ADVERTISEMENT

ಭಾರತಕ್ಕೆ ಟೈ ತಂದ ಸಮಾಧಾನ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2012, 19:30 IST
Last Updated 14 ಫೆಬ್ರುವರಿ 2012, 19:30 IST

ಅಡಿಲೇಡ್: ಗೆಲುವಿನ ಗುರಿ ಹತ್ತಿರದಲ್ಲಿಯೇ ಇತ್ತು. ಆದರೂ ಸೋಲಿನ ಭಯವೂ ಕಾಡಿತ್ತು. ಒತ್ತಡದಲ್ಲಿದ್ದ ನಾಯಕ ಮಹೇಂದ್ರ ಸಿಂಗ್ ದೋನಿ ಅವರಿಗಿಂತ ಹೆಚ್ಚು ಬೆವರಿದ್ದು ಭಾರತ ತಂಡದ ಬೆಂಬಲಿಗರು.

ಕೊನೆಯೊಂದು ಓವರ್‌ನ ಪ್ರತಿಯೊಂದು ಎಸೆತಕ್ಕೂ ರನ್‌ಗಳ ನಿರೀಕ್ಷೆಯೊಂದಿಗೆ ಚಡಪಡಿಕೆ. ಆದರೆ ಇನ್ನೊಂದು ರನ್ ದಕ್ಕಲಿಲ್ಲ. ಜಯ ಒಲಿಯಲಿಲ್ಲ; ಸೋಲು ಕಾಡಲಿಲ್ಲ. ಅದೇ `ಟೈ~ ಪಂದ್ಯ ತಂದ ಸಮಾಧಾನ.

ಅಡಿಲೇಡ್ ಓವಲ್‌ನಲ್ಲಿ ಶ್ರೀಲಂಕಾ ಪೇರಿಸಿಟ್ಟ ಮೊತ್ತ ಐವತ್ತು ಓವರುಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 236 ರನ್. ಗೆಲುವಿನ ನಿರೀಕ್ಷೆಯೊಂದಿಗೆ ಹೋರಾಡಿದ ಭಾರತವೂ ನಿಗದಿತ ಓವರ್‌ಗಳು ಮುಗಿಯುವ ಹೊತ್ತಿಗೆ ಗಳಿಸಿದ್ದು ಕೂಡ ಅಷ್ಟೇ ರನ್. ಕಳೆದುಕೊಂಡ ವಿಕೆಟ್ ಸಂಖ್ಯೆಯೂ ಅಷ್ಟೇ!

ಆದರೆ ವ್ಯತ್ಯಾಸವೊಂದಿದೆ. ಶ್ರೀಲಂಕಾ ಎದುರಿಸಿದ್ದು 300 ಎಸೆತವಾದರೆ ಭಾರತದವರಿಗೆ ಎದುರಿಸಲು ಸಿಕ್ಕಿದ್ದು 299 (ನೋಬಾಲ್, ವೈಡ್ ಹೊರತುಪಡಿಸಿ). ಕೊರತೆಯಾದ ಒಂದು ಎಸೆತವು ಲಭ್ಯವಾಗಿದ್ದರೆ ಜಯ ಸಾಧ್ಯವಾಗುತಿತ್ತೇನೋ...! ಆಗಿದ್ದು ಆಗಿ ಹೋಯಿತು. ಅಂಪೈರ್ ಲೆಕ್ಕ ತಪ್ಪಿದ್ದರು. ಕ್ರೀಡಾ ಮನೋಭಾವದಿಂದ ತೀರ್ಪುಗಾರರ ಮಾಡಿದ ಈ ಪ್ರಮಾದವನ್ನೂ `ಮಹಿ~ ಒಪ್ಪಿಕೊಂಡಿದ್ದಾರೆ. ಆದ್ದರಿಂದ ಅಭಿಮಾನಿಗಳೂ ಅಸಮಾಧಾನ ಒತ್ತಿಟ್ಟುಕೊಂಡು `ಟೈ~ ಸಾಧ್ಯವಾಯಿತಲ್ಲ ಎಂದು ಸಂತಸ ಪಟ್ಟುಕೊಳ್ಳಬೇಕು.

