ಬೆಂಗಳೂರು: ತೇಜಸ್ ಸಂಜಯ್ ಕೆ. ಹಾಗೂ ಅಪೇಕ್ಷಾ ನಾಯಕ್ ಅವರು ಸುರೇಶ್ ಕುಮಾರ್ ಸ್ಮಾರಕ ಎಐಎಸ್‌ಎಸ್ ತ್ರಿ ಸ್ಟಾರ್ ರಾಜ್ಯ ರಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದುಕೊಂಡರು.
ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ ಕೋರ್ಟ್‌ನಲ್ಲಿ ಮಂಗಳವಾರ ನಡೆದ 13 ವರ್ಷದೊಳಗಿನವರ ಬಾಲಕರ ವಿಭಾಗದ ಫೈನಲ್ ಪಂದ್ಯದಲ್ಲಿ ಬೆಳಗಾವಿಯ ತೇಜಸ್ 21-16, 21-19ರಲ್ಲಿ ವಿ. ಕಾರ್ತಿಕ್ ಎದುರು ಗೆಲುವು ಪಡೆದು ಚಾಂಪಿಯನ್ ಆದರು. ಬಾಲಕಿಯರ 15 ವರ್ಷದೊಳಗಿನವರ ವಿಭಾಗದ ಅಂತಿಮ ಘಟ್ಟದ ಹಣಾಹಣಿಯಲ್ಲಿ ಪಿಪಿಬಿಎ ಕ್ಲಬ್‌ನ ಅಪೇಕ್ಷಾ 16-21, 21-9, 21-12ರಲ್ಲಿ ತಮ್ಮದೇ ಕ್ಲಬ್‌ನ ಆಟಗಾರ್ತಿ ಅರ್ಚನಾ ಪೈ ಅವರನ್ನು ಸೋಲಿಸಿದರು.
ಧ್ರುತಿ ಚಾಂಪಿಯನ್: 13 ವರ್ಷದೊಳಗಿನವರ ಬಾಲಕಿಯರ ವಿಭಾಗದ ಸಿಂಗಲ್ಸ್‌ನಲ್ಲಿ ಇಸಿಎ ಕ್ಲಬ್ ಧ್ರುತಿ ಯತೀಶ್ 23-21, 21-16ರಲ್ಲಿ ಇದೇ ಕ್ಲಬ್‌ನ ಶಿವಾನಿ ಎ. ಪಾಠಿ ಎದುರು ಜಯಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಅಕ್ಷಯ್‌ಗೆ ಗೆಲುವು: ಅಕ್ಷಯ್ ಶ್ರೀನಿವಾಸ್ 15 ವರ್ಷದೊಳಗಿನವರ ಬಾಲಕರ ವಿಭಾಗದ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆದರು. ಫೈನಲ್ ಹಣಾಹಣಿಯಲ್ಲಿ ಅಕ್ಷಯ್ 21-17, 15-21, 21-15ರಲ್ಲಿ ನಿಖಿತ್ ಲಕ್ಷ್ಮಣ್ ಅವರನ್ನು ಮಣಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.