ADVERTISEMENT

ಭಾರತಕ್ಕೆ ತಿರುಗೇಟು ನೀಡಿದ ಆಂಗ್ಲರು

ಕ್ರಿಕೆಟ್: ದೋನಿ ಪಡೆಯ ಸರಣಿ ಗೆಲುವಿನ ಕನಸಿಗೆ ಅಡ್ಡಿಯಾದ ಮಾರ್ಗನ್

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 19:59 IST
Last Updated 22 ಡಿಸೆಂಬರ್ 2012, 19:59 IST

ಮುಂಬೈ: ಟೆಸ್ಟ್ ಸರಣಿಯಲ್ಲಿ ಅನುಭವಿಸಿದ್ದ ಹೀನಾಯ ಸೋಲಿಗೆ `ಮಯ್ಯಿ' ತೀರಿಸಬೇಕೆನ್ನುವ ಭಾರತದ ಕನಸು ಕೈಗೂಡಲಿಲ್ಲ. ಎರಡನೇ ಹಾಗೂ ಕೊನೆಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಗೆಲುವು ಸಾಧಿಸಿ ಸರಣಿ ಜಯಿಸಬೇಕೆನ್ನುವ ದೋನಿ ಪಡೆಯ ಆಸೆಗೆ ಆಂಗ್ಲ ಬಳಗದ ನಾಯಕ ಎಯೋನ್ ಮಾರ್ಗನ್ ಅಡ್ಡಿಯಾದರು.

ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಭಾರತದ ಕಂಡ ಮತ್ತೊಂದು ಸೋಲಿನಿಂದ ಅಲ್ಲಿ ನೆರೆದಿದ್ದ 45000ಕ್ಕೂ ಹೆಚ್ಚು ಪ್ರೇಕ್ಷಕರು ಮೊಗ ಬಾಡಿ ಹೋಯಿತು. ರೋಚಕ ಅಂತ್ಯ ಕಂಡ ಪಂದ್ಯದಲ್ಲಿ ಆಂಗ್ಲ ಪಡೆಯ ಗೆಲುವಿಗೆ ಕೊನೆಯ ಎಸೆತದಲ್ಲಿ ಮೂರು ರನ್‌ಗಳು ಅಗತ್ಯವಿದ್ದವು. ಅಶೋಕ್ ದಿಂಡಾ ಓವರ್‌ನ ಆ ಕೊನೆಯ ಎಸೆತವನ್ನು ಮಾರ್ಗನ್ ಸಿಕ್ಸರ್ ಎತ್ತುವ ಮೂಲಕ ಭಾರತದ ಸರಣಿ ಗೆಲುವಿನ ಕನಸನ್ನು ನುಚ್ಚು ನೂರು ಮಾಡಿದರು. ಅಷ್ಟೇ ಅಲ್ಲ, ಸರಣಿ ಗೆಲುವಿನ ಆಸೆ ಕಂಡಿದ್ದ ದೋನಿ ಬಳಗಕ್ಕೆ ನಿರಾಸೆ ಮೂಡಿಸಿದರು. ಪಂದ್ಯ ಗೆಲ್ಲುತ್ತಿದ್ದಂತೆ ಡಗ್ ಔಟ್‌ನಲ್ಲಿ ಕುಳಿತಿದ್ದ ಇಂಗ್ಲೆಂಡ್ ತಂಡದ ಆಟಗಾರು ಕುಣಿದಾಡಿ ಸಂಭ್ರಮಿಸಿದರು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎರಡು ಅಮೋಘ ಜೊತೆಯಾಟಗಳ ಬಲದಿಂದ 20 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 177 ರನ್‌ಗಳನ್ನು ಕಲೆ ಹಾಕಿತು. ಈ ಮೊತ್ತವನ್ನು ಪ್ರವಾಸಿ ತಂಡ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ತಲುಪಿತು. ಇದಕ್ಕೆ ಮೈಕಲ್ ಲುಂಬ್ (50), ಹೇಲ್ಸ್ (42) ಅವರ ಬ್ಯಾಟಿಂಗ್ ಕಾರಣವಾಯಿತು.

ಪುಣೆಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ಐದು ವಿಕೆಟ್‌ಗಳ ಜಯ ಸಾಧಿಸಿತ್ತು. ಇದರಿಂದ ಎರಡು ಪಂದ್ಯಗಳ ಸರಣಿ 1-1ರಲ್ಲಿ ಸಮದಲ್ಲಿ ಅಂತ್ಯ ಕಂಡಿತು. ರೋಚಕವಾಗಿದ್ದ ಕೊನೆಯ ಓವರ್‌ನಲ್ಲಿ ಫೀಲ್ಡಿಂಗ್‌ನಲ್ಲಿ ದೋನಿ ಬದಲಾವಣೆ ಮಾಡಿ ಕೆಲ ಕಸರತ್ತುಗಳನ್ನು ಮಾಡಿದರಾದರೂ, ಅವರ ಯೋಜನ ಫಲ ನೀಡಲಿಲ್ಲ.

