ADVERTISEMENT

ಬ್ಯಾಸ್ಕೆಟ್‌ಬಾಲ್‌ನಲ್ಲಿ ವಿವಾದದ ಕಾವು

ಪೇಟ ಧರಿಸದಂತೆ ಸಿಖ್‌ ಆಟಗಾರರನ್ನು ತಡೆದ ಘಟನೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2014, 19:30 IST
Last Updated 23 ಜುಲೈ 2014, 19:30 IST

ನವದೆಹಲಿ (ಪಿಟಿಐ): ಫಿಬಾ ಏಷ್ಯಾ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ ಷಿಪ್‌ನ ಪಂದ್ಯದ ವೇಳೆ ಭಾರತದ ಸಿಖ್‌ ಆಟಗಾರರಿಗೆ  ಪೇಟ ಧರಿಸಿ ಆಡಲು ಅವಕಾಶ ನೀಡದ ಘಟನೆ ಈಗ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.

ಈ ಘಟನೆಯನ್ನು ಕ್ರೀಡಾ ಸಚಿವಾಲಯ ಗಂಭೀರವಾಗಿ ಪರಿಗಣಿಸಿದೆ. ದೋಹಾದಲ್ಲಿ ಗುರುವಾರ ನಡೆಯಲಿರುವ ಫಿಬಾ  ಏಷ್ಯಾ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಲು ಭಾರತ ನಿರ್ಧರಿಸಿದೆ. ಸಭೆಯಲ್ಲಿ ಪಾಲ್ಗೊಳ್ಳಲಿರುವ ಭಾರತ ಬ್ಯಾಸ್ಕೆಟ್‌ಬಾಲ್‌ ಫೆಡರೇಷನ್‌ನ ಹಿರಿಯ ಉಪಾಧ್ಯಕ್ಷ ಕೆ. ಗೋವಿಂದರಾಜ್‌ ಅವರು ವಿಷಯವನ್ನು ಸಭೆಯ ಮುಂದಿಡಲಿದ್ದಾರೆ.

ಚೀನಾದಲ್ಲಿ ಜುಲೈ 12ರಂದು ನಡೆದ ಏಷ್ಯಾ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಜಪಾನ್‌ ಎದುರಿನ ಪಂದ್ಯದ ವೇಳೆ ಈ ಘಟನೆ ನಡೆದಿತ್ತು. ಪೇಟ ಹಾಕಿಕೊಂಡಿದ್ದ ಭಾರತ ತಂಡದ ಅಮೃತ್‌ಪಾಲ್‌ ಸಿಂಗ್‌ ಮತ್ತು ಅಮ್‌ಜ್ಯೋತ್‌ ಸಿಂಗ್‌ ಅವರಿಗೆ ಬ್ಯಾಸ್ಕೆಟ್‌ಬಾಲ್‌ ಅಂಕಣದೊಳಗೆ ಪ್ರವೇಶಿಸದಂತೆ ತಾಕೀತು ಮಾಡಲಾಗಿತ್ತು.

‘ಈ ಘಟನೆ ಕುರಿತು ವಿವರ ನೀಡುವಂತೆ ಅಂತರರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌ ಫೆಡರೇಷನ್‌ಗೆ ಪತ್ರ ಬರೆದಿದ್ದೇವೆ. ಉತ್ತರಕ್ಕಾಗಿ ಕಾಯುತ್ತಿದ್ದೇವೆ’ ಬಿಎಫ್‌ಐ ವಕ್ತಾರರು ತಿಳಿಸಿದ್ದಾರೆ.

‘ಪೇಟ ಧರಿಸುವುದರಿಂದ ಆಟದ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ. ಈ ಬಗ್ಗೆ ಅಂತರರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಇದುವರೆಗೆ ಯಾವ ಆಕ್ಷೇಪವೂ ಕೇಳಿ ಬಂದಿರಲಿಲ್ಲ. ಚೀನಾದಲ್ಲಿ ನಡೆದ ಘಟನೆ ತಿಳಿದು ಅಚ್ಚರಿಯಾಗಿದೆ’ ಎಂದು ಕೇಂದ್ರ ಕ್ರೀಡಾ ಸಚಿವ ಸರ್ಬಾನಂದ ಸೊನೊವಾಲ್‌ ಹೇಳಿದ್ದಾರೆ.

‘ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ ವಿವಿಧ ಕ್ರೀಡಾ ಫೆಡರೇಷನ್‌ ಗಳಿಗೆ  ಈ ಬಗ್ಗೆ ಸಲಹೆ ಸೂಚನೆಗಳನ್ನು ನೀಡಬೇಕು. ಇನ್ನೊಮ್ಮೆ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ನಮ್ಮ ಸರ್ಕಾರ ಎಲ್ಲಾ ಧರ್ಮದವರನ್ನು ಸಮಾನವಾಗಿ ಕಾಣುತ್ತದೆ. ಯಾರ ಮನಸ್ಸು ನೋಯಿಸದಂತೆ ನೋಡಿಕೊಳ್ಳಬೇಕು’ ಎಂದು ಅವರು ನುಡಿದಿದ್ದಾರೆ.

‘ಈ ಘಟನೆಯಿಂದ ನನಗೆ ತುಂಬಾ ಅವಮಾನವಾಗಿದೆ. ಯಾವಾ ಗಲೂ ನಾನು ಪೇಟ ಧರಿಸಿಕೊಂಡೇ ಆಡುತ್ತೇನೆ. ಇದೇ ಮೊದಲ ಬಾರಿ ಇಂತಹದ್ದೊಂದು ಘಟನೆ ನಡೆದಿದೆ’ ಎಂದು ಅಮ್‌ ಜ್ಯೋತ್‌ ಸಿಂಗ್‌ ಬೇಸರ ತೋಡಿಕೊಂಡಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಖ್ಯಾತ ಅಥ್ಲೀಟ್‌ ಮಿಲ್ಖಾ ಸಿಂಗ್ ‘ಇದೊಂದು ಗಂಭೀರ ಪ್ರಕರಣ’ ಎಂದಿದ್ದಾರೆ. ‘ನನ್ನ ಕ್ರೀಡಾ ಜೀವನ ದಲ್ಲಿ ಸಾಕಷ್ಟು ದೇಶಗಳನ್ನು ಸುತ್ತಿ ಬಂದಿ ದ್ದೇನೆ. ಯಾವತ್ತೂ ಪೇಟ ವನ್ನು ತೆಗೆದಿರಲಿಲ್ಲ. ಹಾಕಿ ಸೇರಿದಂತೆ ಯಾವುದೇ ಕ್ರೀಡೆಯಲ್ಲಿ ಸಿಖ್‌ ಆಟಗಾರರು ಯಾವತ್ತೂ ಪೇಟ ತೆಗೆಯಬೇಕೆಂಬ ಒತ್ತಡವನ್ನು ಎದು ರಿಸಿದ  ಉದಾಹರಣೆಗಳಿಲ್ಲ’ ಎಂದೂ ಮಿಲ್ಖಾ ಸಿಂಗ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.