ADVERTISEMENT

ಭಜ್ಜಿಗೆ ಗೇಲ್ ಘರ್ಜನೆಯ ಭಯ

​ಪ್ರಜಾವಾಣಿ ವಾರ್ತೆ
Published 13 ಮೇ 2012, 19:30 IST
Last Updated 13 ಮೇ 2012, 19:30 IST
ಭಜ್ಜಿಗೆ ಗೇಲ್ ಘರ್ಜನೆಯ ಭಯ
ಭಜ್ಜಿಗೆ ಗೇಲ್ ಘರ್ಜನೆಯ ಭಯ   

ಬೆಂಗಳೂರು:  `ಆರ್‌ಸಿಬಿ~ ಬೆಂಬಲಿಗರ ಹೃದಯದಲ್ಲಿ `ಗೇಲ್...ಗೇಲ್...~ ನಿನಾದ. `ಭಜ್ಜಿ~ ಬಳಗದ ಎದೆಯಲ್ಲಿ ಮಾತ್ರ `ಝಲ್...ಝಲ್...~ ಸದ್ದು!

ವಿಂಡೀಸ್ ದೈತ್ಯ ಬ್ಯಾಟ್ಸ್‌ಮನ್ ಅಬ್ಬರಿಸಿದರೆ ಅಪಾಯ ಖಚಿತವೆಂದೇ ಮುಂಬೈ ಇಂಡಿಯನ್ಸ್ ಭಯದಿಂದ ಬೆದರಿದೆ. ಬೌಂಡರಿ-ಸಿಕ್ಸರ್‌ಗಳ ಆರ್ಭಟ ಸಾಧ್ಯವೆನ್ನುವ ಯೋಚನೆಯಿಂದಲೇ ಅದು ಹೆದರಿದೆ.

ಲಸಿತ್ ಮಾಲಿಂಗನ ಕವಣಿ ಕಲ್ಲು ಎಸೆತಕ್ಕೂ ಭರ್ಜರಿ ಹೊಡೆತದ ಉತ್ತರ ನೀಡುವ ತಾಕತ್ತು ಕ್ರಿಸ್ ಗೇಲ್‌ಗೆ ಇದೆ. ಆದ್ದರಿಂದಲೇ ಈ ಕುತ್ತು ಸೋಲಾಗಿ ಕತ್ತು ಸುತ್ತಿಕೊಳ್ಳದಿರಲಿ ಎನ್ನುವುದೇ ಹರಭಜನ್ ಸಿಂಗ್ ಆಶಯ. ಆದರೂ ತೇಲಿಬಿಡುವ ಮಾತಲ್ಲಿ `ಗೇಲ್ ವಿರುದ್ಧದ ಪಂದ್ಯವಿದಲ್ಲ~ ಎಂದು ಮಂತ್ರ ಪಠಣ ಮಾಡುವುದನ್ನು ಬಿಡುವುದಿಲ್ಲ.

ಸಚಿನ್ ತೆಂಡೂಲ್ಕರ್ ಇದ್ದಾರೆಂದು ಧೈರ್ಯದಿಂದ ಹೇಳುವ ಗೊಡವೆಗಂತೂ ಹೋಗುವುದೇ ಇಲ್ಲ ಇಂಡಿಯನ್ಸ್ ನಾಯಕ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದಾಳು ಡೇನಿಯಲ್ ವೆಟೋರಿಗೆ ಗೇಲ್ ಎನ್ನುವ ಬ್ಯಾಟಿಂಗ್ `ಸೂಪರ್ ಪವರ್~ ತಮ್ಮಲ್ಲಿರುವ ಹೆಮ್ಮೆ. ಏಕಾಂಗಿಯಾಗಿ ಹೋರಾಡಿ ಪಂದ್ಯ ಗೆಲ್ಲಿಸಿಕೊಡುವ ತಾಕತ್ತಿನ `ಗೇಲ್ ಸ್ಟಾರ್ಮ್~ ಖ್ಯಾತಿಗೆ ತಕ್ಕಂತೆಯೇ ಎದುರಾಳಿ ಬೌಲರ್‌ಗಳ ಪಾಲಿಗೆ ಬಿರುಗಾಳಿ.

