ರಿಯೊ ಡಿ ಜನೈರೊ: ಭಾರತದ ಜನರು ಇತರ ಎಲ್ಲ ಕೆಲಸಕಾರ್ಯ ಮರೆತು ಒಬ್ಬಳು ಹುಡುಗಿಯ ಯಶಸ್ಸಿಗೆ ಈ ರೀತಿ ಜತೆಯಾಗಿ ಪ್ರಾರ್ಥಿಸಿದ ಮತ್ತೊಂದು ಉದಾಹರಣೆ ಇಲ್ಲ.
ಪಿ.ವಿ. ಸಿಂಧು ರಿಯೊ ಒಲಿಂಪಿಕ್ಸ್‌ನ ಬ್ಯಾಡ್ಮಿಂಟನ್ ಫೈನಲ್‌ನಲ್ಲಿ ‘ವೀರ ರಾಣಿ’ಯಂತೆ ಚಿನ್ನದ ಪದಕಕ್ಕಾಗಿ ಹೋರಾಡುತ್ತಿದ್ದಾಗ ದೇಶದ ನೂರು ಕೋಟಿಗೂ ಅಧಿಕ ಮಂದಿ ಅವರ ಯಶಸ್ಸಿಗಾಗಿ ಪ್ರಾರ್ಥಿಸುತ್ತಿದ್ದರು.
ಸಿಂಧು ಚಿನ್ನ ಗೆಲ್ಲಲಿಲ್ಲ ನಿಜ. ಆದರೆ ಜನರ ಹೃದಯ ಗೆದ್ದರು. ಸ್ಪೇನ್‌ನ ಕ್ಯಾರೊಲಿನಾ ಮರಿನ್ ಭಾರತದ ಆಟಗಾರ್ತಿಗೆ ಚಿನ್ನದ ಪದಕ ಲಭಿಸದಂತೆ ನೋಡಿ ಕೊಂಡರು. ಆದರೆ ಭಾರತದ ಕ್ರೀಡೆಯಲ್ಲಿ ಹೊಸ ಇತಿಹಾಸ ರಚಿಸುವುದರಿಂದ ಸಿಂಧು ಅವರನ್ನು ತಡೆಯಲು ಮರಿನ್‌ಗೆ ಆಗಲಿಲ್ಲ.
ವೈಯಕ್ತಿಕ ವಿಭಾಗದಲ್ಲಿ ಒಲಿಂಪಿಕ್ಸ್ ಬೆಳ್ಳಿ ಗೆದ್ದ ಮೊದಲ ವನಿತೆ, ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಗೆದ್ದ ಮೊದಲ ಸ್ಪರ್ಧಿ... ಒಂದಲ್ಲ, ಎರಡಲ್ಲ, ಹಲವು ಸಾಧನೆಗಳು ಸಿಂಧು ಅವರ ಕ್ರೀಡಾಜೀವನದ ಹೊಳಪನ್ನು ಹೆಚ್ಚಿಸಿದೆ.
ಶುಕ್ರವಾರ ನಡೆದ ಫೈನಲ್‌ನಲ್ಲಿ ಎರಡು ಬಾರಿಯ ವಿಶ್ವಚಾಂಪಿಯನ್ ಮರಿನ್ ಒಡ್ಡಿದ ಒತ್ತಡವನ್ನು ನಿಭಾಯಿಸುವಲ್ಲಿ ಎಡವಿದ ಸಿಂಧು 19–21, 21–12, 21–15 ರಲ್ಲಿ ಸೋಲು ಅನುಭವಿಸಿದರು.
ರೋಚಕ ಹೋರಾಟ: ದಿಗ್ಗಜರನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದ ಸಿಂಧು ಮತ್ತು ಪ್ರಸ್ತುತ ವಿಶ್ವ ಕ್ರಮಾಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆಟಗಾರ್ತಿಯ ನಡುವಿನ ಪಂದ್ಯ ರೋಚಕವಾಗಿತ್ತು.
ಬ್ಯಾಡ್ಮಿಂಟನ್ ಕ್ರೀಡೆಯ ಎಲ್ಲ ಸೌಂದರ್ಯ ಹೊರಹೊಮ್ಮುವಂತೆ ಮಾಡಿದ ಫೈನಲ್‌ನಲ್ಲಿ ಮರಿನ್ ಅವರ ಕೌಶಲ ಮತ್ತು ಸಿಂಧು ಅವರ ಸಾಮರ್ಥ್ಯದ ಮಧ್ಯೆ ‘ಸಮರ’ವೇ ನಡೆಯಿತು.
