ADVERTISEMENT

ಬೀದಿ ದೀಪದಡಿ ಸಚಿನ್‌ ‘ಹೊನಲು’

ಮುಂಬೈ ನಗರದಲ್ಲಿ ಯುವಕರ ಜೊತೆ ರಾತ್ರಿ ವೇಳೆ ಗಲ್ಲಿ ಕ್ರಿಕೆಟ್ ಆಡಿದ ಕ್ರಿಕೆಟ್ ದಿಗ್ಗಜ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 19:30 IST
Last Updated 17 ಏಪ್ರಿಲ್ 2018, 19:30 IST
ಬೀದಿ ದೀಪದಡಿ ಸಚಿನ್‌ ‘ಹೊನಲು’
ಬೀದಿ ದೀಪದಡಿ ಸಚಿನ್‌ ‘ಹೊನಲು’   

ಬೆಂಗಳೂರು: ಸಾವಿರಾರು ಪ್ರೇಕ್ಷಕರ ಮುಂದೆ ಹೊನಲು ಬೆಳಕಿನಲ್ಲಿ ಮೋಹಕ ಬ್ಯಾಟಿಂಗ್ ಮಾಡಿ ಕ್ರಿಕೆಟ್‌ ಪ್ರಿಯರ ಮನಸೂರೆಗೊಂಡ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್‌ ಇತ್ತೀಚೆಗೆ ಮುಂಬೈನಲ್ಲಿ ಬೀದಿ ದೀಪದಡಿ ಕ್ರಿಕೆಟ್‌ ಹೊನಲು ಹರಿಸಿದ್ದಾರೆ.

ರಾತ್ರಿ ವೇಳೆ ಕ್ರಿಕೆಟ್ ಆಡುತ್ತಿದ್ದ ಯುವಕರತ್ತ ತೆರಳಿ ಸಚಿನ್ ಬ್ಯಾಟಿಂಗ್ ಮಾಡಿದ ವಿಡಿಯೊ ಇದೀಗ ವೈರಲ್ ಆಗಿದೆ. ಸಚಿನಿಸ್ಟ್ ಡಾಟ್ ಕಾಮ್ ಎಂಬ ಹೆಸರಿನಲ್ಲಿ ಈ ವಿಡಿಯೊ ಟ್ವಿಟರ್‌ಗೆ ಅಪ್‌ಲೋಡ್ ಆಗಿದೆ. ಸಚಿನ್ ಅವರ ಬಾಲ್ಯದ ಗೆಳೆಯ ಮತ್ತು ಕ್ರಿಕೆಟ್ ಆಟಗಾರ ವಿನೋದ್ ಕಾಂಬ್ಳಿ ಕೂಡ ತಮ್ಮ ಖಾತೆಯಲ್ಲಿ ವಿಡಿಯೊ ಅಪ್‌ಲೋಡ್ ಮಾಡಿದ್ದಾರೆ.

ಸಚಿನ್ ಅವರ ಈ ಉತ್ಸಾಹವನ್ನು ಮೆಚ್ಚಿ ಅನೇಕರು ಟ್ವೀಟ್ ಮಾಡಿದ್ದಾರೆ. ವಿಡಿಯೊ ಅಪ್‌ಲೋಡ್ ಮಾಡಿದ ಕಾಂಬ್ಳಿ ಅವರಿಗೆ ಅಭಿನಂದನೆಯನ್ನೂ ಸಲ್ಲಿಸಿದ್ದಾರೆ. ಮಂಗಳಂ ಮಾಲೂ ಎಂಬುವರು ಇದನ್ನು ‘ದೇವರ ಕೃತ್ಯ’ ಎಂದು ಕರೆದರೆ, ಕಾಮಗಾರಿ ನಡೆಯುತ್ತಿದ್ದ ಜಾಗದಲ್ಲಿ ಸಚಿನ್ ಆಡಿದ್ದು ಅಚ್ಚರಿಯ ಸಂಗತಿ ಎಂದು ಗಾರ್ಗಿ ರಾವತ್‌ ಎಂಬುವರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಬಾಂದ್ರಾದಲ್ಲಿ ಮೆಟ್ರೊ ರೈಲು ಹಳಿಯ ಕಾಮಗಾರಿ ನಡೆಯುತ್ತಿದ್ದ ಜಾಗದಲ್ಲಿ ಯುವಕರು ರಾತ್ರಿವೇಳೆ ಕ್ರಿಕೆಟ್ ಆಡುತ್ತಿದ್ದರು. ರಸ್ತೆ ಸಂಚಾರ ನಿಯಂತ್ರಿಸುವ ಬ್ಯಾರಿಕೇಡ್ ಅವರಿಗೆ ವಿಕೆಟ್ ಆಗಿತ್ತು. ಈ ದಾರಿಯಾಗಿ ಕಾರಿನಲ್ಲಿ ಸಾಗುತ್ತಿದ್ದ ಸಚಿನ್‌, ಯುವಕರು ಆಡುತ್ತಿದ್ದುದನ್ನು ಕಂಡು ಕಾರು ನಿಲ್ಲಿಸುತ್ತಾರೆ.