ಒಂದು ತಂಡದ ಪರವಾಗಿ ಸ್ಪಷ್ಟ ಫಲಿತಾಂಶ ಬರದಿದ್ದರೂ ರೋಚಕ ಪಂದ್ಯವನ್ನು ನೋಡಿದ ಸಂಭ್ರಮವಂತೂ ಕ್ರಿಕೆಟ್ ಪ್ರೇಮಿಗಳ ಪಾಲಿಗೆ ಬಂದಿದೆ. ಕೊನೆಯ ಒಂದು ಓವರ್ ಅಂತೂ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತು. 48ನೇ ಓವರ್‌ನಲ್ಲಿ ನೋಬಾಲ್ ಆಗಿದ್ದ ನಾಲ್ಕನೇ ಎಸೆತದಲ್ಲಿ ಚೆಂಡನ್ನು ಸಿಕ್ಸರ್‌ಗೆ ಎತ್ತಿದ್ದ ಇರ್ಫಾನ್ ಪಠಾಣ್, ನಂತರ ದೋನಿಯ ಆತುರದ ಓಟದಲ್ಲಿ ಸಂಕಷ್ಟಕ್ಕೆ ಸಿಲುಕಿ ರನ್‌ಔಟ್ ಆದರು. ಅಲ್ಲಿಂದಲೇ ಪಂದ್ಯದಲ್ಲಿ ಭಾರಿ ಕಾವು.

ಆರ್.ವಿನಯ್ ಕುಮಾರ್ ಬಂದಾಗ ಇನ್ನೊಂದು ಕೊನೆಯಲ್ಲಿದ್ದ ದೋನಿ ಬೌಂಡರಿ ಗಿಟ್ಟಿಸಿ, 48ನೇ ಓವರ್‌ನ ಕೊನೆಯ ಎಸೆತದಲ್ಲಿ ಒಂದು ರನ್ ಗಿಟ್ಟಿಸಿ ಮತ್ತೆ ತಾವೇ ಸ್ಟ್ರೈಕ್ ಪಡೆದರು. ಆಗ ನಿಟ್ಟುಸಿರು. ಮಹಿ ತಂಡವನ್ನು ಗೆಲುವಿನ ಗುರಿ ಮುಟ್ಟಿಸುತ್ತಾರೆನ್ನುವ ನಿರೀಕ್ಷೆಗೂ ಬಲ. ಓವರ್ ನಡುವಣ ಸಣ್ಣ ವಿರಾಮದಲ್ಲಿ ನೀರು ಕುಡಿದ ದೋನಿ; ಎದುರಾಳಿಗಳಿಗೆ ನೀರು ಕುಡಿಸುತ್ತಾರೆ ಎಂದುಕೊಂಡಿದ್ದೂ ನಿಜ.

ಲಸಿತ್ ಮಾಲಿಂಗ ಕವಣಿ ಕಲ್ಲಿನಂತೆ ಬೀಸಿಬಿಟ್ಟ ಚೆಂಡಿನ ಮುಖ ಬದಲಿಸಿ ಲಘುವಾಗಿಯೇ ಅಟ್ಟಿದರು. ಪರಿಣಾಮ ಎರಡು ರನ್. ಮತ್ತೊಂದು ಎಸೆತದಲ್ಲಿ ಸ್ವೀಪ್ ಮಾಡಿ ಗಿಟ್ಟಿಸಿದ್ದು ಒಂದೇ ರನ್. ಆಗ ವಿನಯ್ ಮೇಲೆ ದೊಡ್ಡ ಹೊರೆ. ಚೆಂಡನ್ನು ಪಾಯಿಂಟ್ ಕಡೆಗೆ ಅಟ್ಟಲು ಮಾಡಿದ ಪ್ರಯತ್ನ ಸರಿಹೋಗಲಿಲ್ಲ. ಚೆಂಡು ಆಫ್ ಸೈಡ್‌ನಲ್ಲಿ ಸ್ವಲ್ಪವೇ ದೂರ ಕ್ರಮಿಸಿತು. ಅಂಥ ಸಂದರ್ಭದಲ್ಲಿ ಕರ್ನಾಟಕದ ಹುಡುಗ ಮಾಡಿದ ದೊಡ್ಡ ಕೆಲಸವೆಂದರೆ ಚುರುಕಾಗಿ ಒಂದು ರನ್ ಗಳಿಸಿದ್ದು. ಅದರ ಫಲವಾಗಿ ಮತ್ತೆ ದೋನಿಗೆ ಆಡುವ ಅವಕಾಶ. ಮತ್ತೆ ನಾಯಕನಿಂದ ಒಂದು ರನ್ ಗಳಿಕೆ.