ಒಂದು ಗಂಟೆ 23 ನಿಮಿಷಗಳ ಕಾಲ ಕೋಟ್ಯಂತರ ಜನರು ಉಸಿರು ಬಿಗಿಹಿಡಿಯುವಂತೆ ಮಾಡಿದ ಪಂದ್ಯದ ಮೊದಲ ಗೇಮ್‌ನಲ್ಲಿ ಸಿಂಧು ಪ್ರಭುತ್ವ ಸಾಧಿಸಿದರು.
ಹೈದರಾಬಾದ್‌ನ ಆಟಗಾರ್ತಿ ಒಂದು ಹಂತದಲ್ಲಿ 16–19 ರಲ್ಲಿ ಹಿನ್ನಡೆಯಲ್ಲಿ ದ್ದರು. ಆ ಬಳಿಕ ಎಚ್ಚರಿಕೆಯನ್ನು ಮೈಗೂಡಿಸಿಕೊಂಡು ಆಡಿ ಸತತ ಐದು ಪಾಯಿಂಟ್ ಕಲೆಹಾಕಿ ಗೇಮ್ ಗೆದ್ದುಕೊಂಡರು. ಆದರೆ ಎರಡನೇ ಗೇಮ್‌ನಲ್ಲಿ ಮರಿನ್ ಪೂರ್ಣ ಮೇಲುಗೈ ಸಾಧಿಸಿದರು, ಅವರು ಎಡಗೈನಲ್ಲಿ ಸಿಡಿಸುತ್ತಿದ್ದ ಸ್ಮ್ಯಾಷ್‌ಗಳು ಮತ್ತು ನಿಖರ ಡ್ರಾಪ್‌ಗಳಿಗೆ ಉತ್ತರ ಕಂಡುಕೊಳ್ಳಲು ಸಿಂಧು ಸಾಕಷ್ಟು ಪ್ರಯಾಸಪಟ್ಟರು. ಈ ಗೇಮ್‌ನ ಯಾವ ಹಂತದಲ್ಲೂ ಭಾರತದ ಆಟಗಾರ್ತಿ ಎದುರಾಳಿಗೆ ಪೈಪೋಟಿ ನೀಡಲಿಲ್ಲ.
ಸಾಕಷ್ಟು ಕುತೂಹಲಕ್ಕೆ ಕಾರಣವಾದ ನಿರ್ಣಾಯಕ ಗೇಮ್‌ನಲ್ಲಿ ಸಿಂಧು 1–6 ರಲ್ಲಿ ಹಿನ್ನಡೆ ಅನುಭವಿಸಿದರು. ಆದರೆ ಅದ್ಭುತ ರೀತಿಯಲ್ಲಿ ಮರುಹೋರಾಟ ನಡೆಸಿ 10–10 ರಲ್ಲಿ ಸಮಬಲ ಸಾಧಿಸಿದರು.
ಆ ಬಳಿಕ ಏನು ಬೇಕಾದರೂ ಸಂಭವಿಸುವ ಸಾಧ್ಯತೆಯಿದ್ದುದರಿಂದ ಪಂದ್ಯದ ರೋಚಕತೆ ಹೆಚ್ಚಿತು. ಮರಿನ್ ಕೆಲವೊಂದು ಮಿಂಚಿನ ಹೊಡೆತಗಳ ಮೂಲಕ 14–10ರ ಮುನ್ನಡೆ ಪಡೆದು ಅಲ್ಪ ಒತ್ತಡ ಕಡಿಮೆಮಾಡಿಕೊಂಡರು.
ಆ ಬಳಿಕ 16–12 ರಲ್ಲಿ ಮೇಲುಗೈ ಪಡೆದರು. ಸಿಂಧು ಎರಡು ಪಾಯಿಂಟ್ ಗಿಟ್ಟಿಸಿ ಹಿನ್ನಡೆಯನ್ನು 14–16ಕ್ಕೆ ತಗ್ಗಿಸಿದರು. ಹಿನ್ನಡೆಯ ಅಂತರ ಹೆಚ್ಚುತ್ತಿ ದ್ದಂತೆಯೇ ಸಿಂಧು ಅವರ ಒತ್ತಡವೂ ಹೆಚ್ಚಿತು. ಇದು ಅವರ ಆಟದ ಮೇಲೂ ಪ್ರತಿಕೂಲ ಪರಿಣಾಮ ಬೀರತೊಡಗಿತು. ಸ್ವಯಂಕೃತ ತಪ್ಪುಗಳು ಬಂದವು.
