ADVERTISEMENT

ಮತ್ತೆ ಅಗ್ರಸ್ಥಾನಕ್ಕೇರಿದ ಕೊಹ್ಲಿ

ಐಸಿಸಿ ಏಕದಿನ ರ್‍್ಯಾಂಕಿಂಗ್‌: ಜಡೇಜಗೆ ಐದನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2014, 19:30 IST
Last Updated 9 ಮಾರ್ಚ್ 2014, 19:30 IST

ದುಬೈ (ಪಿಟಿಐ/ ಐಎಎನ್‌ಎಸ್‌): ಭಾರತದ ವಿರಾಟ್‌ ಕೊಹ್ಲಿ  ಐಸಿಸಿ ಏಕದಿನ ಕ್ರಿಕೆಟ್‌ ಬ್ಯಾಟ್ಸ್‌ಮನ್‌ಗಳ ರ್‍್ಯಾಂಕಿಂಗ್‌ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ.

ಶನಿವಾರ ಕೊನೆಗೊಂಡ ಏಷ್ಯಾಕಪ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣ ಕೊಹ್ಲಿ ಒಂದು ಕ್ರಮಾಂಕ ಮೇಲಕ್ಕೇರಿದ್ದಾರೆ.
ಏಷ್ಯಾಕಪ್‌ಗೆ ಮುನ್ನ ದೆಹಲಿಯ ಬ್ಯಾಟ್ಸ್‌ಮನ್‌ ಎರಡನೇ ಸ್ಥಾನದಲ್ಲಿದ್ದರು. ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್‌ ಅಗ್ರಸ್ಥಾನ ಹೊಂದಿದ್ದರು. ಏಷ್ಯಾಕಪ್‌ನಲ್ಲಿ ಕೊಹ್ಲಿ ಮೂರು ಇನಿಂಗ್ಸ್‌ಗಳಿಂದ 189 ರನ್‌ ಕಲೆಹಾಕಿದ್ದಾರೆ.

ಈ ಮೂಲಕ 881 ರೇಟಿಂಗ್‌ ಪಾಯಿಂಟ್‌ಗಳೊಂದಿಗೆ ಡಿವಿಲಿಯರ್ಸ್‌ (872) ಅವರನ್ನು ಹಿಂದಿಕ್ಕಿ ಮೊದಲ ಸ್ಥಾನ ತಮ್ಮದಾಗಿಸಿ ಕೊಂಡಿದ್ದಾರೆ. ಆಸ್ಟ್ರೇಲಿಯಾದ ಜಾರ್ಜ್‌ ಬೈಲಿ, ಹಾಶಿಮ್‌ ಆಮ್ಲಾ ಮತ್ತು ಕುಮಾರ ಸಂಗಕ್ಕಾರ ಕ್ರಮವಾಗಿ ಮೂರರಿಂದ ಐದರವರೆಗಿನ ಸ್ಥಾನದಲ್ಲಿ ಕಾಣಿಸಿ ಕೊಂಡಿದ್ದಾರೆ.

ಮಹೇಂದ್ರ ಸಿಂಗ್‌ ದೋನಿ ಆರನೇ ಸ್ಥಾನದಲ್ಲಿದ್ದರೆ, ಶಿಖರ್ ಧವನ್‌ ಎಂಟನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಏಕದಿನ ಬೌಲರ್‌ಗಳ ಪಟ್ಟಿಯಲ್ಲಿ ನಾಲ್ಕು ಕ್ರಮಾಂಕ ಮೇಲಕ್ಕೇರಿರುವ ರವೀಂದ್ರ ಜಡೇಜ ಐದನೇ ಸ್ಥಾನ ಅಲಂಕರಿಸಿದ್ದಾರೆ. ಏಷ್ಯಾಕಪ್‌ ಟೂರ್ನಿಯಲ್ಲಿ ಆಡಿದ ನಾಲ್ಕು ಪಂದ್ಯಗಳಿಂದ ಅವರು ಐದು ವಿಕೆಟ್‌ ಪಡೆದಿದ್ದರು. ಏಳು ಕ್ರಮಾಂಕ ಮೇಲಕ್ಕೇರಿದ ಆರ್‌. ಅಶ್ವಿನ್‌ 14ನೇ ಸ್ಥಾನ ಹೊಂದಿದ್ದಾರೆ. ಅವರು ಏಷ್ಯಾಕಪ್‌ನಲ್ಲಿ ಒಟ್ಟು 9 ವಿಕೆಟ್‌ ತಮ್ಮದಾಗಿಸಿಕೊಂಡಿದ್ದರು.  


ಎರಡನೇ ಸ್ಥಾನದಲ್ಲಿ ಭಾರತ: ಏಕದಿನ ತಂಡಗಳ ರ್‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಈ ಮೂಲಕ ಮಹೇಂದ್ರ ಸಿಂಗ್‌ ದೋನಿ ಬಳಗ ₨ 46 ಲಕ್ಷ ಬಹುಮಾನ ಮೊತ್ತ ತನ್ನದಾಗಿಸಿಕೊಳ್ಳಲಿದೆ.ಏಪ್ರಿಲ್‌ ಒಂದರ ವೇಳೆಗೆ ತಂಡಗಳು ಹೊಂದಿರುವ ರ್‍್ಯಾಂಕಿಂಗ್‌ನ ಆಧಾರದಲ್ಲಿ ಐಸಿಸಿ ಬಹುಮಾನ ನೀಡಲಿದೆ. ಅಗ್ರಸ್ಥಾನ ಪಡೆದಿರುವ ಆಸ್ಟ್ರೇಲಿಯಾ ತಂಡ ಏಕದಿನ ಟ್ರೋಫಿ ಹಾಗೂ      ₨ 1.08 ಕೋಟಿ ನಗದು ಬಹುಮಾನ ಪಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT