ಇಸ್ಲಾಮಾಬಾದ್ (ಪಿಟಿಐ): ಭಾರತ ಹಾಗೂ ಪಾಕಿಸ್ತಾನ ದೇಶಗಳ ನಡುವಿನ ಸಂಬಂಧವನ್ನು ಉತ್ತಮ ಗೊಳಿಸುವ ನಿಟ್ಟಿಯಲ್ಲಿ ಭಾರತ ಹಾಕಿ ತಂಡದ ಜೊತೆ ಟೆಸ್ಟ್ ಸರಣಿಯನ್ನು ಆಡಲು ಪಾಕಿಸ್ತಾನ ಹಾಕಿ ಫೆಡರೇಷನ್ (ಪಿಎಚ್‌ಎಫ್) ಒಲವು ತೋರಿದೆ.
‘ಈ ವರ್ಷದ ನಂತರ ಹಾಕಿ ಸರಣಿ ನಡೆಸಲು ಉದ್ದೇಶಿಸಿದ್ದು, ಸರಣಿಯನ್ನು ಲಾಹೋರ್, ಕರಾಚಿ, ಫೈಸಲಾಬಾದ್‌ನಲ್ಲಿ ನಡೆಸಲು ಉದ್ದೇಶಿಸಲಾಗಿದೆ’ ಎಂದು ಪಿಎಚ್‌ಎಫ್ ಹೇಳಿದೆ. ಈ ಕುರಿತು ಪಾಕ್ ಹಾಕಿ ಫೆಡರೇಷನ್‌ನ ಅಧ್ಯಕ್ಷ ಖಾಸಿಂ ಜಿಯಾ ಕ್ರೀಡಾ ಸಚಿವರೊಂದಿಗೆ ಚರ್ಚೆ ನಡೆಸಿದ್ದಾರೆ.
‘ಭಾರತ ಹಾಕಿ ತಂಡದೊಂದಿಗೆ ಮೂರು ಪಂದ್ಯಗಳ ಸರಣಿಯನ್ನಾದರೂ ಆಡಿಸಬೇಕು ಎನ್ನುವ ಒಲವು ಹೊಂದಿದ್ದೇವೆ. ಈ ಕುರಿತು ಕ್ರೀಡಾ ಸಚಿವರೊಂದಿಗೆ ಚರ್ಚೆ ನಡೆಸಲಾಗಿದೆ’ ಎಂದು ಜಿಯಾ ಹೇಳಿದ್ದಾರೆ.
‘ಭಾರತ ಹಾಗೂ ಪಾಕಿಸ್ತಾನದ ನಡುವಣ ಹಾಕಿ ಸರಣಿ ಉಭಯ ದೇಶಗಳ ನಡುವೆ ಉತ್ತಮ ಬಾಂಧವ್ಯ ಬೆಸೆಯಲು ನೆರವಾಗುತ್ತದೆ. ಎರಡೂ ದೇಶಗಳ ಜನರು ಹತ್ತಿರವಾಗಲು ಇದು ವೇದಿಕೆಯಾಗಲಿದೆ’ ಎಂದು ಕ್ರೀಡಾ ಸಚಿವ ಹೇಳಿದ್ದಾರೆ. ಹಾಕಿ ಸರಣಿ ನಡೆಸಬೇಕೆನ್ನುವ ಪಿಎಚ್‌ಎಫ್ ಹಾಗೂ ಕ್ರೀಡಾ ಸಚಿವರ ನಿರ್ಧಾರಕ್ಕೆ ಪಾಕ್ ಪ್ರಧಾನಿ ಯೂಸುಫ್ ರಜಾ ಗಿಲಾನಿ ಒಪ್ಪಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.