ADVERTISEMENT

ಭಾರತದ ಬಾಕ್ಸರ್‌ಗಳ ಪಾರಮ್ಯ

ಪಿಟಿಐ
Published 7 ಏಪ್ರಿಲ್ 2018, 20:14 IST
Last Updated 7 ಏಪ್ರಿಲ್ 2018, 20:14 IST
ಭಾರತದ ಬಾಕ್ಸರ್‌ಗಳ ಪಾರಮ್ಯ
ಭಾರತದ ಬಾಕ್ಸರ್‌ಗಳ ಪಾರಮ್ಯ   

ಗೋಲ್ಡ್ ಕೋಸ್ಟ್‌: ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತದ ಬಾಕ್ಸರ್‌ಗಳ ಪಾರಮ್ಯ ಮುಂದುವರಿದಿದೆ. ಮೂರನೇ ದಿನವಾದ ಶನಿವಾರ ಅನುಭವಿ ಬಾಕ್ಸರ್‌ಗಳಾದ ಎಲ್.ಸರಿತಾ ದೇವಿ ಮತ್ತು ಮನೋಜ್ ಕುಮಾರ್‌ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಇವರು ಕ್ರಮವಾಗಿ 60 ಮತ್ತು 59 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ.

ಯುವ ಕ್ರೀಡಾಪಟು, ಇದೇ ಮೊದಲ ಬಾರಿ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಮಹಮ್ಮದ್‌ ಹುಸಮುದ್ದೀನ್‌ 56 ಕೆ.ಜಿ ವಿಭಾಗದಲ್ಲಿ ಎಂಟರ ಘಟ್ಟ ಪ್ರವೇಶಿಸಿದ್ದಾರೆ.

ಕಳದ ಬಾರಿಯ ಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದ ಸರಿತಾ ದೇವಿ ಅವರಿಗೆ ಪ್ರಿ ಕ್ವಾರ್ಟರ್‌ ಫೈನಲ್‌ಗೆ ಬೈ ಸಿಕ್ಕಿತ್ತು. ಶನಿವಾರ ಆರಂಭದಿಂದಲೇ ಎದುರಾಳಿ, ಬಾರ್ಬಡೀಸ್‌ನ ಕಿಂಬರ್ಲಿ ಗಿಟನ್ಸ್‌ ಮೇಲೆ ಆಧಿಪತ್ಯ ಸ್ಥಾಪಿಸಿದ ಅವರು ಸುಲಭವಾಗಿ ಗೆದ್ದರು. ಸಂಜೆ ನಡೆದ ಸ್ಪರ್ಧೆಯಲ್ಲಿ ಹುಸಾಮುದ್ದೀನ್‌ ವನ್ವಾಟುವಿನ ಬೋಯೆ ವರವರ ಅವರನ್ನು ಮಣಿಸಿದರು. ತಾಂಜಾನಿಯಾದ ಮುಂಡ್ವಿಕೆ ಎದುರು ಮನೋಜ್ ಕುಮಾರ್‌ ಸುಲಭವಾಗಿ ಗೆಲುವು ಸಾಧಿಸಿದರು.

ADVERTISEMENT

‘ಈ ಬಾರಿ ಚಿನ್ನ ಗೆಲ್ಲುವ ಗುರಿಯೊಂದಿಗೆ ಇಲ್ಲಿಗೆ ಬಂದಿದ್ದೇನೆ. ಇದಕ್ಕಾಗಿ ಕಠಿಣ ಪರಿಶ್ರಮ ನಡೆಸಿದ್ದು ಯಶಸ್ಸು ಗಳಿಸುವುದು ಖಚಿತ’ ಎಂದು ಸರಿತಾ ದೇವಿ ಹೇಳಿದರು.

ಇಂದು ಮೇರಿ ಕೋಮ್‌ ಕಣಕ್ಕೆ

ಎಂ.ಸಿ.ಮೇರಿ ಕೋಮ್‌ ಅವರು ಭಾನುವಾರ ಕಣಕ್ಕೆ ಇಳಿಯಲಿದ್ದು ಕ್ವಾರ್ಟರ್‌ ಫೈನಲ್‌ಗೆ ಬೈ ಪಡೆದಿರುವ ಅವರು ಮೊದಲ ಪಂದ್ಯದಲ್ಲಿ ಗೆದ್ದರೆ ಪದಕ ಖಚಿತ ಆಗಲಿದೆ. ಮೊದಲ ಬೌಟ್‌ನಲ್ಲಿ ಅವರಿಗೆ ಸ್ಕಾಟ್ಲೆಂಡ್‌ನ ಮೆಗಾನ್ ಗಾರ್ಡನ್ ಸವಾಲೊಡ್ಡಲಿದ್ದಾರೆ.

ಅಮಿತ್ ಫಂಗಲ್‌ (49 ಕೆ.ಜಿ) ಮತ್ತು ನಮನ್‌ ತನ್ವರ್‌ (91 ಕೆ.ಜಿ) ಶುಕ್ರವಾರ ಗೆದ್ದು ಎಂಟರ ಘಟ್ಟಕ್ಕೆ ತಲುಪಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.