ಇಳಿದು ಬರುತ್ತಿದ್ದಂತೆ ಅಚ್ಚರಿಗೊಂಡ ಯುವಕರು ಅವರನ್ನು ಮುತ್ತಿಕೊಳ್ಳುತ್ತಾರೆ. ಒಬ್ಬ ಯುವಕ ಸಚಿನ್ ಕಾಲನ್ನು ಮುಟ್ಟಿ ನಮಸ್ಕಾರ ಮಾಡುತ್ತಾನೆ. ಅವರೆಲ್ಲರ ಕ್ಷೇಮ ವಿಚಾರಿಸಿದ ತೆಂಡೂಲ್ಕರ್‌, ಒಬ್ಬನಿಂದ ಬ್ಯಾಟಿಂಗ್ ಪಡೆದುಕೊಂಡು ಆಡಲು ಶುರು ಮಾಡುತ್ತಾರೆ. ಮೊದಲ ಎಸೆತವನ್ನು ಎದುರಿಸಿದ ನಂತರ ಯುವಕರು ಮತ್ತೆ ಅವರೊಂದಿಗೆ ಮಾತನಾಡಲು ಪ್ರಯತ್ನಿಸುತ್ತಾರೆ. ಮಾತನಾಡುತ್ತಲೇ ಸಚಿನ್ ಬ್ಯಾಟಿಂಗ್ ಮುಂದುವರಿಸುತ್ತಾರೆ.

ಅಷ್ಟರಲ್ಲಿ ಆ ದಾರಿಯಾಗಿ ಸಾಗುತ್ತಿದ್ದ ಪ್ರಯಾಣಿಕರು ಕಾರು ನಿಲ್ಲಿಸಿ ‘ಸಚಿನ್‌, ಸಚಿನ್‌...’ ಎಂದು ಕೂಗುತ್ತಾರೆ. ಕೆಲವರು ಇಳಿದು ಬಂದು ಆಟ ನೋಡುತ್ತಾರೆ. ಕೆಲವರು ಸೆಲ್ಫಿ ತೆಗೆದುಕೊಳ್ಳುತ್ತಾರೆ. ಅವರೊಂದಿಗೆ ಕೂಡ ಮಾತನಾಡಿದ ಸಚಿನ್‌ ನಂತರ ಹೊರಟು ಹೋಗುತ್ತಾರೆ. ಅತುಲ್‌ ರಾಣಡೆ ಎಂಬುವರು ಇದನ್ನು ವಿಡಿಯೊ ಮಾಡಿದ್ದಾರೆ.

ಹೆಲ್ಮೆಟ್ ಹಾಕದೆ ವಾಹನ ಚಲಾಯಿಸುವವರನ್ನು ಕಂಡರೆ ಕಾರು ನಿಲ್ಲಿಸಿ ರಸ್ತೆ ಸಂಚಾರದ ನಿಯಮಗಳ ಮಹತ್ವವನ್ನು ಸಾರುವ ಸಚಿನ್ ಬೀದಿಗಿಳಿದು ಕ್ರಿಕೆಟ್ ಆಡಿದ್ದು ಮತ್ತು ಯುವಕರಲ್ಲಿ ಸಂತಸದ ಹೊನಲು ಹರಿಸಿದ್ದು ಕೂಡ ಅನೇಕರ ಅಭಿನಂದನೆಗೆ ಪಾತ್ರವಾಗಿದೆ.

**

ಮಾಸ್ಟ್ರರ್‌ ಬ್ಲಾಸ್ಟರ್‌, ನೀವು ಬಾಲ್ಯದ ದಿನಗಳಂತೆ ಆಡುತ್ತಿರುವುದನ್ನ ನೋಡಲು ತುಂಬ ಖುಷಿಯಾಗುತ್ತದೆ.
ವಿನೋದ್‌ ಕಾಂಬ್ಳಿ, ಸಚಿನ್‌ ಅವರ ಬಾಲ್ಯದ ಗೆಳೆಯ  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.