ADVERTISEMENT

ಭಾರತ- ಆಸ್ಟ್ರೇಲಿಯಾ ನಡುವಿನ ಅಭ್ಯಾಸ ಪಂದ್ಯ ಇಂದು; ಪ್ರಬಲ ಪೈಪೋಟಿ ನಿರೀಕ್ಷೆ

ಮಹಮ್ಮದ್ ನೂಮಾನ್
Published 12 ಫೆಬ್ರುವರಿ 2011, 19:30 IST
Last Updated 12 ಫೆಬ್ರುವರಿ 2011, 19:30 IST

ಬೆಂಗಳೂರು: ಅಂತಿಮ ಗುರಿ ಏನೆಂಬುದನ್ನು ಸ್ಪಷ್ಟವಾಗಿ ಅರಿತುಕೊಂಡಿರುವ ಮಹೇಂದ್ರ ಸಿಂಗ್ ದೋನಿ ಬಳಗ ಐಸಿಸಿ ವಿಶ್ವಕಪ್ ಟ್ರೋಫಿಯೆಡೆಗಿನ ತನ್ನ ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಲಿದೆ.

ಉದ್ಯಾನನಗರಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ಕಳೆದ ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾದ ಸವಾಲನ್ನು ಎದುರಿಸಲಿದೆ.

ಈ ಅಭ್ಯಾಸ ಪಂದ್ಯಕ್ಕೆ ಅಧಿಕೃತ ಮಾನ್ಯತೆ ಇಲ್ಲದೇ ಇರಬಹುದು. ಇಲ್ಲಿ ಮೂಡುವ ದಾಖಲೆಗಳಿಗೆ ಬೆಲೆ ಇಲ್ಲದಿರಬಹುದು. ಆದರೆ ಉಭಯ ತಂಡಗಳು ಪಂದ್ಯವನ್ನು ಗಂಭೀರವಾಗಿ ಪರಿಗಣಿಸಿವೆ. ಏಕೆಂದರೆ ಅಭ್ಯಾಸ ಪಂದ್ಯದಲ್ಲಿ ಗೆಲುವು ಸಾಧಿಸಿ ಟೂರ್ನಿಯನ್ನು ಧನಾತ್ಮಕ ರೀತಿಯಲ್ಲಿ ಆರಂಭಿಸುವ ಗುರಿಯನ್ನು ಎರಡೂ ತಂಡಗಳು ಹೊಂದಿವೆ.

ADVERTISEMENT

ಭಾರತ ತಂಡ ಕಪ್ ಗೆಲ್ಲುವ ಫೇವರಿಟ್ ಎಂಬ ಹಣೆಪಟ್ಟಿಯೊಂದಿಗೆ ಈ ವಿಶ್ವಕಪ್‌ನಲ್ಲಿ ಆಡುತ್ತಿದೆ. ದೇಶದ ಅಸಂಖ್ಯ ಅಭಿಮಾನಿಗಳ ನಿರೀಕ್ಷೆ ‘ಮಹಿ’ ಬಳಗದ ಮೇಲಿದೆ. ಆದ್ದರಿಂದ ಆಸೀಸ್ ವಿರುದ್ಧ ಗೆಲುವು ಪಡೆದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದು ಅಗತ್ಯ.

ಈ ಪಂದ್ಯದ ಮೂಲಕ ಮುಂಬರುವ ಮಹಾ ಸಮರಕ್ಕೆ ತಕ್ಕ ರೀತಿಯಲ್ಲಿ ಸಜ್ಜಾಗುವ ಅವಕಾಶ ಭಾರತಕ್ಕೆ ಲಭಿಸಿದೆ. ತಂಡದ ಯಾವ ವಿಭಾಗದಲ್ಲಿ ಕೊರತೆಯಿದೆ, ಎಲ್ಲಿ ಸುಧಾರಣೆ ಕಾಣಬೇಕು, ವಿಶ್ವಕಪ್‌ನ ಪಂದ್ಯಗಳಿಗೆ ಯಾವ ರೀತಿಯಲ್ಲಿ ಯೋಜನೆ ರೂಪಿಸಿಕೊಳ್ಳಬೇಕು ಎಂಬುದನ್ನು ಈ ಪಂದ್ಯದ ಮೂಲಕ ಅರಿತುಕೊಳ್ಳುವುದು ಮಹಿ ಬಳಗದ ಗುರಿ.