ಓವರ್‌ನ ಐದನೇ ಎಸೆತದಲ್ಲಿ ವಿನಯ್ ರನ್‌ಔಟ್ ಬಲೆಗೆ ಬಿದ್ದರು. ಆಗ ಶ್ರೀಲಂಕಾದವರು ಭಾರಿ ಸಂಭ್ರಮದೊಂದಿಗೆ ಕುಣಿದಾಡಿದರು. ಇನ್ನೇನು ಜಯ ನಮ್ಮದು ಎನ್ನುವಂಥ ಉತ್ಸಾಹ. ಕಾರಣ ಭಾರತಕ್ಕೆ ಅಗತ್ಯ ಇದ್ದದ್ದು ಗೆಲ್ಲಲು ನಾಲ್ಕು ರನ್. ಮಾಲಿಂಗ ಎಸೆತದಲ್ಲಿ ಚೆಂಡನ್ನು ಬೌಂಡರಿ ಗೆರೆ ದಾಟಿಸುವುದು ಕಷ್ಟ ಎನ್ನುವುದು ಸಿಂಹಳೀಯರಿಗೆ ಸ್ಪಷ್ಟವಾಗಿತ್ತು. ಆದರೂ ಗಡಿಯಲ್ಲಿ ಕ್ಷೇತ್ರರಕ್ಷಣೆಯ ಕೋಟೆ ಬಲಪಡಿಸಿದರು ಮಾಹೇಲ ಜಯವರ್ಧನೆ.

ಮಾಲಿಂಗ ಎಸೆದ ಚೆಂಡು ದೋನಿಯಿಂದ ಬಹುದೂರ ಸಾಗಿತ್ತು. ಆದರೂ ಭಾರತ ತಂಡದ ನಾಯಕನ ಉದ್ದೇಶ ಹೇಗಾದರೂ ಅದನ್ನು ತಟ್ಟುವುದು. ತಟ್ಟಿ ನೇರವಾಗಿ ಆಡಲು ಆಗಲಿಲ್ಲ ಆದರೆ ಜಾಮೂನನ್ನು ಚಮಚದಲ್ಲಿ ಎತ್ತಿದಂತೆ ಬ್ಯಾಟ್‌ನಿಂದ ಚೆಂಡನ್ನು ಅಡಿಯಿಂದ ಎತ್ತಿದರು. ಚೆಂಡಿನ ಓಟ ಎಕ್ಸ್‌ಟ್ರಾ ಕವರ್‌ನತ್ತ. ಸೇನನಾಯಕೆ ತಡೆದ ಚೆಂಡನ್ನು ಕುಲಶೇಖರ ಹಿಂದಿರುಗಿಸುವ ಹೊತ್ತಿಗೆ ಸಾಕಷ್ಟು ಅವಕಾಶ. ದೋನಿ ಹಾಗೂ ಉಮೇಶ್ ಯಾದವ್ ಮೂರು ರನ್ ಓಡಿ ಮುಗಿಸಿಯಾಗಿತ್ತು. ಆದರೂ ಗೆಲುವಿಗೆ ಅಗತ್ಯವಾಗಿದ್ದ ಒಂದು ರನ್ ಕೊರತೆಯಾಗಿ ಕಾಡಿತ್ತು!

ಲಂಕಾ ವಿರುದ್ಧ ಎರಡನೇ ಗೆಲುವು ಪಡೆಯುವ ಉದ್ದೇಶ ಹೊಂದಿದ್ದ ಭಾರತದ ಇನಿಂಗ್ಸ್ ಅದ್ಭುತವೆಂದು ಹೇಳಲಂತೂ ಸಾಧ್ಯವಿಲ್ಲ. ಎಲ್ಲ ಹೊರೆ ಹೊತ್ತು ನಿಂತಿದ್ದು ಆರಂಭಿಕ ಆಟಗಾರ ಗೌತಮ್ ಗಂಭೀರ್ (91; 106 ಎ., 6 ಬೌಂಡರಿ) ಹಾಗೂ ಅಜೇಯರಾಗಿ ಉಳಿದ ದೋನಿ (58; 69 ಎ., 3 ಬೌಂಡರಿ, 1 ಸಿಕ್ಸರ್). ಕೈತಪ್ಪಿ ಹೋಗಲಿದ್ದ ಪಂದ್ಯವು `ಟೈ~ ಆಗಿ ಎರಡು ಪಾಯಿಂಟು ಸಿಗುವಂತೆ ಮಾಡಿದ ಶ್ರೇಯ ಸಲ್ಲುವುದಂತೂ `ಮಹಿ~ಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.