ಬೆಂಗಳೂರು: ಬೇಸ್ ವೈಟ್ ತಂಡ ಹೈವ್ ಸ್ಪೋರ್ಟ್ಸ್ ಯುನೈಟೆಡ್ ಆಶ್ರಯದಲ್ಲಿ ಆರಂಭವಾದ ರಾಷ್ಟ್ರೀಯ ಪೋಲೊ ಟೂರ್ನಿಯ ಪ್ರದರ್ಶನ ಪಂದ್ಯದಲ್ಲಿ ಗೆಲುವು ಪಡೆಯಿತು.
ಎಎಸ್‌ಸಿ ಆರ್ಮಿ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಅನುಜಾ, ಪೃಥ್ವಿ ರಾಠೋಡ್, ಅನಿರುದ್ಧ್ ಸೋನಾಲಿ ಹಾಗೂ ಸಾಗರಿಕಾ ಅವರನ್ನೊಳಗೊಂಡ ವೈಟ್ ತಂಡ 3-2ಗೋಲುಗಳಿಂದ ಬೇಸ್ ಬ್ಲ್ಯಾಕ್ ತಂಡವನ್ನು ಸೋಲಿಸಿತು.
ಬ್ಲ್ಯಾಕ್ ತಂಡದಲ್ಲಿ ರೋಹಿತ್ ರೆಡ್ಡಿ, ಎಸ್.ಎಸ್. ರಾಥೋಡ್, ಖಾದರ್ ಸಿದ್ದಿಕಿ ಹಾಗೂ ನಿಖಿಲ್ ಇದ್ದರು. ವಿಜಯಿ ತಂಡದ ನಾಯಕ ಪೃಥ್ವಿ ಮೂರು ಗೋಲುಗಳನ್ನು ಗಳಿಸಿದರೆ, ಬ್ಲ್ಯಾಕ್ ತಂಡದ ರೋಹಿತ್ ಹಾಗೂ ಖಾದರ್ ತಲಾ ಒಂದು ಗೋಲು ಕಲೆ ಹಾಕಿದರು.
ಸೋಮವಾರ ಪ್ರಧಾನ ಹಂತದ ಪಂದ್ಯಗಳು ಆರಂಭವಾಗಲಿದ್ದು, ಬೇಸ್‌ಕಪ್‌ನ ಫೈನಲ್ ಪಂದ್ಯ ಏಪ್ರಿಲ್ 18ರಂದು ನಡೆಯಲಿದೆ.
ಚಾಲನೆ: ಹೈವ್ ಸ್ಪೋರ್ಟ್ಸ್ ಯುನೈಟೆಡ್ ಕ್ರೀಡಾ ಸಂಸ್ಥೆಯ ಆಶ್ರಯದಲ್ಲಿ ಪೋಲೊ ಟೂರ್ನಿಗೆ ಚಾಲನೆ ದೊರೆಯಿತು. 22ರಿಂದ ಆರಂಭವಾಗುವ ಟ್ರಿನಿಟಿ ಕಪ್ ಆರಂಭವಾಗಲಿದ್ದು, 29ರಂದು ಫೈನಲ್ ಪಂದ್ಯ ನಡೆಯಲಿದೆ.
ಈ ಕ್ರೀಡೆಯ ನಿಯಮಗಳೇನು?: ತಂಡದಲ್ಲಿ ನಾಲ್ಕು ಜನ ಆಟಗಾರರು. ಇದು ಒಟ್ಟು ನಾಲ್ಕು ಅವಧಿಯದ್ದಾಗಿರುತ್ತದೆ. ಮೊದಲ ಮೂರು ಅವಧಿಗೆ 7 ನಿಮಿಷ 30 ಸೆಕೆಂಡ್ ಕಾಲಾವಧಿಯಾದರೆ, ಕೊನೆಯ ಅವಧಿಯ ಸಮಯ 7 ನಿಮಿಷವಾಗಿರುತ್ತದೆ.
ಪ್ರತಿ ಅವಧಿ ಮುಗಿದ ಸೂಚನೆ ನೀಡಲು `ಚೊಕ್ಕರ್~ ಎಂದು ಹೇಳುತ್ತಾರೆ. ಕುದುರೆ ಮೇಲೆ ಕುಳಿತು, ಚೆಂಡನ್ನು ಗುರಿ ಸೇರಿಸಲು ಎರಡೂ ತಂಡಗಳಿಂದ ಪೈಪೋಟಿ ಇರುತ್ತದೆ. ಚೆಂಡು ಗುರಿ ತಲುಪಿದರೆ, ಅದನ್ನು `ಗೋಲು~ ಎಂದು ಹೇಳಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.