಕ್‌ನ ಆಟಗಾರ ಹಾಂಕಾಂಗ್‌ನ ಹು ಯನ್, ಎಂಟನೇ ರ್‍ಯಾಂಕ್‌ನ ಆಟಗಾರ್ತಿ ತಾಯ್ ಜು ಯಿಂಗ್ ಹಾಗೂ ಉದಯೋನ್ಮುಖ ಆಟಗಾರ್ತಿ ಸ್ಪೇನ್‌ನ ಕರೋಲಿನಾ ಮರಿನ್ ಈ ತಂಡದಲ್ಲಿದ್ದಾರೆ.

`ಯನ್, ಯಿಂಗ್ ಹಾಗೂ ಮರೀನ್ ಅವರನ್ನು ಮೂಲಬೆಲೆಗೆ ನಾವು ಖರೀದಿಸಿದೆವು. ಅದು ನಮ್ಮ ಅತ್ಯುತ್ತಮ ನಿರ್ಧಾರ ಎನಿಸುತ್ತಿದೆ. ಇತ್ತೀಚೆಗೆ ಸೈನಾ ಅವರನ್ನು ಯಿಂಗ್ ಸೋಲಿಸಿದ್ದರು. ಹಾಗಾಗಿ ಸಿಂಗಲ್ಸ್ ವಿಭಾಗದಲ್ಲಿ ನಮ್ಮದು ಬಲಿಷ್ಠ ತಂಡ' ಎಂದರು.

`ಹರಾಜಿನಲ್ಲಿ ಸೈನಾ ಹಾಗೂ ಚೋಂಗ್ ಅವರತ್ತ ಎಲ್ಲರೂ ಚಿತ್ತ ಹರಿಸುತ್ತಾರೆ ಎಂಬುದು ನಮಗೆ ಗೊತ್ತಿತ್ತು. ನಮಗೆ ಅವರು ಅಗತ್ಯವಿಲ್ಲ ಎಂಬುದು ಇದರ ಅರ್ಥವಲ್ಲ. ಆದರೆ ನಿಗದಿಪಡಿಸಲಾಗಿದ್ದ ಹಣದ ಮೀತಿಯಲ್ಲಿ ಸಮತೋಲನದಿಂದ ಕೂಡಿರುವ ತಂಡ ಖರೀದಿಸುವುದು ನಮ್ಮ ಗುರಿಯಾಗಿತ್ತು.

ಪ್ರತಿ ತಂಡದ ಎದುರು ಐದು ಪಂದ್ಯಗಳನ್ನುಆಡಬೇಕು. ಅದಕ್ಕೆ ತಕ್ಕಂತೆ ನಾವು ಸಿದ್ಧವಾಗಬೇಕು. ಈಗ ಖರೀದಿಸಿರುವ ಆಟಗಾರರ ಬಗ್ಗೆ ನನಗೆ ತೃಪ್ತಿ ಇದೆ' ಎಂದು ಬಾಂಗಾ ಬೀಟ್ಸ್ ಖರೀದಿಸಿರುವ ಬಿಒಪಿ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಅಮಿತ್ ಮಾವಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.