ADVERTISEMENT

ಭಾರತದ ಮಹಿಳಾ ಸ್ಪರ್ಧಿಗಳಿಗೆ ನಿರಾಸೆ

ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌: ಯೋಗೇಶ್ವರ್‌ಗೆ ಪದಕ ಅರ್ಪಣೆ–ಭಜರಂಗ್‌

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 19:59 IST
Last Updated 18 ಸೆಪ್ಟೆಂಬರ್ 2013, 19:59 IST
ಹಂಗರಿಯ ಬುಡಾಪೆಸ್ಟ್‌ನಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಜಯಿಸಿದ ಭಾರತದ ಭಜರಂಗ್‌ ಅವರು ಪದಕದೊಂದಿಗೆ ವೇದಿಕೆ ಮೇಲೆ ಸಂಭ್ರಮಿಸಿದ  ಕ್ಷಣ 	–ಎಎಫ್‌ಪಿ ಚಿತ್ರ
ಹಂಗರಿಯ ಬುಡಾಪೆಸ್ಟ್‌ನಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಜಯಿಸಿದ ಭಾರತದ ಭಜರಂಗ್‌ ಅವರು ಪದಕದೊಂದಿಗೆ ವೇದಿಕೆ ಮೇಲೆ ಸಂಭ್ರಮಿಸಿದ ಕ್ಷಣ –ಎಎಫ್‌ಪಿ ಚಿತ್ರ   

ಬುಡಾಪೆಸ್ಟ್‌, ಹಂಗರಿ (ಪಿಟಿಐ): ಭಾರತದ ಮಹಿಳಾ ಸ್ಪರ್ಧಿಗಳು ಇಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ನಿರಾಸೆ ಅನುಭವಿಸಿದ್ದಾರೆ. ನರಸಿಂಗ್‌ ಯಾದವ್‌ ಅವರು ಪುರುಷರ 74 ಕೆ.ಜಿ. ವಿಭಾಗದ ‘ರೆಪಿಚೇಜ್‌’ ಹಂತ ತಲುಪಿದ್ದು,  ಕಂಚಿನ ಪದಕದ ಭರವಸೆ ಮೂಡಿಸಿದ್ದಾರೆ.

ನರಸಿಂಗ್‌ ಮೊದಲ ಸುತ್ತಿನಲ್ಲಿ 10–2 ರಲ್ಲಿ ರಷ್ಯಾದ ಕಖಾಬೆರ್‌ ಕುಬೆಸ್ತಿ ಅವರನ್ನು ಮಣಿಸಿದರು. ಆದರೆ ಎರಡನೇ ಸುತ್ತಿನಲ್ಲಿ ಅಮೆರಿಕದ ಜೋರ್ಡಾನ್‌ ಬರೋಸ್‌ ಕೈಯಲ್ಲಿ 0–7ರಲ್ಲಿ ಪರಾಭವಗೊಂಡರು. ಜೋರ್ಡಾನ್‌ ಬಳಿಕ ಫೈನಲ್‌ ಪ್ರವೇಶಿಸಿದ ಕಾರಣ ಯಾದವ್‌ಗೆ ‘ರೆಪಿಚೇಜ್‌’ನಲ್ಲಿ ಸ್ಪರ್ಧಿಸಲು ಅವಕಾಶ ಲಭಿಸಿತು.

ನಿರ್ಮಲಾ ದೇವಿ (48 ಕೆ.ಜಿ) ಮತ್ತು ವಿನೇಶ್‌ (51 ಕೆ.ಜಿ) ಮಹಿಳೆಯರ ವಿಭಾಗದಲ್ಲಿ ಪ್ರಭಾವಿ ಪ್ರದರ್ಶನ ನೀಡುವಲ್ಲಿ ವಿಫಲರಾದರು.
ನಿರ್ಮಲಾ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವದ ಅಗ್ರ  ರ್‍ಯಾಂಕ್‌ನ ಕುಸ್ತಿಪಟು ಅಮೆರಿಕದ ಅಲಿಸ್ಸಾ ಲಾಂಪ್‌ ಎದುರು 0–7 ರಲ್ಲಿ ಸೋಲು ಅನುಭವಿಸಿದರು.

ಏಷ್ಯನ್‌ ಕ್ರೀಡಾಕೂಟದ ಕಂಚಿನ ಪದಕ ವಿಜೇತೆ ವಿನೀಶ್‌ ಮೊದಲ ಸುತ್ತಿನಲ್ಲಿ ಮೆಕ್ಸಿಕೊದ ವೆಂಡಿ ಮಾರ್ಟಿನೆಜ್‌ ಅವರನ್ನು 7–0 ರಲ್ಲಿ ಮಣಿಸಿದರು. ಆದರೆ ಎರಡನೇ ಸುತ್ತಿನಲ್ಲಿ ಸೆನೆಗಲ್‌ನ ಇಸಾಬೆಲಾ ಸಂಬೌ  ಕೈಯಲ್ಲಿ  3–4 ರಲ್ಲಿ ಪರಾಭವ­ಗೊಂಡರು.

ಯೋಗೇಶ್ವರ್‌ಗೆ ಪದಕ ಅರ್ಪಣೆ: ಭಾರತದ ಭಜರಂಗ್‌ ಈ ಚಾಂಪಿಯನ್‌ಷಿಪ್‌ನಲ್ಲಿ ತಮಗೆ ಲಭಿಸಿದ ಕಂಚಿನ ಪದಕವನ್ನು ಯೋಗೇಶ್ವರ್‌ ದತ್‌ಗೆ ಅರ್ಪಿಸಿದ್ದಾರೆ.

ಲಂಡನ್‌ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ್ದ ಯೋಗೇಶ್ವರ್‌ ಅವರು ಭಜರಂಗ್‌ ಯಶಸ್ಸಿನ ಹಿಂದೆ ಪ್ರಮುಖ ಪಾತ್ರ ವಹಿಸಿದ್ದಾರೆ.
‘ತರಬೇತಿ ಶಿಬಿರದ ವೇಳೆ ನಾನು ಹಾಗೂ ಯೋಗೇಶ್ವರ್‌ ಒಂದೇ ಕೊಠಡಿಯಲ್ಲಿ ತಂಗುವೆವು. ಕೋಚ್‌ಗಳ ಜೊತೆಯಲ್ಲಿ ಯೋಗೇಶ್ವರ್‌ ಕೂಡಾ ನನಗೆ ಸೂಕ್ತ ಸಲಹೆಗಳನ್ನು ನೀಡಿದ್ದಾರೆ. ನಾನು ಈ ಹಂತಕ್ಕೇರಲು ಅವರೇ ಕಾರಣ. ಸ್ಪರ್ಧೆಯ ವೇಳೆ ಅವರು ನನ್ನ ಸಮೀಪದಲ್ಲೇ ಇದ್ದದ್ದು ಕೂಡಾ ನೆರವಾಯಿತು. ಈ ಪದಕವನ್ನು ಅವರಿಗೆ ಅರ್ಪಿಸುತ್ತೇನೆ’ ಎಂದು ಭಜರಂಗ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.