ಕೋರ್ಟ್ ಬಳಿ ಕುಳಿತಿದ್ದ ಕೋಚ್ ಪುಲ್ಲೇಲ ಗೋಪಿಚಂದ್ ನೀಡುತ್ತಿದ್ದ ಸಲಹೆಗಳು ಸಿಂಧು ಅವರ ನೆರವಿಗೆ ಬರಲಿಲ್ಲ.
ಅನುಭವಿ ಮರಿನ್ ಮುನ್ನಡೆಯನ್ನು 18–14ಕ್ಕೆ ಹೆಚ್ಚಿಸಿಕೊಂಡರು. ಆ ಬಳಿಕ ಎದುರಾಳಿಗೆ ಒಂದು ಪಾಯಿಂಟ್ ಬಿಟ್ಟುಕೊಟ್ಟು ಚಿನ್ನಕ್ಕೆ ಮುತ್ತಿಟ್ಟರು.
20–15 ರಲ್ಲಿ ಮುನ್ನಡೆಯಲ್ಲಿದ್ದ ವೇಳೆ ಮರಿನ್ ಸಿಡಿಸಿದ ಸ್ನ್ಯಾಷ್‌ಅನ್ನು ಸಿಂಧು ಹಿಂದಿರುಗಿಸಲು ಪ್ರಯತ್ನಿಸಿದರೂ ಅದು ನೆಟ್ ದಾಟಲಿಲ್ಲ. ಸ್ಪೇನ್ ಬ್ಯಾಡ್ಮಿಂಟನ್‌ನ ‘ರಫೆಲ್ ನಡಾಲ್’ ಎಂದೇ ಪ್ರಸಿದ್ಧಿ ಪಡೆದಿರುವ ಮರಿನ್ ತಮ್ಮ ದೇಶಕ್ಕೆ ಬ್ಯಾಡ್ಮಿಂಟನ್‌ನಲ್ಲಿ ಮೊದಲ ಚಿನ್ನ ಗೆದ್ದುಕೊಟ್ಟ ಸಂಭ್ರಮದಲ್ಲಿ ಮಿಂದೆದ್ದರು. ಸಿಂಧು ಒಂದು ಕ್ಷಣ ನಿರಾಸೆ ಅನುಭವಿ ಸಿದರೂ ತಕ್ಷಣ ಚೇತರಿಸಿಕೊಂಡರು. ಬ್ಯಾಡ್ಮಿಂಟನ್‌ನಲ್ಲಿ ದೇಶಕ್ಕೆ ಮೊದಲ ಬೆಳ್ಳಿ ಜಯಿಸಿದ ಸಂತಸದಲ್ಲಿ ಮಂದಹಾಸ ಬೀರಿದರು.
ಇತ್ತೀಚಿನ ಎರಡು ವರ್ಷಗಳಲ್ಲಿ ಐದು ಸಲ ಪರಸ್ಪರ ಎದುರಾಗಿದ್ದಾಗ ಮರಿನ್ ಅವರು ಸಿಂಧು ವಿರುದ್ಧ ನಾಲ್ಕು ಸಲ ಗೆಲುವು ಪಡೆದಿದ್ದರು. ಕಳೆದ ವರ್ಷ ನಡೆದ ಡೆನ್ಮಾರ್ಕ್ ಓಪನ್ ಟೂರ್ನಿಯಲ್ಲಿ ಸಿಂಧುಗೆ ಜಯ ಒಲಿದಿತ್ತು. ಆದರೆ ಅದೇ ಸಾಧನೆ ಪುನರಾವರ್ತಿಸಲು ಅವರು ವಿಫಲರಾದರು.
ಒಕುಹರಗೆ ಕಂಚು: ಜಪಾನ್‌ನ ನೊಜೊಮಿ ಒಕುಹರ ಮಹಿಳೆಯರ ಸಿಂಗಲ್ಸ್ ವಿಭಾಗದ ಕಂಚಿನ ಪದಕ ಗೆದ್ದುಕೊಂಡರು. ಮೂರನೇ ಸ್ಥಾನವನ್ನು ನಿರ್ಧರಿಸುವ ಪಂದ್ಯದಲ್ಲಿ ಅವರು ಚೀನಾದ ಲಿ ಕ್ಸುಯೆರುಯಿ ಅವರನ್ನು ಎದುರಿಸಬೇಕಿತ್ತು. ಆದರೆ ಮಂಡಿ ನೋವಿನ ಕಾರಣ ಕ್ಸುಯೆರುಯಿ ಹಿಂದೆ ಸರಿದರು.