ಇಂಥ ಬ್ಯಾಟಿಂಗ್ ಶಕ್ತಿಗೆ ತಡೆಯೊಡ್ಡಿ ಗೆಲುವಿನ ದಿಡ್ಡಿಬಾಗಿಲು ತೆರೆಯಬೇಕು. ಅದೇ ಸೋಮವಾರ ಇಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಿಯ ಐದನೇ ಅವತರಣಿಕೆಯ 62ನೇ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ಗೆ ಎದುರಾಗಲಿರುವ ದೊಡ್ಡ ಸವಾಲು. ಆತಿಥೇಯ ಚಾಲೆಂಜರ್ಸ್‌ನ ವಿರಾಟ್ ಕೊಹ್ಲಿ ಕೂಡ ಹರಭಜನ್ ಬಳಗದ ಸಂಕಷ್ಟ ಹೆಚ್ಚಿಸಬಲ್ಲ ಯುವ ಬ್ಯಾಟ್ಸ್‌ಮನ್. ಇವರಿಬ್ಬರಿಗೆ ಕಡಿವಾಣ ಹಾಕಿದರೆ ಗೆಲುವಿಗಾಗಿ ತುಡಿಯುವ ಇಂಡಿಯನ್ಸ್ ಮನಸ್ಸು ಸಂತೃಪ್ತಿಯಿಂದ ತಣಿಯುತ್ತದೆ.

ಮುಂಬೈನಲ್ಲಿ ಇಂಡಿಯನ್ಸ್ ಬೌಲರ್‌ಗಳನ್ನು ಕಾಡಿ, ಸೋಲಿನ ಕತ್ತಲೆಯ ಗೂಡಿಗೆ ನೂಕಿದ್ದ ಗೇಲ್ ಲಯ ಕಂಡುಕೊಳ್ಳುವ ಮುನ್ನವೇ ವಿಕೆಟ್ ಕೆಡವಿಬಿಡಬೇಕು. ಇದೇ    ಇಂಡಿಯನ್ಸ್ ಹೆಣೆಯುತ್ತಿರುವ ಯೋಜನೆಯ ಬಲೆ. ಆದರೆ ಕೆರಿಬಿಯನ್ ನಾಡಿನ ಆಜಾನುಬಾಹು ಆಟಗಾರ ಸುಲಭಕ್ಕೆ ವಿಕೆಟ್ ಒಪ್ಪಿಸುವಂಥ ದುರ್ಬಲನಲ್ಲ.

ಈ ಬಾರಿಯ ಟ್ವೆಂಟಿ-20 ಟೂರ್ನಿಯಲ್ಲಿ ಈಗಾಗಲೇ 57.20ರ ಸರಾಸರಿಯಲ್ಲಿ 572 ರನ್‌ಗಳನ್ನು ಗಳಿಸಿದ್ದೇ ಇಂಥದೊಂದು ಅಭಿಪ್ರಾಯ ಬಲಗೊಳ್ಳಲು ಕಾರಣ. 43 ಸಿಕ್ಸರ್ ಹಾಗೂ 36 ಬೌಂಡರಿ ಸಿಡಿಸಿರುವ ಕ್ರಿಸ್ ಎನ್ನುವ ಮಹಾಮಾಂತ್ರಿಕ      ಬ್ಯಾಟ್ಸ್‌ಮನ್ ಕ್ರೀಸ್‌ಗೆ ಬಂದರೆ ಎಂಥ ಪ್ರಭಾವಿ ಬೌಲರ್ ಕೂಡ ಚಡಪಡಿಸುವುದು ಖಚಿತ.

ಗೇಲ್ ತಮ್ಮ ತಂಡದ ಮುಂದಿದ್ದ ಗುರಿಯಲ್ಲಿ ಅರ್ಧಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿ ಗೆಲುವಿಗೆ ಕಾರಣವಾದ ಅನೇಕ ಪಂದ್ಯಗಳನ್ನು ಈಗಾಗಲೇ ಕ್ರಿಕೆಟ್ ಪ್ರೇಮಿಗಳು ನೋಡಿದ್ದಾರೆ. ಈ ಒಬ್ಬ ಬ್ಯಾಟ್ಸ್‌ಮನ್ ಮುಗ್ಗರಿಸಿದರೆ ಸೋಲಿನ ಅಪಾಯದ ಕತ್ತಿ ಆರ್‌ಸಿಬಿ ನೆತ್ತಿಯ ಮೇಲೆ ತೂಗುತ್ತದೆ ಎನ್ನುವ ನಂಬಿಕೆಯೂ ಅಷ್ಟೇ ಬಲವಾಗಿ ಬೇರುಬಿಟ್ಟಿದೆ.

