ADVERTISEMENT

ಭಾರತ-ಬಾಂಗ್ಲಾ ಪಂದ್ಯ ಡ್ರಾ

ಸ್ಯಾಫ್‌ ಫುಟ್‌ಬಾಲ್‌: ಸೋಲಿನ ಸುಳಿಯಿಂದ ಪಾರಾದ ಚೆಟ್ರಿ ಬಳಗ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 19:59 IST
Last Updated 3 ಸೆಪ್ಟೆಂಬರ್ 2013, 19:59 IST

ಕಠ್ಮಂಡು (ಪಿಟಿಐ): ನಾಯಕ ಸುನಿಲ್‌ ಚೆಟ್ರಿ ‘ಇಂಜುರಿ’ ಅವಧಿಯಲ್ಲಿ ಗಳಿಸಿದ ಗೋಲಿನ ನೆರವಿನಿಂದ ಭಾರತ ತಂಡ ಸೋಲಿನ ಸುಳಿಯಿಂದ ಪಾರಾಯಿತು. ಸ್ಯಾಫ್‌ ಫುಟ್‌ಬಾಲ್‌ ಚಾಂಪಿ­ಯನ್‌ಷಿಪ್‌ನ ಪಂದ್ಯದಲ್ಲಿ ಮಂಗಳವಾರ ಭಾರತ ತಂಡ ಬಾಂಗ್ಲಾದೇಶದ ಎದುರು 1–1 ಗೋಲಿನ ಡ್ರಾ ಸಾಧಿಸಿತು.

ಹಾಲಿ ಚಾಂಪಿಯನ್‌ ಭಾರತ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ಎದುರು 1–0 ಗೋಲಿನ ಪ್ರಯಾಸದ ಗೆಲುವು ಪಡೆದಿತ್ತು. ಬಾಂಗ್ಲಾ ವಿರುದ್ಧವೂ ತಂಡ ಚೇತರಿಕೆಯ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು.

ಬಾಂಗ್ಲಾ ಎದುರಿನ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿ ಮುಜುಗ­ರಕ್ಕೆ ಒಳಗಾಗುವ ಸಾಧ್ಯತೆಯಿತ್ತು. 82ನೇ ನಿಮಿಷದಲ್ಲಿ ಅತೀಕುರ್‌ ರಹ್ಮಾನ್‌ ಮೆಶು ಗೋಲು ಗಳಿಸಿ ಬಾಂಗ್ಲಾಕ್ಕೆ ಮುನ್ನಡೆ ತಂದಿತ್ತರು.

ಪಂದ್ಯ ಕೊನೆಗೊಳ್ಳಲು ಕೆಲವೇ ನಿಮಿಷಗಳಿರುವಾಗ ಚೆಟ್ರಿ (90+4) ಭಾರತಕ್ಕೆ ಸಮಬಲದ ಗೋಲು ತಂದಿತ್ತರು. ಭಾರತ ತಂಡದ ನಾಯಕ ಪಂದ್ಯದುದ್ದಕ್ಕೂ ನೀರಸ ಪ್ರದರ್ಶನ ನೀಡಿದ್ದರು. ಆದರೆ ಕೊನೆಯಲ್ಲಿ ದೊರೆತ ಫ್ರೀ ಕಿಕ್‌ ಅವಕಾಶದಲ್ಲಿ ಚೆಂಡನ್ನು ಗುರಿ ಸೇರಿಸಿ ತಂಡವನ್ನು ಅವಮಾನದಿಂದ ಪಾರು ಮಾಡಿದರು.

ಡ್ರಾ ಸಾಧಿಸಿದ ಕಾರಣ ಉಭಯ ತಂಡಗಳು ತಲಾ ಒಂದು ಪಾಯಿಂಟ್‌ ಪಡೆದವು. ಒಟ್ಟು ನಾಲ್ಕು ಪಾಯಿಂಟ್‌ ಹೊಂದಿರುವ ಭಾರತ ತಂಡ ಗುರುವಾರ ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ನೇಪಾಳದ ಸವಾಲನ್ನು ಎದುರಿಸಲಿದೆ.

ಭಾರತ ತಂಡದ ಕೋಚ್‌ ವಿಮ್‌ ಕೊವರ್‌ಮನ್ಸ್‌ ತಮ್ಮ ಎಲ್ಲ ತಂತ್ರಗಳನ್ನು ಬಳಸಿದರೂ ಗೆಲುವು ದೊರೆಯಲಿಲ್ಲ.

ಚೆಟ್ರಿ, ಅರ್ನಾಬ್‌ ಮೊಂಡಲ್‌ ಮತ್ತು ನಿರ್ಮಲ್‌ ಚೆಟ್ರಿ ಈ ಪಂದ್ಯದಲ್ಲಿ ‘ಹಳದಿ ಕಾರ್ಡ್‌’ ಕೂಡಾ ಪಡೆದರು. ‘ಬಾಂಗ್ಲಾ ವಿರುದ್ಧ ಸೋಲು ಎದುರಾಗಿದ್ದರೆ ಅದೊಂದು ದುರಂತ ಎನಿಸುತ್ತಿತ್ತು’ ಎಂದು ಪಂದ್ಯದ ಬಳಿಕ ಸುನಿಲ್‌ ಚೆಟ್ರಿ ಹೇಳಿದ್ದಾರೆ.

ಭಾರತ ತಂಡ ಮೊದಲ ಅವಧಿಯಲ್ಲಿ ಚೆಂಡಿನ ಮೇಲೆ ಪೂರ್ಣ ನಿಯಂತ್ರಣ ಸಾಧಿಸಿತ್ತು. ಆದರೆ ಆಟಗಾರರ ನಡುವಿನ ಹೊಂದಾಣಿಕೆಯ ಕೊರತೆಯಿಂದಾಗಿ ಗೋಲುಗಳು ಬರಲಿಲ್ಲ. 8ನೇ ನಿಮಿಷದಲ್ಲಿ ಭಾರತಕ್ಕೆ ಮೊದಲ ಅವಕಾಶ ಲಭಿಸಿತ್ತು. ಆದರೆ ಚೆಟ್ರಿ ಚೆಂಡನ್ನು ಗುರಿ ಸೇರಿಸಲು ವಿಫಲರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.