ADVERTISEMENT

ಭಾರತಕ್ಕೆ ಸರಣಿ ಗೆಲುವಿನ ಮುನ್ನಡೆ

ಮಹಿಳಾ ಕ್ರಿಕೆಟ್: ಹರ್ಮನ್‌ಪ್ರೀತ್ ಆಲ್‌ರೌಂಡ್ ಆಟ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 19:59 IST
Last Updated 10 ಏಪ್ರಿಲ್ 2013, 19:59 IST

ಅಹಮದಾಬಾದ್ (ಪಿಟಿಐ): ಹರ್ಮನ್‌ಪ್ರೀತ್ ಕೌರ್ ಅವರ ಆಲ್‌ರೌಂಡ್ ಪ್ರದರ್ಶನದ ನೆರವಿನಿಂದ ಭಾರತ ಮಹಿಳಾ ಕ್ರಿಕೆಟ್ ತಂಡ ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ 46 ರನ್‌ಗಳ ಗೆಲುವು ಪಡೆಯಿತು. ಇದರಿಂದ ಮೂರು ಪಂದ್ಯಗಳ ಸರಣಿಯಲ್ಲಿ ಆತಿಥೇಯರು 2-0ರಲ್ಲಿ ಸರಣಿ ಗೆಲುವಿನ ಮುನ್ನಡೆ ಸಾಧಿಸಿದರು.

ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ 50 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 256 ರನ್‌ಗಳನ್ನು ಗಳಿಸಿತು. ಇದಕ್ಕೆ ಉತ್ತರವಾಗಿ ಪ್ರವಾಸಿ ಬಾಂಗ್ಲಾ ನಿಗದಿತ ಓವರ್‌ಗಳು ಅಂತ್ಯ ಕಂಡಾಗ ಒಂಬತ್ತು ವಿಕೆಟ್ ಕಳೆದುಕೊಂಡು 210 ರನ್ ಮಾತ್ರ ಕಲೆ ಹಾಕಿತು.

ಕೌರ್ ಶತಕ: ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ (103, 100ಎಸೆತ, 11ಬೌಂಡರಿ, 2 ಸಿಕ್ಸರ್) ಶತಕ ಗಳಿಸಿದರು. ಏಕದಿನ ಕ್ರಿಕೆಟ್‌ನಲ್ಲಿ ಕೌರ್ ಗಳಿಸಿದ ಎರಡನೇ ಶತಕವಿದು.

ಈ ಆಟಗಾರ್ತಿ ಬೌಲಿಂಗ್‌ನಲ್ಲಿಯೂ ಮಿಂಚಿದರು. 30ರನ್ ನೀಡಿ ಪ್ರಮುಖ ಎರಡು ವಿಕೆಟ್‌ಗಳನ್ನು    ಕಬಳಿಸಿದರು. ಆರಂಭಿಕ ಆಟಗಾರ್ತಿ ಪೂನಮ್ ರಾವತ್ (80, 104ಎಸೆತ, 9ಬೌಂಡರಿ) ಕೂಡಾ ತಂಡಕ್ಕೆ    ಉತ್ತಮ ಆರಂಭ ಒದಗಿಸಿಕೊಟ್ಟರು.

ಗುರಿ ಬೆನ್ನಟ್ಟುವ ಹಾದಿಯಲ್ಲಿ ಪ್ರವಾಸಿ ತಂಡದ ರುಮನಾ ಅಹ್ಮದ್ (75, 94ಎಸೆತ, 8ಬೌಂಡರಿ) ಮರು ಹೋರಾಟ ತೋರಿದರು. ಆದರೆ, ಏಕ್ತಾ ಬಿಸ್ಟ್ ಅವರು ರುಮನಾ ಅವರನ್ನು ಬೌಲ್ಡ್ ಮಾಡಿ ಬಾಂಗ್ಲಾ ಹೋರಾಟಕ್ಕೆ ತಡೆಯೊಡ್ದಿದರು.

ನಂತರದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನೀಡಲಿಲ್ಲ. ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ಏಪ್ರಿಲ್ 12ರಂದು ನಡೆಯಲಿದೆ. ಬಾಂಗ್ಲಾ ವಿರುದ್ಧದ ಟ್ವಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾರತ `ಕ್ಲೀನ್ ಸ್ವೀಪ್' ಸಾಧನೆ ಮಾಡಿತ್ತು.

ಸಂಕ್ಷಿಪ್ತ ಸ್ಕೋರು:
ಭಾರತ 50 ಓವರ್‌ಗಳಲ್ಲಿ 256ಕ್ಕೆ6.

(ಪೂನಮ್ ರಾವತ್ 80, ತಿರುಷ್ ಕಾಮಿನಿ 18, ಸ್ಮೃತಿ ಮಂಧಾನ 25, ಹರ್ಮನ್‌ಪ್ರೀತ್ ಕೌರ್ 103; ಜಹಾನರಾ ಆಲಮ್ 38ಕ್ಕೆ2, ಕೆ. ಸಲ್ಮಾ 48ಕ್ಕೆ2, ರುಮಾನಾ 62ಕ್ಕೆ1).

ಬಾಂಗ್ಲಾದೇಶ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 210
(ಫರ್ಜಾನಾ ಹಕೆ 26, ರುಮಾನಾ ಅಹ್ಮದ್ 75, ಲತಾ ಮಂಡಲ್ 28, ಕೆ. ಸಲ್ಮಾ 35; ರಿತು ಧ್ರುಬಿ 40ಕ್ಕೆ1, ಏಕ್ತಾ ಬಿಸ್ಟ್ 34ಕ್ಕೆ3, ಹರ್ಮನ್‌ಪ್ರೀತ್ ಕೌರ್ 30ಕ್ಕೆ2).

ಫಲಿತಾಂಶ: ಭಾರತಕ್ಕೆ 46 ರನ್ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.