ADVERTISEMENT

`ಬ್ಯಾಟ್ಸ್‌ಮನ್‌ಗಳೇ ಸೋಲಿಗೆ ಕಾರಣ'

ವೇಗದ ಬೌಲರ್‌ಗಳ ಮೇಲೂ ನಾಯಕ ದೋನಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 19:59 IST
Last Updated 17 ಡಿಸೆಂಬರ್ 2012, 19:59 IST

ನಾಗಪುರ: `ಬ್ಯಾಟ್ಸ್‌ಮನ್‌ಗಳ ವೈಫಲ್ಯವೇ ಈ ಸೋಲಿಗೆ ಕಾರಣ. ಜೊತೆಗೆ ವೇಗದ ಬೌಲರ್‌ಗಳು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಲಿಲ್ಲ. ಈ ಸರಣಿ ಸೋಲಿಗೆ ಅವರೇ ಹೊಣೆ' ಎಂದು ನಾಯಕ ಮಹೇಂದ್ರ ಸಿಂಗ್ ದೋನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

`ನಾವು ಈ ಸರಣಿಯಲ್ಲಿ ಬ್ಯಾಟಿಂಗ್‌ನಲ್ಲಿ ಸಂಪೂರ್ಣ ಎಡವಿದೆವು. ವೇಗಿಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ತೋರಲಿಲ್ಲ. ಸ್ಪಿನ್ನರ್‌ಗಳು ಕೊಂಚ ಪರವಾಗಿಲ್ಲ. ಆದರೆ ನಮ್ಮ ಹಾಗೂ ಇಂಗ್ಲೆಂಡ್ ನಡುವಿನ ಮುಖ್ಯ ವ್ಯತ್ಯಾಸ ವೇಗಿ ಆ್ಯಂಡರ್ಸನ್. ಪ್ರವಾಸಿ ತಂಡದ ಈ ವೇಗಿ ಉತ್ತಮ ಪ್ರದರ್ಶನ ತೋರಿದರು. ನಮಗೆ ಸವಾಲಾಗಿ ನಿಂತರು' ಎಂದು ಸರಣಿ ಸೋಲಿನ ಬಳಿಕ ಅವರು ನುಡಿದರು.

ಇತ್ತೀಚಿನ ವರ್ಷಗಳಲ್ಲಿ ಸ್ವದೇಶದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಭಾರತ ಈ ರೀತಿ ಆಡಿದ ಉದಾಹರಣೆ ಇಲ್ಲ. ಅಷ್ಟೇ ಏಕೆ? ಎಂಟು ವರ್ಷಗಳಿಂದ ತವರಿನಲ್ಲಿ ಯಾವುದೇ ತಂಡದ ಎದುರು ಸರಣಿ ಸೋತಿರಲಿಲ್ಲ. ಆದರೆ ಹಿರಿಯ ಆಟಗಾರರ ಬೇಜವಾಬ್ದಾರಿ ಪ್ರದರ್ಶನ ಹಾಗೂ ನಾಯಕ ದೋನಿ ಅವರ ನಾಯಕತ್ವ ವೈಫಲ್ಯ ತಂಡದ ಸೋಲಿನಲ್ಲಿ ಪರ್ಯವಸನಗೊಂಡಿತು.

`ಇಂಗ್ಲೆಂಡ್ ತಂಡದವರು ಒತ್ತಡವನ್ನು ಮೆಟ್ಟಿ ನಿಂತು ಆಡಿದರು. ಪೀಟರ್ಸನ್ ಅವರ ಕೊಡುಗೆ ಅದ್ಭುತ. ಅವರ ರೀತಿಯ ಆಟ ಪಂದ್ಯದ ಫಲಿತಾಂಶವನ್ನೇ ಬದಲಾಯಿಸಿಬಿಡುತ್ತದೆ' ಎಂದರು.

ಈ ಪಂದ್ಯದಲ್ಲಿ ಭಾರತದ ಫೀಲ್ಡಿಂಗ್ ವೈಫಲ್ಯವೂ ಎದ್ದು ಕಂಡಿತು. ಆದರೆ ಅದನ್ನು ಒಪ್ಪಿಕೊಳ್ಳಲು ದೋನಿ ಸಿದ್ಧರಿಲ್ಲ. ಈ ಪಂದ್ಯದಲ್ಲಿ ಹಲವು ರನ್‌ಔಟ್ ಹಾಗೂ ನಾಲ್ಕು ಕ್ಯಾಚ್ ಅವಕಾಶವನ್ನು ಹಾಳು ಮಾಡಿಕೊಂಡರು. ಸೆಹ್ವಾಗ್ ಒಮ್ಮೆ ಸ್ಲಿಪ್‌ನಲಿ ಕ್ಯಾಚ್ ಬಿಟ್ಟು ನಗುತ್ತಿದ್ದರು. ಅವರನ್ನು ನೋಡಿ ಎಷ್ಟು ಮಂದಿ ನಗು ಬೀರಿದರೋ ಗೊತ್ತಿಲ್ಲ!

ನಾಯಕತ್ವ ಶೈಲಿ ಬಗ್ಗೆ ಎದ್ದಿರುವ ಟೀಕೆಗೆ ಪ್ರತಿಕ್ರಿಯಿಸಿದ ಅವರು, `ಹೊರಗೆ ಕುಳಿತು ಟೀಕಿಸುವುದು ಸುಲಭ. ಅಂಗಳದಲ್ಲಿ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನೂ ತಿಳಿಯಬೇಕಾಗುತ್ತದೆ. ನಾನು ಆಕ್ರಮಣಕಾರಿಯಾಗಿ ವರ್ತಿಸುತ್ತಿಲ್ಲ ಎನ್ನುತ್ತಿದ್ದೀರಿ. ಕೆಲವೊಂದು ಸ್ಥಳಗಳಲ್ಲಿ ಕ್ಷೇತ್ರರಕ್ಷಣೆಗೆ ಹೆಚ್ಚು ಒತ್ತು ನೀಡುವುದು ಆಕ್ರಮಣಕಾರಿಯೇ?' ಎಂದರು.

`ದ್ರಾವಿಡ್ ಹಾಗೂ ಲಕ್ಷ್ಮಣ್ ಅನುಪಸ್ಥಿತಿ ಕಾಡುತ್ತಿರುವುದು ನಿಜ. ಹಿರಿಯರ ವಿದಾಯ ಹಾಗೂ ಹೊಸ ಆಟಗಾರರ ಆಗಮನ ತಂಡದಲ್ಲಿ ಬದಲಾವಣೆಗೆ ಕಾರಣವಾಗುತ್ತಿದೆ. ಇದಕ್ಕೆ ಹೊಂದಿಕೊಳ್ಳಲು ಸಮಯ ಹಿಡಿಯುತ್ತದೆ. ಜೊತೆಗೆ ಅವರಂಥ ಆಟಗಾರರ ಸ್ಥಾನ ತುಂಬುವುದು ಕಷ್ಟ. ಅಷ್ಟರವರೆಗೆ ಈಗ ತಂಡದಲ್ಲಿರುವ ಹಿರಿಯ ಆಟಗಾರರು ಹೆಚ್ಚು ಜವಾಬ್ದಾರಿ ತೆಗೆದುಕೊಳ್ಳಬೇಕು' ಎಂದು ದೋನಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.