ADVERTISEMENT

ಬೆಂಗಳೂರಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 19:30 IST
Last Updated 16 ಸೆಪ್ಟೆಂಬರ್ 2011, 19:30 IST

ಧಾರವಾಡ: ಪ್ರಶಸ್ತಿಗೆ ಫೇವರಿಟ್ ಎನಿಸಿದ್ದ ಅಂತರರಾಷ್ಟ್ರೀಯ ಆಟಗಾರರನ್ನು ಹೊಂದಿದ ಬೆಂಗಳೂರು ತಂಡ ಶುಕ್ರವಾರ ಇಲ್ಲಿ ಮುಕ್ತಾಯವಾದ ಎಲ್‌ಐಸಿ ದಕ್ಷಿಣ ಮಧ್ಯ ವಲಯ ವಾಲಿಬಾಲ್ ಟೂರ್ನಿಯಲ್ಲಿ 25-8, 25-12, 25-10ರಿಂದ ವಿಶಾಖಪಟ್ಟಣ ತಂಡವನ್ನು ಪರಾಭವಗೊಳಿಸುವ ಮೂಲಕ ಮತ್ತೆ ಚಾಂಪಿಯನ್‌ಪಟ್ಟ ಅಲಂಕರಿಸಿತು.

ಜಿಲ್ಲಾ ಒಳಾಗಂಣ ಕ್ರೀಡಾಂಗಣದಲ್ಲಿ ಮಧ್ಯಾಹ್ನ ನಡೆದ ಫೈನಲ್ ಪಂದ್ಯದಲ್ಲಿ ಅಂತರರಾಷ್ಟ್ರೀಯ ಆಟಗಾರರಾದ ಟಿ.ಸಿ. ಶ್ರೀಶೇಖರ್ ಹಾಗೂ ಎಂ.ಎನ್. ವಿಕ್ರಂ ಅವರ ಆಕ್ರಮಣಕಾರಿ ಆಟದ ಎದುರು ವಿಶಾಖಪಟ್ಟಣ ತಂಡ ಸಂಪೂರ್ಣ ಸಪ್ಪೆಯಾಗಿ ಕಂಡಿತು. ಬೆಂಗಳೂರು ತಂಡದ ಅದ್ಭುತ ಸ್ಮ್ಯಾಷ್‌ಗಳಿಗೆ `ಬಂದರು ನಗರ~ದ ಹುಡುಗರಿಂದ ಮಾರುತ್ತರವೇ ಇರುತ್ತಿರಲಿಲ್ಲ. ಬೆಂಗಳೂರಿಗರ ಬ್ಲಾಕ್‌ಗಳೂ ಗಮನ ಸೆಳೆದವು.

ಮೂರನೇ ಸ್ಥಾನಕ್ಕೆ ನಡೆದ ಹಣಾಹಣಿಯಲ್ಲಿ ಮೈಸೂರು ತಂಡ 25-12, 25-10, 25-12ರಿಂದ ವಾರಂಗಲ್ ತಂಡವನ್ನು ಪರಾಭವಗೊಳಿಸಿತು. ಕಳೆದ ಸಲ ರನ್ನರ್ಸ್‌ ಅಪ್ ಎನಿಸಿದ್ದ ವಾರಂಗಲ್ ತಂಡ, ಈ ಬಾರಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ದಕ್ಷಿಣ ಮಧ್ಯ ವಲಯದ ಪ್ರಾದೇಶಿಕ ವ್ಯವಸ್ಥಾಪಕ ವಿ.ಬಿ. ಕೃಷ್ಣಮೂರ್ತಿ ಪ್ರಶಸ್ತಿ ವಿತರಿಸಿದರು.

ಗಾಲ್ಫ್: ಭಾರತ ಚಾಂಪಿಯನ್

ಪೆಟಾಲಿಂಗ್ ಜಾಯ, ಮಲೇಷ್ಯ (ಐಎಎನ್‌ಎಸ್): ಬೆಂಗಳೂರಿನ ಅದಿತಿ ಅಶೋಕ್ ಮತ್ತು ತ್ರಿಶೂಲ್ ಚಿನ್ನಪ್ಪ ಅವರ ಪ್ರಭಾವಿ ಪ್ರದರ್ಶನದ ನೆರವಿನಿಂದ ಭಾರತ ತಂಡ ಇಲ್ಲಿ ನಡೆದ ಮಲೇಷ್ಯನ್ ಓಪನ್ ಜೂನಿಯರ್ ಗಾಲ್ಫ್  ಟೂರ್ನಿಯಲ್ಲಿ ಚಾಂಪಿಯನ್ ಆಯಿತು. 

  ಸುಜಾನಾ ಗಾಲ್ಫ್ ಮತ್ತು ಕಂಟ್ರಿ ಕ್ಲಬ್ ಕೋರ್ಸ್‌ನಲ್ಲಿ ನಡೆದ ಟೂರ್ನಿಯಲ್ಲಿ ತ್ರಿಶೂಲ್ ಮತ್ತು ಅದಿತಿ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಎರಡನೇ ಸ್ಥಾನ ತಮ್ಮದಾಗಿಸಿಕೊಂಡರು.

ಬಾಲಕಿಯರ 14 ವರ್ಷ ವಯಸ್ಸಿನೊಳಗಿನವರ ವಿಭಾಗದಲ್ಲಿ ಅದಿತಿ ಅಗ್ರಸ್ಥಾನ ಪಡೆದರು. ಭಾರತ (301) ಇತರ ತಂಡಗಳನ್ನು ಭಾರಿ ಅಂತರದಿಂದ ಹಿಂದಕ್ಕೆ ತಳ್ಳಿ ಚಾಂಪಿಯನ್ ಎನಿಸಿಕೊಂಡಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.