ಇಂಡಿಯನ್ಸ್ ಬ್ಯಾಟಿಂಗ್‌ನಲ್ಲಿ ಭರವಸೆ ಇಟ್ಟಿರುವುದು ರೋಹಿತ್ ಶರ್ಮ ಮೇಲೆ. ತೆಂಡೂಲ್ಕರ್ ಆಕರ್ಷಣೆಯ ಕೇಂದ್ರ ಎನಿಸಿದರೂ ಅವರಿಂದ ತಂಡಕ್ಕೆ ಗಮನ ಸೆಳೆಯುವಂಥ ನೆರವು ಸಿಕ್ಕಿಲ್ಲ. ಒಂಬತ್ತು ಇನಿಂಗ್ಸ್‌ಗಳಲ್ಲಿ ಅವರು ಗಳಿಸಿದ್ದು 228 ರನ್. ಆದರೆ ರೋಹಿತ್ ನಾಲ್ಕು ಇನಿಂಗ್ಸ್ ಹೆಚ್ಚಿಗೆ ಆಡಿ 402 ರನ್ ಗಳಿಸಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಶತಕದ ಶ್ರೇಯ ಪಡೆದ ಕೆಲವೇ ಬ್ಯಾಟ್ಸ್‌ಮನ್‌ಗಳಲ್ಲಿ ಇವರೂ ಒಬ್ಬರು.

ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ದದ ಪಂದ್ಯದಲ್ಲಿ ಅಜೇಯ ಶತಕ ಗಳಿಸಿದ್ದ ರೋಹಿತ್ ತಮ್ಮ ತಂಡದ ಗೆಲುವಿನ ರೂವಾರಿ ಎನಿಸಿದ್ದರು. ಪಾಯಿಂಟುಗಳ ಪಟ್ಟಿಯಲ್ಲಿ ತಮ್ಮ ತಂಡವನ್ನು ಮೇಲಕ್ಕೆತ್ತಲು ಆರ್‌ಸಿಬಿ ವಿರುದ್ಧವೂ ಅಂಥ ಬೆಲೆಯುಳ್ಳ ಆಟವನ್ನು ಆಡುತ್ತಾಂದು ಆಶಿಸಬಹುದು.

ಲೀಗ್ ಪಟ್ಟಿಯಲ್ಲಿ ಈಗ ಪ್ರಬಲ ಸ್ಪರ್ಧೆಯಿದೆ. ನೈಟ್ ರೈಡರ್ಸ್ ಹಾಗೂ ಡೆಲ್ಲಿ ಡೇರ್‌ಡೆವಿಲ್ಸ್ ತಂಡದವರು ಶನಿವಾರದ ಪಂದ್ಯಗಳಲ್ಲಿ ಸೋತಿದ್ದರಿಂದ ನಾಟಕೀಯ ಬದಲಾವಣೆಗಳ ಸಾಧ್ಯತೆಯೂ ಹೆಚ್ಚಿದೆ. ಇಂಥ ಪರಿಸ್ಥಿತಿಯ ಪ್ರಯೋಜನ ಪಡೆದು ತುಟ್ಟತುದಿ ಮುಟ್ಟುವ ಅವಕಾಶ ಇಂಡಿಯನ್ಸ್‌ಗೆ ಇದೆ. ರಾಯಲ್ ಚಾಲೆಂಜರ್ಸ್ ಕೂಡ ಮೊದಲ ನಾಲ್ಕರಲ್ಲಿ ಒಂದು ಸ್ಥಾನ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕೊನೆಯ ಮೂರು ಪಂದ್ಯಗಳನ್ನು ಗೆಲ್ಲುವುದು ಅಗತ್ಯವಾಗಿದೆ.

ಪಂದ್ಯ ಆರಂಭ: ಸಂಜೆ 4.00ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.