ADVERTISEMENT

ಭಾರತದ ಆಟಗಾರರಿಗೆ ಶುಭದಿನ

ಅಮೆರಿಕ ಓಪನ್ ಟೆನಿಸ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2013, 19:59 IST
Last Updated 1 ಸೆಪ್ಟೆಂಬರ್ 2013, 19:59 IST

ನ್ಯೂಯಾರ್ಕ್ (ಪಿಟಿಐ): ಭಾರತದ ಆಟಗಾರರು ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಶನಿವಾರ ಗೆಲುವಿನ ಓಟ ನಡೆಸಿದ್ದಾರೆ. ಡಬಲ್ಸ್ ವಿಭಾಗದಲ್ಲಿ ಕಣಕ್ಕಿಳಿದ ಎಲ್ಲರೂ ಜಯ ಸಾಧಿಸಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ.

ಲಿಯಾಂಡರ್ ಪೇಸ್, ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ಪುರುಷರ ಡಬಲ್ಸ್ ವಿಭಾಗದಲ್ಲೂ ಸಾನಿಯಾ ಮಿರ್ಜಾ ಮಹಿಳೆಯರ ಡಬಲ್ಸ್‌ನಲ್ಲೂ ಗೆಲುವಿನ ನಗು ಬೀರಿದರು.

ನಾಲ್ಕನೇ ಶ್ರೇಯಾಂಕ ಹೊಂದಿರುವ ಪೇಸ್ ಮತ್ತು ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪನೆಕ್ ಜೋಡಿ ಎರಡನೇ ಸುತ್ತಿನ ಪಂದ್ಯದಲ್ಲಿ 4-6, 6-3, 6-4 ರಲ್ಲಿ ಜರ್ಮನಿಯ ಡೇನಿಯಲ್ ಬ್ರಾಂಡ್ಸ್ ಮತ್ತು ಆಸ್ಟ್ರಿಯದ ಫಿಲಿಪ್ ಓಸ್ವಾಲ್ಡ್ ವಿರುದ್ಧ ಜಯ ಸಾಧಿಸಿತು. ರೋಹನ್ ಬೋಪಣ್ಣ ಹಾಗೂ ಫ್ರಾನ್ಸ್‌ನ ಎಡ್ವರ್ಡ್ ರೋಜರ್ ವೆಸೆಲಿನ್ 7-6, 7-6 ರಲ್ಲಿ ರಷ್ಯಾದ ನಿಕೊಲೆ ಡೇವಿಡೆಂಕೊ ಮತ್ತು ಮಿಖಾಯಲ್ ಎಲ್ಗಿನ್ ಅವರನ್ನು ಮಣಿಸಿದರು.

ದಿವಿಜ್ ಶರಣ್ ಮತ್ತು ಚೀನಾ ತೈಪೆಯ ಯೆನ್ ಸುಲ್ ಲು ಜೋಡಿ 6-4, 5-7, 7-6 ರಲ್ಲಿ ಇಸ್ರೇಲ್‌ನ ಜೊನಾಥನ್ ಎಲ್ರಿಚ್ ಹಾಗೂ ಆ್ಯಂಡಿ ರಾಮ್ ವಿರುದ್ಧ ಗೆಲುವು ಪಡೆಯಿತು. ಭಾರತ-ತೈಪೆ ಜೋಡಿ ಮುಂದಿನ ಸುತ್ತಿನಲ್ಲಿ ಪಾಕಿಸ್ತಾನದ ಐಸಾಮ್ ಉಲ್ ಹಕ್ ಖುರೇಷಿ ಹಾಗೂ ಹಾಲೆಂಡ್‌ನ ಜೀನ್ ಜೂಲಿಯನ್ ರೋಜರ್ ವಿರುದ್ಧ ಪೈಪೋಟಿ ನಡೆಸಲಿದೆ.

ಮಹಿಳೆಯರ ಡಬಲ್ಸ್ ವಿಭಾಗದ ಪಂದ್ಯದಲ್ಲಿ ಸಾನಿಯಾ ಹಾಗೂ ಚೀನಾದ ಜೀ ಜೆಂಗ್ 6-3, 7-5 ರಲ್ಲಿ ಹಂಗರಿಯ ಕ್ಯಾಟಲಿನ್ ಮರೊಸಿ- ಅಮೆರಿಕದ ಮೇಗನ್ ಮೌಲ್ಟನ್ ವಿರುದ್ಧ ಗೆಲುವು ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.