ADVERTISEMENT

ಭಾರತ ಕ್ರಿಕೆಟ್‌ ತಂಡಕ್ಕೆ ಸ್ಟಾರ್‌ ಇಂಡಿಯಾ ಪ್ರಾಯೋಜಕತ್ವ

ಮೂರು ವರ್ಷಗಳ ಅವಧಿಗೆ ಬಿಸಿಸಿಐ ಜೊತೆ ಒಪ್ಪಂದ; ಸಹಾರಾ ‘ಔಟ್‌’

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2013, 19:30 IST
Last Updated 9 ಡಿಸೆಂಬರ್ 2013, 19:30 IST

ಚೆನ್ನೈ (ಪಿಟಿಐ): ಸ್ಟಾರ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಮುಂದಿನ ಮೂರು ವರ್ಷಗಳ ಅವಧಿಗೆ ಭಾರತ ಕ್ರಿಕೆಟ್‌ ತಂಡದ ಪ್ರಾಯೋಜಕತ್ವ ತನ್ನದಾಗಿಸಿಕೊಂಡಿದೆ.

ಸಹಾರಾ ಇಂಡಿಯಾ ಸಲ್ಲಿಸಿದ್ದ ಬಿಡ್‌ ‘ಅನರ್ಹವಾಗಿದೆ’ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಹೇಳಿದೆ. ಇದರಿಂದ ಪ್ರಾಯೋಜಕತ್ವದ ಹಕ್ಕು ಸ್ಟಾರ್‌ ಇಂಡಿಯಾ ಪಾಲಾಗಿದೆ.

‘ಬಿಸಿಸಿಐ, ಐಸಿಸಿ ಮತ್ತು ಎಸಿಸಿ ನಡೆಸುವ ಸರಣಿ ಹಾಗೂ ಪಂದ್ಯಗಳ ವೇಳೆ ಭಾರತ ತಂಡದ ಪ್ರಾಯೋಜಕತ್ವದ ಹಕ್ಕನ್ನು ಸ್ಟಾರ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ಗೆ ನೀಡಲಾಗಿದೆ. 2014ರ ಜನವರಿ 1 ರಿಂದ 2017ರ ಮಾರ್ಚ್‌ 31ರ ವರೆಗಿನ ಅವಧಿಗೆ ಈ ಒಪ್ಪಂದ ನಡೆದಿದೆ’ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಸಂಜಯ್‌ ಜಗದಾಳೆ ತಿಳಿಸಿದೆ.

ಸೋಮವಾರ ನಡೆದ ಮಂಡಳಿಯ ಮಾರುಕಟ್ಟೆ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ‘ಸ್ಟಾರ್‌ ಇಂಡಿಯಾ ಇನ್ನು ಮುಂದೆ ರಾಷ್ಟ್ರೀಯ ಕ್ರಿಕೆಟ್‌ ತಂಡದ ಅಧಿಕೃತ ಪ್ರಾಯೋಜಕ ಎನಿಸಲಿದೆ. ಟೀಮ್‌ ಇಂಡಿಯಾ, ಭಾರತ ‘ಎ’ ತಂಡ, 19 ವರ್ಷ ವಯಸ್ಸಿನೊಳಗಿನವರ ಪುರುಷರ ತಂಡ, ಮತ್ತು ರಾಷ್ಟ್ರೀಯ ಮಹಿಳಾ ತಂಡದವರು ತೊಡುವ ಜರ್ಸಿಯಲ್ಲಿ ಇನ್ನು ಸ್ಟಾರ್‌ ಇಂಡಿಯಾದ ಲೋಗೊ ಇರಲಿದೆ’ ಎಂದು ಅವರು ನುಡಿದರು.

ಪ್ರತಿ ಅಂತರರಾಷ್ಟ್ರೀಯ ಪಂದ್ಯಕ್ಕೆ ಸ್ಟಾರ್‌ ಇಂಡಿಯಾ ಬಿಸಿಸಿಐಗೆ ಎಷ್ಟು ಮೊತ್ತ ನೀಡಲಿದೆ ಎಂಬುದನ್ನು ಮಂಡಳಿ ಸ್ಪಷ್ಟಪಡಿಸಿಲ್ಲ. ಆದರೆ ಮೂಲಗಳ ಪ್ರಕಾರ ಪ್ರತಿ ಪಂದ್ಯಕ್ಕೆ ಸ್ಟಾರ್‌ ರೂ. 1.92 ಕೋಟಿ ನೀಡಲಿದೆ ಎನ್ನಲಾಗಿದೆ.