ಜೊತೆಗೆ ಭಾರತದ ಕೆಲವು ಆಟಗಾರರಿಗೆ ಫಿಟ್‌ನೆಸ್ ಸಾಬೀತುಪಡಿಸಲು ಕೂಡಾ ಈ ಪಂದ್ಯ ಅವಕಾಶ ಕಲ್ಪಿಸಿಕೊಟ್ಟಿದೆ. ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಅವರು ಗಾಯದ ಕಾರಣ ಅಲ್ಪ ವಿಶ್ರಾಂತಿ ಪಡೆದು ತಂಡಕ್ಕೆ ಮರಳಿದ್ದಾರೆ.

ಅದೇ ರೀತಿ ನಾಯಕ ದೋನಿ, ಸುರೇಶ್ ರೈನಾ ಮತ್ತು ಯುವರಾಜ್ ಸಿಂಗ್ ಅವರಿಗೆ ಫಾರ್ಮ್‌ಗೆ ಮರಳಲು ವೇದಿಕೆ ಲಭಿಸಿದೆ. ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಈ ಮೂವರೂ ರನ್ ಬರ ಎದುರಿಸಿದ್ದರು. ಕಳೆದ ನಾಲ್ಕು ದಿನಗಳಿಂದ ಭಾರತ ತಂಡ ಇಲ್ಲಿ ಅಭ್ಯಾಸ ನಿರತವಾಗಿದೆ. ಇದರಿಂದ ಎಲ್ಲ ಆಟಗಾರರೂ ಉದ್ಯಾನನಗರಿಯ ವಾತಾವರಣಕ್ಕೆ ಹೊಂದಿಕೊಂಡಿದ್ದಾರೆ.

ಮತ್ತೊಂದೆಡೆ ಆಸ್ಟ್ರೇಲಿಯಾ ತಂಡ ಕಳೆದ ಎರಡು ದಿನಗಳಿಂದ ಇಲ್ಲಿ ಕಠಿಣ ಅಭ್ಯಾಸ ನಡೆಸಿದೆ. ಹೆಚ್ಚಿನವರು ಆಸೀಸ್‌ಗೆ ಈ ಬಾರಿ ಕಪ್ ಗೆಲ್ಲುವ ‘ಫೇವರಿಟ್’ ಎಂಬ ಹಣೆಪಟ್ಟಿ ನೀಡಿಲ್ಲ. ಇತ್ತೀಚಿನ ದಿನಗಳಲ್ಲಿ ತಂಡ ಹಿನ್ನಡೆ ಅನುಭವಿಸಿದ್ದೇ ಅದಕ್ಕೆ ಕಾರಣ. ಆದರೆ ಅಭ್ಯಾಸ ಪಂದ್ಯದಲ್ಲಿ ಗೆಲುವು ಪಡೆದು ತಾನು ಕೂಡಾ ಟ್ರೋಫಿಯೆಡೆಗಿನ ಓಟದಲ್ಲಿದ್ದೇನೆ ಎಂಬುದನ್ನು ತೋರಿಸಿಕೊಡಲು ಪಾಂಟಿಂಗ್ ಬಳಗಕ್ಕೆ ಅವಕಾಶ ಲಭಿಸಿದೆ. ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆದ ಏಕದಿನ ಸರಣಿಯಲ್ಲಿ 6-1 ಅಂತರದ ಗೆಲುವು ಸಾಧಿಸಿ ಆಸೀಸ್ ತಂಡ ಇಲ್ಲಿಗೆ ಆಗಮಿಸಿದೆ.

