ADVERTISEMENT

ಭಾರತ- ಕಿವೀಸ್ ಪಂದ್ಯ ಡ್ರಾ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2012, 19:30 IST
Last Updated 21 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ): ಭಾರತ ಮಹಿಳಾ ತಂಡದವರು ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ನಾಲ್ಕು ರಾಷ್ಟ್ರಗಳ ಹಾಕಿ ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್ ಜೊತೆ 3-3 ಗೋಲುಗಳ ಡ್ರಾ ಸಾಧಿಸಿದರು.

ವಿರಾಮದ ವೇಳೆಗೆ 1-2ರಲ್ಲಿ ಹಿನ್ನಡೆ ಅನುಭವಿಸಿದ್ದ ಭಾರತ ಆ ಬಳಿಕ ಮರುಹೋರಾಟ ನಡೆಸಿ ಸೋಲು ತಪ್ಪಿಸುವಲ್ಲಿ ಯಶಸ್ವಿಯಾಯಿತು. ರಾಣಿ, ವಂದನಾ ಕಟಾರಿಯಾ ಮತ್ತು ಚಂಚನ್ ದೇವಿ ಭಾರತದ ಪರ ಗೋಲು ಗಳಿಸಿದರೆ, ಕೇಟಿ ಗ್ಲಿನ್, ಕ್ಯಾಥರಿನ್ ಫಿನ್ಸೇಸನ್ ಹಾಗೂ ಕ್ರಿಸ್ಟಲ್ ಫರ್ಗೆಸನ್ ಆತಿಥೇಯ ತಂಡದ ಪರ ಚೆಂಡನ್ನು ಗುರಿ ಸೇರಿಸಿದರು.

ಆಕ್ರಮಣಕಾರಿ ಆಟದ ಪ್ರದರ್ಶನ ನೀಡಿದ ನ್ಯೂಜಿಲೆಂಡ್ ಮೊದಲ 10 ನಿಮಿಷಗಳಲ್ಲೇ 2-0 ಗೋಲುಗಳ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಯಿತು. ರಾಣಿ 15ನೇ ನಿಮಿಷದಲ್ಲಿ ಭಾರತಕ್ಕೆ ಮೊದಲ ಗೋಲು ತಂದಿತ್ತರು.
ಎರಡನೇ ಅವಧಿಯಲ್ಲಿ ವಂದನಾ (55ನೇ ನಿಮಿಷ) ಮತ್ತು ಚಂಚನ್ ದೇವಿ (56) ಗೋಲು ಗಳಿಸಿದ    ಕಾರಣ ಭಾರತ 3-2 ಮುನ್ನಡೆ ಸಾಧಿಸಿತು.

ಆದರೆ 66ನೇ ನಿಮಿಷದಲ್ಲಿ ಕಿವೀಸ್ ತಂಡದ ಕ್ರಿಸ್ಟಲ್ ಗೋಲು ಗಳಿಸಿದ ಕಾರಣ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿತು. ಭಾನುವಾರ ಚಿನ್ನದ ಪದಕಕ್ಕಾಗಿ ನಡೆಯುವ ಪಂದ್ಯದಲ್ಲಿ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಎದುರಾಗಲಿವೆ. ಭಾರತ ಮತ್ತು ಅಮೆರಿಕ ಕಂಚಿನ ಪದಕಕ್ಕಾಗಿ ಪೈಪೋಟಿ ನಡೆಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.