ಬಲ ತುಂಬಿದ ಜೊತೆಯಾಟ:
ಪ್ರವಾಸಿ ತಂಡ ಟಾಸ್ ಗೆದ್ದು ಭಾರತಕ್ಕೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿತು. ಆರಂಭಿಕ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಎರಡನೇ ಓವರ್‌ನಲ್ಲಿಯೇ ಪೆವಿಲಿಯನ್ ಸೇರಿಕೊಂಡರು. ದೆಹಲಿ ಗೌತಮ್ ಗಂಭೀರ್ 27 ಎಸೆತಗಳಲ್ಲಿ ಎದುರಿಸಿದರಾದರೂ, 17 ರನ್ ಮಾತ್ರ ಕಲೆ ಹಾಕಿದರು. ಆದರೆ, ನಾಯಕ ದೋನಿ (17, 27ಎಸೆತ, 1ಬೌಂಡರಿ )ಮತ್ತು ಸುರೇಶ್ ರೈನಾ ( ಔಟಾಗದೆ 35, 24ಎಸೆತ, 3 ಬೌಂಡರಿ, 1 ಸಿಕ್ಸರ್) ಕೊನೆಯಲ್ಲಿ ವೇಗವಾಗ ರನ್ ಕಲೆ ಹಾಕಿದರು.

ರಹಾನೆ ಔಟಾದ ನಂತರ ಬಂದ ಕೊಹ್ಲಿ ಎರಡನೇ ವಿಕೆಟ್ ಜೊತೆಯಾಟದಲ್ಲಿ ಗಂಭೀರ್ ಜೊತೆ ಸೇರಿ ವೇಗವಾಗಿ ರನ್ ಗಳಿಸಿದರು. ಈ ಜೋಡಿ 30 ಎಸೆತಗಳಲ್ಲಿ 57 ರನ್ ಪೇರಿಸಿತು. ಎರಡು ಹಾಗೂ ಆರನೇ ವಿಕೆಟ್ ಉತ್ತಮ ಜೊತೆಯಾಟದ ನೆರವಿನಿಂದ ಭಾರತ 150ರ ಗಡಿ ದಾಟಿತು.

ದೋನಿ-ರೈನಾ ಆರ್ಭಟ: ಆರನೇ ವಿಕೆಟ್‌ಗೆ ಜೊತೆಗೂಡಿದ ದೋನಿ ಮತ್ತು ರೈನಾ ಆಂಗ್ಲರ ಪಡೆಯ ಬೌಲರ್‌ಗಳ ಬೆವರಿಳಿಸಿದರು. ಈ ಜೋಡಿ ಕೇವಲ 27 ಎಸೆತಗಳಲ್ಲಿ 60 ರನ್‌ಗಳನ್ನು ಕಲೆ ಹಾಕಿದ್ದೇ ಇದಕ್ಕೆ ಸಾಕ್ಷಿ. ರೈನಾ ಮತ್ತು ದೋನಿ ಸೇರಿ 18ನೇ ಓವರ್‌ನಲ್ಲಿ 20 ರನ್‌ಗಳನ್ನು ಕಲೆ ಹಾಕಿದರು. ಇದೇ ಓವರ್‌ನ ಮೊದಲ ಹಾಗೂ ಕೊನೆಯ ಎಸೆತದಲ್ಲಿ ದೋನಿ ಎರಡು ಆಕರ್ಷಕ ಸಿಕ್ಸರ್ ಸಿಡಿಸಿ ಜೇಡ್ ಡೆರ್ನ್‌ಬಾಚ್ ಬೆವರಿಳಿಸಿದರು.

ಮೊದಲ ಹತ್ತು ಓವರ್‌ಗಳಲ್ಲಿ 86 ರನ್ ಗಳಿಸಿದ್ದ ಭಾರತ, ಕೊನೆಯ ಹತ್ತು ಓವರ್‌ಗಳಲ್ಲಿ 91 ರನ್‌ಗಳನ್ನು ಗಳಿಸಿತು. ಆದರೆ, ಪ್ರವಾಸಿ ಇಂಗ್ಲೆಂಡ್ ತಂಡದವರು ಅಬ್ಬರದ ಬ್ಯಾಟಿಂಗ್ ಮುಂದೆ ಭಾರತದ ಆಟವೆಲ್ಲಾ ಮಂಕಾಗಿ ಹೋಯಿತು.

