ADVERTISEMENT

ಮಂಗಳೂರಿನಲ್ಲಿ ಹಾಫ್ ಮ್ಯಾರಥಾನ್

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 19:30 IST
Last Updated 5 ಜನವರಿ 2012, 19:30 IST

ಮಂಗಳೂರು: ಇದೇ ತಿಂಗಳ 29ರಂದು ಪಣಂಬೂರು ಬೀಚ್ ಪರಿಸರದಲ್ಲಿ `ನಿಟ್ಟೆ ಸೆಲೆಬ್ರೇಷನ್ ಹಾಫ್ ಮ್ಯಾರಥಾನ್ ಮತ್ತು ದೂರ ಅಂತರದ ಓಟದ ಸ್ಪರ್ಧೆಗಳು ನಡೆಯಲಿದೆ.

ನಿಟ್ಟೆ ಶಿಕ್ಷಣ ಸಂಸ್ಥೆ ಪ್ರಾಯೋಜಕತ್ವದಲ್ಲಿ ಈ ಸ್ಪರ್ಧೆ ನಡೆಯುತ್ತಿದೆ. ಹಾಫ್ ಮ್ಯಾರಥಾನ್ (21.5 ಕಿ.ಮೀ.) ಜತೆಗೆ 10 ಕಿ.ಮೀ. ಓಟ ವಿಭಾಗದಲ್ಲಿ ಸ್ಪರ್ಧೆ ಇದೆ. 5 ಕಿ.ಮೀ. ಓಟವನ್ನು ಸ್ಪರ್ಧೆತರವಾಗಿ (ನಾನ್ ಕಾಂಪಿಟಿಟಿವ್) ಆಯೋಜಿಸಲಾಗುತ್ತಿದೆ ಎಂದು ಸ್ಪರ್ಧೆ ಆಯೋಜಿಸಿರುವ `ಲೈಫ್ ಈಸ್ ಕಾಲಿಂಗ್ ಸ್ಪೋರ್ಟ್ಸ್~ ನಿರ್ದೇಶಕ ಪಿ.ಬಿ.ಮಿತ್ರ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹಾಫ್ ಮ್ಯಾರಥಾನ್ ಓಟದಲ್ಲಿ ವಿಜೇತರಾದ ಮೊದಲ ಮೂವರಿಗೆ ಕ್ರಮವಾಗಿ 30 ಸಾವಿರ, 20 ಸಾವಿರ ಮತ್ತು 15 ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಗುವುದು. ಜತೆಗೆ ದಕ್ಷಿಣ ಕನ್ನಡ ಓಟಗಾರರಿಗೆ ವಿಶೇಷ ಬಹುಮಾನವಿದೆ. 10 ಕಿ.ಮೀ. ಓಟದ ಮೊದಲ ಮೂವರು ವಿಜೇತರೂ ನಗದು ಬಹುಮಾನ ಪಡೆಯಲಿದ್ದಾರೆ.

ಬೀಚ್ ಸಮೀಪವೂ ಓಟದ ಕೆಲವು ಭಾಗಗಳು ಇರುವುದರಿಂದ ಸ್ಪರ್ಧೆಗೆ ವಿಶೇಷ ಮೆರುಗು ಇದೆ. ಓಟಗಾರರ ಷೂಲೇಸ್‌ಗೆ ಟೈಮಿಂಗ್ ಚಿಪ್ ಅಳವಡಿಸಲಾಗುವುದು. ಇದರಿಂದ ಕೊನೆಯವರಾಗಿ ಗುರಿಮುಟ್ಟಿದವರ ಸಮಯವೂ ತಿಳಿಯಲಿದೆ ಎಂದರು.

ಪಣಂಬೂರು ಬೀಚ್ ಅಭಿವೃದ್ಧಿ ನೆರವಿಗಾಗಿ ಈ ಓಟ ಆಯೋಜಿಸಲಾಗಿದೆ. ಈಗಾಗಲೇ 250 ಮಂದಿ ಆನ್‌ಲೈನ್ ನೊಂದಾವಣೆ ಮಾಡಿದ್ದಾರೆ. ಸ್ಪರ್ಧಾ ವಿಭಾಗದ ಓಟಗಳಿಗೆ ಹೆಸರು ನೊಂದಾಯಿಸಲು ಕೊನೆಯ ದಿನ ಇದೇ 22.
5 ಕಿ.ಮೀ. ಸೆಲೆಬ್ರೇಷನ್ ಓಟ/ ವಾಕ್‌ನಲ್ಲಿ ಹೆಸರು ನೊಂದಾಯಿಸಲು ಕೊನೆಯ ದಿನ 28. ವಿವರಗಳಿಗೆ ಮೃಗೊಪ್ರಿಯಾ ತಮುಲಿ (92432 91184) ಸಂಪರ್ಕಿಸಬಹುದು.

ನಿಟ್ಟೆ ಶಿಕ್ಷಣ ಸಂಸ್ಥೆಯ ರಾಜಶೇಖರ್ ಮತ್ತು ಪಣಂಬೂರು ಬೀಚ್ ಅಭಿವೃದ್ಧಿ ಯೋಜನೆ ನಿರ್ದೇಶಕ ಯತೀಶ್ ಬೈಕಂಪಾಡಿ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.