ADVERTISEMENT

ಭಾರತದಲ್ಲಿ ರೇಸ್ ಪೂರ್ಣಗೊಳಿಸುವುದು ಗುರಿ: ಕಾರ್ತಿಕೇಯನ್

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2011, 19:30 IST
Last Updated 27 ಅಕ್ಟೋಬರ್ 2011, 19:30 IST

ಗ್ರೇಟರ್ ನೋಯ್ಡಾ (ಪಿಟಿಐ): ಭಾರತದಲ್ಲಿ ನಡೆಯುವ ಚೊಚ್ಚಲ ಫಾರ್ಮುಲಾ ಒನ್ ರೇಸ್‌ನ್ನು ಆನಂದಿಸುವುದು ನನ್ನ ಉದ್ದೇಶ ಎಂದು ನರೇನ್ ಕಾರ್ತಿಕೇಯನ್ ನುಡಿದಿದ್ದಾರೆ. ಯಾವುದೇ ಒತ್ತಡ ಅನುಭವಿಸದೆ,  ರೇಸ್‌ನ ಎಲ್ಲ ಲ್ಯಾಪ್‌ಗಳನ್ನು ಪೂರ್ಣಗೊಳಿಸುವ ಗುರಿಯನ್ನು ಅವರು ಇಟ್ಟುಕೊಂಡಿದ್ದಾರೆ.

ಭಾನುವಾರ ನಡೆಯುವ ರೇಸ್‌ನಲ್ಲಿ ಕಾರ್ತಿಕೇಯನ್ ಹಿಸ್ಪಾನಿಯ ರೇಸಿಂಗ್ ತಂಡದ ಕಾರು ಚಾಲನೆ ಮಾಡಲಿದ್ದಾರೆ. ಕಣದಲ್ಲಿರುವ ಭಾರತದ ಏಕೈಕ ಚಾಲಕ ಇವರು. ಏಕೆಂದರೆ `ಟೀಮ್ ಲೋಟಸ್~ ಭಾರತದ ಕರುಣ್ ಚಂಧೋಕ್‌ಗೆ ಅವಕಾಶ ನೀಡಲು ನಿರಾಕರಿಸಿದೆ.

`ನಿಜ ಹೇಳುವುದಾದರೆ ನಮ್ಮ ತಂಡದ ಕಾರಿನೊಂದಿಗೆ ರೇಸ್ ಪೂರ್ಣಗೊಳಿಸುವುದನ್ನು ಎದುರು ನೋಡುತ್ತಿದ್ದೇನೆ. ಅದೇ ರೀತಿ ತಂಡದ ಇನ್ನೊಬ್ಬ ಚಾಲಕರನ್ನು ಸೋಲಿಸಲು ಪ್ರಯತ್ನಿಸುವೆ~ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಕಾರ್ತಿಕೇಯನ್ ಹೇಳಿದರು.

`ಭಾರತದಲ್ಲಿ ನಡೆಯುವ ಚೊಚ್ಚಲ ರೇಸ್‌ನಲ್ಲಿ ಭಾರತದ ಚಾಲಕನೊಬ್ಬ ಕಣದಲ್ಲಿರುವುದು ಐತಿಹಾಸಿಕ ಕ್ಷಣ. ಎಫ್-1 ರೇಸ್‌ಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳು ಇಲ್ಲಿದ್ದಾರೆ. ಈ ರೇಸ್‌ನ್ನು ಆನಂದಿಸುವುದು ನನ್ನ ಉದ್ದೇಶ. ನನ್ನಿಂದ ಸಾಧ್ಯವಾದಷ್ಟು ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುವೆ~ ಎಂದು ನುಡಿದರು. ತವರು ನಾಡಿನ ಪ್ರೇಕ್ಷಕರ ಮುಂದೆ ಕಾರು ಚಾಲನೆ ಮಾಡಬೇಕಾದ ಕಾರಣ ಒತ್ತಡ ಎದುರಾಗಲಿದೆ ಎಂಬುದನ್ನು ಅವರು ಒಪ್ಪಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.