ಸಿಂಧು ಸಾಧನೆ
* ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಗೆದ್ದ ನಾಲ್ಕನೇ ಕ್ರೀಡಾಪಟು
* ಶೂಟರ್‌ಗಳಾದ ರಾಜ್ಯವರ್ಧನ್ ಸಿಂಗ್ ರಾಥೋಡ್ (2004), ವಿಜಯ್ ಕುಮಾರ್ (2012) ಮತ್ತು ಕುಸ್ತಿಪಟು ಸುಶೀಲ್ ಕುಮಾರ್ (2012) ಈ ಹಿಂದೆ ಇಂತಹ ಸಾಧನೆ ಮಾಡಿದ್ದರು.
* ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತಕ್ಕೆ ಪದಕ ತಂದುಕೊಟ್ಟ ಐದನೇ ಮಹಿಳೆ
* ಒಲಿಂಪಿಕ್ಸ್‌ನ ವೈಯಕ್ತಿಕ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ತಂದಿತ್ತ ಮೊದಲ ಮಹಿಳೆ
* ಕರ್ಣಂ ಮಲ್ಲೇಶ್ವರಿ (2000), ಮೇರಿ ಕೋಮ್, ಸೈನಾ ನೆಹ್ವಾಲ್ (2012) ಮತ್ತು ಸಾಕ್ಷಿ ಮಲಿಕ್ (2016) ಕಂಚು ಗೆದ್ದಿದ್ದರು.
* ಒಲಿಂಪಿಕ್ಸ್ ಪದಕ ಜಯಿಸಿದ ಭಾರತದ ಅತಿಕಿರಿಯ ಕ್ರೀಡಾಪಟು
ಸಿಂಧುಗೆ ಬ್ಯಾಡ್ಮಿಂಟನ್ ಸಂಸ್ಥೆಯಿಂದ ₹ 50 ಲಕ್ಷ ಪುರಸ್ಕಾರ
ನವದೆಹಲಿ (ಪಿಟಿಐ): ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಪಿ.ವಿ. ಸಿಂಧು ಅವರಿಗೆ ₹ 50 ಲಕ್ಷ ನಗದು ಪುರಸ್ಕಾರ ನೀಡುವುದಾಗಿ ಭಾರತ ಬ್ಯಾಡ್ಮಿಂಟನ್ ಸಂಸ್ಥೆ (ಬಿಎಐ) ಘೋಷಿಸಿದೆ.
ಹೈದರಾಬಾದಿನ ಸಿಂಧು ಅವರ ಕೋಚ್ ಪುಲ್ಲೇಲ ಗೋಪಿಚಂದ್ ಅವರಿಗೆ ₹ 10 ಲಕ್ಷ ನಗದು ಪ್ರಶಸ್ತಿಯನ್ನೂ ಸಂಸ್ಥೆ ಘೋಷಿಸಿದೆ.
ಸೈನಾ ನೆಹ್ವಾಲ್ ಅವರು 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು.
‘ಸಿಂಧು ಅವರ ಐತಿಹಾಸಿಕ ಸಾಧನೆಯು ಶ್ಲಾಘನಾರ್ಹ. ಅವರು ವಿಶ್ವ ಕ್ರೀಡಾ ರಂಗದಲ್ಲಿ ಭಾರತದ ಘನತೆಯನ್ನು ಹೆಚ್ಚಿಸಿದ್ದಾರೆ. ಅವರು ಗೆದ್ದ ಬೆಳ್ಳಿ ಪದಕವು ಬ್ಯಾಡ್ಮಿಂಟನ್ ಆಡುವ ಮತ್ತಷ್ಟು ಮಕ್ಕಳಿಗೆ ಪ್ರೇರಣೆಯಾಗಲಿದೆ’ ಎಂದು ಬಿಎಐ ಅಧ್ಯಕ್ಷ ಡಾ. ಅಖಿಲೇಶ್ ದಾಸ್ ಗುಪ್ತಾ ಹೇಳಿದ್ದಾರೆ.
ತೆಲಂಗಾಣ ಸರ್ಕಾರ ಸಿಂಧು ಅವರಿಗೆ ₹ 1 ಕೋಟಿ ನೀಡುವುದಾಗಿ ಹೇಳಿದೆ.
ಮುಖ್ಯಾಂಶಗಳು
* ಮೊದಲ ಗೇಮ್ ಗೆದ್ದರೂ ಹಿಡಿತ ಕೈಬಿಟ್ಟ ಸಿಂಧು
* ಬ್ಯಾಡ್ಮಿಂಟನ್‌ನಲ್ಲಿ ಸ್ಪೇನ್‌ಗೆ ಮೊದಲ ಚಿನ್ನ ತಂದಿತ್ತ ಮರಿನ್
* ಬೆಳ್ಳಿ ಜಯಿಸಿದ ಭಾರತದ ಮೊದಲ ಆಟಗಾರ್ತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.