ಸ್ಕೋರ್ ವಿವರ:

ADVERTISEMENT

ಭಾರತ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 177
ಗೌತಮ್ ಗಂಭೀರ್ ಸಿ ಬ್ರೆಸ್ನಿನ್ ಬಿ ಲೂಕ್ ರೈಟ್  17
ಅಜಿಂಕ್ಯ ರಹಾನೆ ಸಿ ರೈಟ್ ಬಿ ಜೇಡ್ ಡೆರ್ನ್‌ಬಾಚ್  03
ವಿರಾಟ್ ಕೊಹ್ಲಿ ಎಲ್‌ಬಿಡಬ್ಲ್ಯು ಬಿ ಸ್ಟುವರ್ಟ್ ಮೀಕರ್   
38
ಯುವರಾಜ್ ಸಿಂಗ್ ಸಿ ವೈಟ್ ರೂಟ್ ಬಿ ಲೂಕ್ ರೈಟ್ 04
ರೋಹಿತ್ ಶರ್ಮಾ ಬಿ ಜೇಮ್ಸ ಟ್ರೆಡ್‌ವೆಲ್  24
ಸುರೇಶ್ ರೈನಾ ಔಟಾಗದೆ  35
ಮಹೇಂದ್ರ ಸಿಂಗ್ ದೋನಿ ಸಿ ಸಮಿತ್ ಪಟೇಲ್ ಬಿ ಜೇಡ್ ಡೆರ್ನ್‌ಬಾಚ್  38
ಆರ್. ಅಶ್ವಿನ್ ಸಿ ಲಂಬ್ ಬಿ ಜೇಡ್ ಡೆರ್ನ್‌ಬಾಚ್  01
ಪಿಯೂಷ್ ಚಾವ್ಲಾ ರನ್‌ಔಟ್ (ಜಾಸ್ ಬಟ್ಲರ್)  00
ಇತರೆ: (ಬೈ-2, ಲೆಗ್ ಬೈ-4, ವೈಡ್-9, ನೋ ಬಾಲ್-2)
17
ವಿಕೆಟ್ ಪತನ: 1-7 (ರಹಾನೆ; 1.5), 2-64 (ಕೊಹ್ಲಿ; 6.5), 3-71 (ಯುವಿ; 8.1), 4-88 (ಗಂಭೀರ್; 10.5), 5-108 (ಶರ್ಮಾ; 14.1), 6-168 (ದೋನಿ; 18.4), 7-171 (ಅಶ್ವಿನ್; 19.3), 8-177 (ಚಾವ್ಲಾ; 19.6).
ಬೌಲಿಂಗ್:  ಟಿಮ್ ಬ್ರೆಸ್ನನ್ 4-0-27-1, ಜೇಡ್    ಡೆರ್ನ್‌ಬಾಚ್ 4-0-37-2, ಸ್ಟುವರ್ಟ್ ಮೀಕರ್ 4-0-42-1, ಲೂಕ್ ರೈಟ್ 4-0-38-2, ಜೇಮ್ಸ ಟ್ರೆಡ್‌ವೆಲ್ 4-0-27-1.
ಇಂಗ್ಲೆಂಡ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 181
ಮೈಕಲ್ ಲಂಬ್ ಸ್ಟಂಪ್ ದೋನಿ ಬಿ ಯುವರಾಜ್  50
ಅಲೆಕ್ಸ್ ಹೇಲ್ಸ್ ಸಿ ದಿಂಡಾ ಬಿ ಯುವರಾಜ್ ಸಿಂಗ್  42
ಲೂಕ್ ರೈಟ್ ಎಲ್‌ಬಿಡಬ್ಲ್ಯು ಬಿ ಯುವರಾಜ್ ಸಿಂಗ್ 05
ಎಯೋನ್ ಮಾರ್ಗನ್ ಔಟಾಗದೆ  49
ಸಮಿತ್ ಪಟೇಲ್ ಸಿ ಗಂಭೀರ್ ಬಿ ಅಶೋಕ್ ದಿಂಡಾ  09
ಜಾಸ್ ಬಟ್ಲರ್ ಔಟಾಗದೆ  15
ಇತರೆ: (ಬೈ-1, ಲೆಗ್ ಬೈ-8, ವೈಡ್-2)  11
ವಿಕೆಟ್ ಪತನ: 1-80 (ಲಂಬ್; 8.2), 2-94 (ರೈಟ್; 10.6), 3-123 (ಹೇಲ್ಸ್; 14.4), 4-149 (ಪಟೇಲ್; 17.5)
ಬೌಲಿಂಗ್: ಅಶೋಕ್ ದಿಂಡಾ 4-0-44-1, ಪರ್ವಿಂದರ್ ಅವಾನ 4-0-42-0, ಆರ್. ಅಶ್ವಿನ್ 4-0-38-0, ಪಿಯೂಷ್ ಚಾವ್ಲಾ 4-0-31-0, ಯುವರಾಜ್ ಸಿಂಗ್ 4-0-17-3.
ಫಲಿತಾಂಶ: ಇಂಗ್ಲೆಂಡ್‌ಗೆ ಆರು ವಿಕೆಟ್‌ಗಳ ಗೆಲುವು;  ಸರಣಿ 1-1ರಲ್ಲಿ ಸಮಬಲ; ಪಂದ್ಯ ಶ್ರೇಷ್ಠ: ಎಯೋನ್ ಮಾರ್ಗನ್; ಸರಣಿ ಶ್ರೇಷ್ಠ: ಯುವರಾಜ್ ಸಿಂಗ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.