ರಜಾದಿನವಾದ ಕಾರಣ ಚಿನ್ನಸ್ವಾಮಿ ಕ್ರೀಡಾಂಗಣ ಕಿಕ್ಕಿರಿದು ತುಂಬುವ ಸಾಧ್ಯತೆಯಿದೆ. ಮಾರಾಟಕ್ಕಿಟ್ಟ ಎಲ್ಲ ಟಿಕೆಟ್‌ಗಳೂ ಬಿಕರಿಯಾಗಿವೆ. ಅಭ್ಯಾಸ ಪಂದ್ಯವಾದರೂ ಕ್ರಿಕೆಟ್ ಪ್ರೇಮಿಗಳು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಅನಿಲ್ ಕುಂಬ್ಳೆ ನೇತೃತ್ವದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ)ಗೆ ಕೂಡಾ ಇದೊಂದು ಅಭ್ಯಾಸ ಪಂದ್ಯ. ಏಕೆಂದರೆ ಮುಂದಿನ ದಿನಗಳಲ್ಲಿ ವಿಶ್ವಕಪ್‌ನ ಐದು ಪಂದ್ಯಗಳಿಗೆ ಚಿನ್ನಸ್ವಾಮಿ ಕ್ರೀಡಾಂಗಣ ವೇದಿಕೆಯಾಗಲಿದೆ. ಅದರಲ್ಲಿ ಇಂಗ್ಲೆಂಡ್- ಭಾರತ (ಫೆಬ್ರುವರಿ 27) ನಡುವಿನ ಮಹತ್ವದ ಪಂದ್ಯವೂ ಸೇರಿದೆ. ಕೋಲ್ಕತ್ತದಲ್ಲಿ ನಡೆಯಬೇಕಿದ್ದ ಈ ಪಂದ್ಯ ಕೊನೆಯ ಕ್ಷಣದಲ್ಲಿ ಬೆಂಗಳೂರಿಗೆ ಸ್ಥಳಾಂತರಗೊಂಡಿತ್ತು.

ತಂಡಗಳು: ಭಾರತ: ಮಹೇಂದ್ರ ಸಿಂಗ್ ದೋನಿ (ನಾಯಕ), ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಸುರೇಶ್ ರೈನಾ, ವಿರಾಟ್ ಕೊಹ್ಲಿ, ಯೂಸುಫ್ ಪಠಾಣ್, ಹರಭಜನ್ ಸಿಂಗ್, ಆರ್. ಅಶ್ವಿನ್, ಪಿಯೂಷ್ ಚಾವ್ಲಾ, ಜಹೀರ್ ಖಾನ್, ಆಶೀಶ್ ನೆಹ್ರಾ, ಎಸ್. ಶ್ರೀಶಾಂತ್, ಮುನಾಫ್ ಪಟೇಲ್.

ಆಸ್ಟ್ರೇಲಿಯಾ: ರಿಕಿ ಪಾಂಟಿಂಗ್ (ನಾಯಕ), ಮೈಕಲ್ ಕ್ಲಾರ್ಕ್, ಶೇನ್ ವ್ಯಾಟ್ಸನ್, ಬ್ರಾಡ್ ಹಡಿನ್, ಕ್ಯಾಮರೂನ್ ವೈಟ್, ಕಾಲಮ್ ಫರ್ಗ್ಯುಸನ್, ಡೇವಿಡ್ ಹಸ್ಸಿ, ಟಿಮ್ ಪೈನ್, ಸ್ಟೀನ್ ಸ್ಮಿತ್, ಜಾನ್ ಹೇಸ್ಟಿಂಗ್ಸ್, ಮಿಷೆಲ್ ಜಾನ್ಸನ್, ಜಾಸನ್ ಕ್ರೇಜಾ, ಬ್ರೆಟ್ ಲೀ, ಡಗ್ ಬೋಲಿಂಜರ್, ಶಾನ್ ಟೇಟ್.
 

ಪಂದ್ಯ: ಮಧ್ಯಾಹ್ನ 2.30ಕ್ಕೆ ಆರಂಭವಾಗಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.