‘ಭಾರತ ಕ್ರಿಕೆಟ್‌ ತಂಡದ ಅಧಿಕೃತ ಪ್ರಾಯೋಜಕತ್ವರಾಗಿ ರುವುದಕ್ಕೆ ಸಂತಸವಾಗುತ್ತಿದೆ. ಅದ್ಭುತ ಪ್ರತಿಭೆಗಳನ್ನು ಒಳಗೊಂಡ ತಂಡದ ಜೊತೆ ಗುರುತಿಸಿಕೊಳ್ಳಲು ಸಾಧ್ಯವಾಗಿರುವುದು ಹೆಮ್ಮೆಯ ಸಂಗತಿ’ ಎಂದು ಸ್ಟಾರ್‌ ಇಂಡಿಯಾ ಸಿಇಒ ಉದಯ ಶಂಕರ್‌ ಹೇಳಿದ್ದಾರೆ.

ಸಹಾರಾ ಆರೋಪ: ಪ್ರಾಯೋಜಕತ್ವದ ಹಕ್ಕು ನೀಡಲು ಬಿಸಿಸಿಐ ನಡೆಸಿದ ಬಿಡ್‌ ಪ್ರಕ್ರಿಯೆ ‘ಪೂರ್ವನಿಯೋಜಿತ’ ವಾದದ್ದು ಎಂದು ಸಹಾರಾ ಆರೋಪಿಸಿದೆ.
ಸಹಾರಾ 2010 ರಿಂದ ಬಿಸಿಸಿಐಗೆ ಪ್ರತಿ ಪಂದ್ಯಕ್ಕೆ ರೂ. 3.34 ಕೋಟಿ ನೀಡುತ್ತಾ ಬಂದಿತ್ತು. ಮಾತ್ರವಲ್ಲ, ಈ ಬಾರಿಯ ಬಿಡ್‌ ನಲ್ಲಿ ಬಿಸಿಸಿಐ ನಡೆಸುವ ಪ್ರತಿ ಪಂದ್ಯಕ್ಕೆ ರೂ. 2.35 ಕೋಟಿ ಹಾಗೂ ಐಸಿಸಿ ನಡೆಸುವ ಪಂದ್ಯಕ್ಕೆ ರೂ. 91 ಲಕ್ಷ ನೀಡಲು ಮುಂದಾಗಿತ್ತು.

ಅಂದರೆ ಮೂರು ವರ್ಷಗಳ ಅವಧಿಗೆ ಒಟ್ಟು ರೂ. 252 ಕೋಟಿ ನೀಡಲು ಸಹಾರಾ ಸಿದ್ಧವಾಗಿತ್ತು. ಸ್ಟಾರ್‌ ಇಂಡಿಯಾದ ಮೊತ್ತಕ್ಕಿಂತ (ರೂ. 203 ಕೋಟಿ) ಇದು ಹೆಚ್ಚು. ಆದರೂ ಸಹಾರಾ ಸಲ್ಲಿಸಿದ ಬಿಡ್‌ ‘ಅನರ್ಹ’ ಎಂದು ಬಿಸಿಸಿಐ ಹೇಳಿದೆ.

ಐಪಿಎಲ್‌ನ ಪುಣೆ ಫ್ರಾಂಚೈಸ್‌ಗೆ ಸಂಬಂಧಿಸಿದಂತೆ ಸಹಾರಾ ಹಾಗೂ ಬಿಸಿಸಿಐ ನಡುವೆ ಬಿಕ್ಕಟ್ಟು ಉಂಟಾಗಿತ್ತು. ಇದೇ ಕಾರಣದಿಂದ ಬಿಸಿಸಿಐ ಪ್ರಾಯೋಜಕತ್ವದ ಹಕ್ಕನ್ನು ಸಹಾರಾಗೆ ನೀಡಲು ಮುಂದಾಗಿಲ್ಲ ಎನ್ನಲಾಗಿದೆ. ‘ನಮ್ಮ ಜೊತೆ ಬಿಕ್ಕಟ್ಟು ಇದೆ ಎಂದಾದರೆ, ಬಿಡ್‌ ಪ್ರಕ್ರಿಯೆಯ ಆರಂಭದಲ್ಲೇ ನಮ್ಮನ್ನು ಅನರ್ಹಗೊಳಿಸಬಹು ದಿತ್ತು. ಸಂಪೂರ್ಣ ಪ್ರಕ್ರಿಯೆ ಪೂರ್ವ ನಿಯೋಜಿತ’ ಎಂದು ಸಹಾರಾದ ಕಾರ್ಪೊರೇಟ್‌ ವಿಭಾಗದ ಮುಖ್ಯಸ್ಥ ಅಭಿಜಿತ್‌ ಸರ್ಕಾರ್‌ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.