ADVERTISEMENT

ಬೋಲ್ಟ್ ದುಬಾರಿ ಪ್ರತಿಮೆ ಉಲ್ಟಾಪಲ್ಟಾ!

​ಪ್ರಜಾವಾಣಿ ವಾರ್ತೆ
Published 19 ಜುಲೈ 2012, 19:30 IST
Last Updated 19 ಜುಲೈ 2012, 19:30 IST
ಬೋಲ್ಟ್ ದುಬಾರಿ ಪ್ರತಿಮೆ ಉಲ್ಟಾಪಲ್ಟಾ!
ಬೋಲ್ಟ್ ದುಬಾರಿ ಪ್ರತಿಮೆ ಉಲ್ಟಾಪಲ್ಟಾ!   

ಲಂಡನ್ (ಐಎಎನ್‌ಎಸ್): ವಿಶ್ವ ಖ್ಯಾತ ವೇಗದ ಓಟಗಾರ ಉಸೇನ್ ಬೋಲ್ಟ್ ಅವರ ಪ್ರತಿಮೆಯನ್ನು ದುಬಾರಿ ವೆಚ್ಚಮಾಡಿ ಸಜ್ಜುಗೊಳಿಸಿ ಅನಾವರಣ ಮಾಡಿದ ಇಲ್ಲಿನ ಬರ್ಮಿಂಗ್‌ಹ್ಯಾಮ್ ನಗರಸಭೆ ಆಡಳಿತವು ಈಗ ಭಾರಿ ಟೀಕೆಗಳನ್ನು ಎದುರಿಸಿದೆ.

ಅದಕ್ಕೆ ಕಾರಣ ಪ್ರತಿಮೆಗೆ ಅಪಾರ ಹಣವನ್ನು ಸುರಿದಿದ್ದಲ್ಲ. ಬದಲಿಗೆ ಪ್ರತಿಮೆಯಲ್ಲಿಯೇ ಆಗಿರುವ ಎಡವಟ್ಟು! ಹೌದು; ಪ್ರತಿಮೆ ಉಲ್ಟಾಪಲ್ಟಾ ಆಗಿದೆ ಎನ್ನುವುದು ಅನಾವರಣಗೊಂಡ ನಂತರ ಅರಿವಾಗಿದೆ.
ಬೋಲ್ಟ್ ಅವರು ಬೀಜಿಂಗ್ ಒಲಿಂಪಿಕ್‌ನಲ್ಲಿ ದಾಖಲೆ ವೇಗದಲ್ಲಿ ಗುರಿಮುಟ್ಟಿ ಸ್ವರ್ಣ ಗೆದ್ದಾಗ ಮಾಡಿದ್ದ ಸಂಕೇತವು ಕ್ರೀಡಾ ಇತಿಹಾಸದ ಸ್ಮರಣೀಯ ಚಿತ್ರಗಳಲ್ಲಿ ಒಂದಾಗಿದೆ. ಅದೇ ರೀತಿಯಲ್ಲಿ ಸಂಕೇತ ಮಾಡಿರುವ ಪ್ರತಿಮೆ ಮಾಡಲು ಬರ್ಮಿಂಗ್‌ಹ್ಯಾಮ್ ಪುರಸಭೆಯು 15,000 ಪೌಂಡ್ (ಸುಮಾರು 11ಲಕ್ಷ ರೂಪಾಯಿ) ವೆಚ್ಚ ಮಾಡಿದೆ.

ಆರು ಅಡಿ ಎತ್ತರದ ಗಟ್ಟಿ ಫೈಬರ್ ಪ್ರತಿಮೆಯು ಬೋಲ್ಟ್ ಅವರು ವಿಜಯ ಸಾಧಿಸಿದಾಗ ತೋರುವ ಸಂಕೇತವನ್ನೇ ಮಾಡಿದ್ದರೂ, ಬೆರಳು ವಿರುದ್ಧ ದಿಕ್ಕಿನಲ್ಲಿ ತೋರಿಸಿದಂತಿದೆ. ಅದೇ ಈಗ ಬರ್ಮಿಂಗ್‌ಹ್ಯಾಮ್ ಪುರಸಭೆ ಅಧಿಕಾರಿಗಳು ಟೀಕೆ ಎದುರಿಸಲು ಕಾರಣವಾಗಿದೆ.

ಆದರೆ ಅಧಿಕಾರಿಗಳು ಮಾತ್ರ ಹಾರಿಕೆ ಉತ್ತರ ನೀಡಿದ್ದಾರೆ. `ಈಗ ಬೆರಳು ಸರಿಯಾದ ಕಡೆಗೆ ತೋರಿಸುತ್ತಿಲ್ಲ ಎಂದು ಹೇಳುವ ಟೀಕಾಕಾರರು ಮುಂದೆ ಈ ಪ್ರತಿಮೆಯು ಬೋಲ್ಟ್ ಅವರಂತೆಯೇ ಇಲ್ಲವೆಂದು ಹೇಳಬಹುದು~ ಎಂದು ಹೇಳಿ ಜಾರಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.