ADVERTISEMENT

ಬ್ಯಾಡ್ಮಿಂಟನ್: ಫೈನಲ್‌ಗೆ ಸೈನಾ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2011, 19:30 IST
Last Updated 19 ಮಾರ್ಚ್ 2011, 19:30 IST

ನವದೆಹಲಿ (ಪಿಟಿಐ):  ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ತೋರುತ್ತಿರುವ ಎರಡನೇ  ಶ್ರೇಯಾಂಕದ ಭಾರತದ ಆಟಗಾರ್ತಿ ಸೈನಾ ನೆಹ್ವಾಲ್ ಸ್ವಿಟ್ಜರ್‌ಲೆಂಡ್‌ನಲ್ಲಿ  ನಡೆಯುತ್ತಿರುವ ವಿಲ್ಸನ್ ಸ್ವಿಸ್ ಓಪನ್ ಗ್ರ್ಯಾನ್ ಫ್ರೀ ಗೋಲ್ಡ್  ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ವಿಭಾಗದ ಸಿಂಗಲ್ಸ್‌ನಲ್ಲಿ  ಫೈನಲ್ ಪ್ರವೇಶಿಸಿದ್ದಾರೆ.

ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಹೈದರಾಬಾದಿನ ಸೈನಾ 21-19, 13-21, 21-14ರಲ್ಲಿ  ನಾಲ್ಕನೇ ಶ್ರೇಯಾಂಕದ ದಕ್ಷಿಣ ಕೊರಿಯದ ಆಟಗಾರ್ತಿ ಯೂನ್ ಜೂ ಬೇ ಅವರನ್ನು ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟರು.

ಸೆಮಿಫೈನಲ್ ಪಂದ್ಯದ ಮೊದಲ ಸೆಟ್‌ನಲ್ಲಿ ಸೈನಾ ಭಾರಿ ಪ್ರತಿರೋಧ ಎದುರಿಸಿ ಮುನ್ನಡೆ ಸಾಧಿಸಿದರು. ಆದರೆ ಎರಡನೇ ಸೆಟ್‌ನಲ್ಲಿ ಪ್ರಬಲ ಹೋರಾಟ ನಡೆಸಿದ ಯೂನ್ ಅವರಿಗೆ ಸೈನಾ ಶರಣಾಗಬೇಕಾಯಿತು. ನಿರ್ಣಾಯಕ ಘಟ್ಟದ ಸೆಟ್‌ನಲ್ಲಿ ಎಚ್ಚರಿಕೆಯ ಆಟವಾಡಿದ ಭಾರತದ ಆಟಗಾರ್ತಿ ಮತ್ತೆ ಲಯ ಕಂಡುಕೊಂಡು ಕರಾರುವಕ್ಕಾದ ‘ಶಾಟ್’ಗಳ ಮೂಲಕ  ಸುಲಭವಾಗಿಯೇ ಯೂನ್ ಅವರನ್ನು ಕಟ್ಟಿ ಹಾಕಿದರು.

ಇದಕ್ಕೂ ಮುನ್ನ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಸೈನಾ 21-12, 21-11ರಲ್ಲಿ ಬಲ್ಗೇರಿಯಾದ ಪಿಟಿಯಾ ನೆಡಲ್ಚೇವಾ ಅವರನ್ನು ಸುಲಭವಾಗಿ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ್ದರು. ಎರಡೂ ಸೆಟ್‌ನಲ್ಲಿಯೂ ಚಾಕಚಕ್ಯತೆಯ ಆಟವಾಡಿದ ಸೈನಾ  ಎದುರಾಳಿ ಆಟಗಾರ್ತಿಯನ್ನು ಸುಲಭವಾಗಿ ಕಟ್ಟಿ ಹಾಕಿ  ನಾಲ್ಕರ ಘಟ್ಟಕ್ಕೆ ಮುನ್ನಡೆದಿದ್ದರು. ಎರಡನೇ ಸುತ್ತಿನಲ್ಲಿ ಸೈನಾ ಜಪಾನ್‌ನ ಈರಿಕೋ ಹಿರೋಸೆ  ಅವರನ್ನು ಮಣಿಸಿ ಎಂಟರಘಟ್ಟಕ್ಕೆ ಪ್ರವೇಶ ಪಡೆದಿದ್ದರು.

ಪುರುಷರ ಸಿಂಗಲ್ಸ್‌ನ ಎಂಟರಘಟ್ಟದ ಪಂದ್ಯದಲ್ಲಿ ಭಾರತದ ಅಜಯ್ ಜಯರಾಮನ್ 19-21, 19-21ರಲ್ಲಿ ದಕ್ಷಿಣ ಕೊರಿಯದ ಹವಾನ್ ಪಾರ್ಕ್ ಎದುರು ಪರಾಭವಗೊಂಡರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.