ADVERTISEMENT

ಬಿಎಸ್‌ಎನ್‌ಎಲ್ ಚಾಂಪಿಯನ್

ಕೆವಿಎಲ್: ಎರಡನೇ ಹಂತದ ಟೂರ್ನಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 19:54 IST
Last Updated 15 ಡಿಸೆಂಬರ್ 2012, 19:54 IST

ಬೆಂಗಳೂರು: ಆಡಿದ ಎಲ್ಲ ಐದು ಪಂದ್ಯಗಳಲ್ಲಿ ಗೆಲುವು ಪಡೆದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್) ತಂಡದವರು ಇಲ್ಲಿ ನಡೆದ ಕರ್ನಾಟಕ ವಾಲಿಬಾಲ್ ಲೀಗ್‌ನ (ಕೆವಿಎಲ್) ಎರಡನೇ ಹಂತದ ಟೂರ್ನಿಯಲ್ಲಿ ಚಾಂಪಿಯನ್ ಆದರು.
ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಬಿಎಸ್‌ಎನ್‌ಎಲ್ ತಂಡ 25-12, 25-21, 25-18 ರಲ್ಲಿ ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್‌ಪಿ) ತಂಡವನ್ನು ಮಣಿಸಿತು. ಈ ಮೂಲಕ ಒಟ್ಟು 14 ಪಾಯಿಂಟ್‌ಗಳ ಮೂಲಕ ಅಗ್ರಸ್ಥಾನ ತನ್ನದಾಗಿಸಿಕೊಂಡಿತು.

11 ಪಾಯಿಂಟ್ ಪಡೆದ ಎಲ್‌ಐಸಿ ಎರಡನೇ ಸ್ಥಾನ ಪಡೆದರೆ, ಇಷ್ಟೇ ಪಾಯಿಂಟ್ ಕಲೆಹಾಕಿದ ಎಎಸ್‌ಸಿ ಮೂರನೇ ಸ್ಥಾನ ಪಡೆಯಿತು. ಎಂಇಜಿ (6 ಪಾಯಿಂಟ್), ಡಿವೈಎಸ್‌ಎಸ್ (3 ಪಾಯಿಂಟ್) ಬಳಿಕದ ಸ್ಥಾನಗಳಲ್ಲಿ ಕಾಣಿಸಿಕೊಂಡರೆ, ಆಡಿದ ಎಲ್ಲ ಪಂದ್ಯಗಳಲ್ಲೂ ಸೋಲು ಅನುಭವಿಸಿದ ಕೆಎಸ್‌ಪಿ ಅಂತಿಮ ಸ್ಥಾನದಲ್ಲಿ ಉಳಿದುಕೊಂಡಿತು.

ವಿಜೇತ ಬಿಎಸ್‌ಎನ್‌ಎಲ್ ತಂಡ ರೂ. 25 ಸಾವಿರ ನಗದು ಬಹುಮಾನ ತನ್ನದಾಗಿಸಿಕೊಂಡರೆ, ಎರಡು ಹಾಗೂ ಮೂರನೇ ಸ್ಥಾನ ಪಡೆದವರಿಗೆ ಕ್ರಮವಾಗಿ ರೂ. 20     ಸಾವಿರ ಹಾಗೂ ರೂ. 15 ಸಾವಿರ ನಗದು ಬಹುಮಾನ ಲಭಿಸಿದವು.ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಎಲ್‌ಐಸಿ 25-21, 21-25, 25-21, 25-15 ರಲ್ಲಿ ಡಿವೈಎಸ್‌ಎಸ್ ವಿರುದ್ಧ ಜಯ ಪಡೆಯಿತು. 78 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ವಿಕ್ರಮ್, ಸತೀಶ್ ಮತ್ತು ದಿನೇಶ್ ವಿಜಯಿ ತಂಡದ ಪರ ಉತ್ತಮ ಪ್ರದರ್ಶನ ನೀಡಿದರು.

ದಿನದ ಕೊನೆಯ ಪಂದ್ಯದಲ್ಲಿ ಎಎಸ್‌ಸಿ 25-23, 25-27, 25-20, 25-18 ರಲ್ಲಿ ಎಂಇಜಿ ತಂಡವನ್ನು ಮಣಿಸಿತು.
ಕೆವಿಎಲ್‌ನ ಮೂರನೇ ಹಂತದ ಟೂರ್ನಿ ಡಿ. 16 ರಿಂದ 20ರ ವರೆಗೆ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ನಡೆಯಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.