ADVERTISEMENT

ಮತ್ತೆ ಸ್ಪರ್ಧಿಸುವೆ: ಎನ್‌.ಶ್ರೀನಿವಾಸನ್‌

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 19:59 IST
Last Updated 19 ಸೆಪ್ಟೆಂಬರ್ 2013, 19:59 IST

ಮುಂಬೈ (ಪಿಟಿಐ/ ಐಎಎನ್‌ಎಸ್‌): ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಸ್ಥಾನಕ್ಕೆ ಮತ್ತೆ ಸ್ಪರ್ಧಿಸುವುದಾಗಿ ಎನ್‌. ಶ್ರೀನಿವಾಸನ್‌ ಪ್ರಕಟಿಸಿದ್ದಾರೆ. ಈ ಮೂಲಕ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

‘ಹೌದು. ಮತ್ತೆ ಚುನಾವಣೆಗೆ ಸ್ಪರ್ಧಿಸಲು ನಾನು ಅರ್ಹ. ಇನ್ನೊಂದು ಅವಧಿಗೆ ಮಂಡಳಿಯ ಅಧ್ಯಕ್ಷನಾಗಲು ಬಯಸಿದ್ದೇನೆ’ ಎಂದು ಶ್ರೀನಿವಾಸನ್‌ ಗುರುವಾರ ಹೇಳಿದ್ದಾರೆ.

ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆ ಸೆಪ್ಟೆಂಬರ್‌ 29 ರಂದು ಚೆನ್ನೈನಲ್ಲಿ ನಡೆಯಲಿದೆ. ಇದೇ ವೇಳೆ ಮುಂದಿನ ಅವಧಿಗೆ ಪದಾಧಿಕಾರಿಗಳನ್ನು    ನೇಮಿಸಲು ಚುನಾವಣೆ ನಡೆಯಲಿದೆ.

ಶ್ರೀನಿವಾಸನ್‌ 2011 ರಲ್ಲಿ ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದ ಹಿನ್ನೆಲೆ ಯಲ್ಲಿ ಅವರು ಅಧಿಕಾರದಿಂದ ದೂರ ಸರಿದಿದ್ದರು. ಇದೀಗ ಜಗಮೋಹನ್‌ ದಾಲ್ಮಿಯ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸೆ. 29 ರಂದು ನಡೆಯಲಿರುವ ಮಂಡಳಿಯ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ನಾನೇ ವಹಿಸು ತ್ತೇನೆ ಎಂದು ಶ್ರೀನಿವಾಸನ್‌ ಈಗಾಗಲೇ ಹೇಳಿದ್ದಾರೆ. ಇದೀಗ ಮತ್ತೊಂದು ಅವಧಿಗೆ ಅಧ್ಯಕ್ಷನಾಗಲು ಬಯಸುತ್ತೇನೆ ಎನ್ನುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಅಳಿಯ ಗುರುನಾಥ್‌ ಮೇಯಪ್ಪನ್‌ ಐಪಿಎಲ್‌ ಬೆಟ್ಟಿಂಗ್‌ ಆರೋಪದಿಂದ ಮುಕ್ತರಾಗುವವರೆಗೆ ಬಿಸಿಸಿಐನಿಂದ ದೂರವಾಗುವುದು ಉತ್ತಮವಲ್ಲವೇ ಎಂಬ ಪ್ರಶ್ನೆ ಎದುರಾದಾಗ ಶ್ರೀನಿವಾಸನ್‌, ‘ನನ್ನ ವಿರುದ್ಧ ಯಾವುದೇ ಆರೋಪ ಇಲ್ಲ. ಯಾವುದೇ ಪ್ರಕರಣದಲ್ಲೂ ನನ್ನ ಹೆಸರು ಕೇಳಿಬಂದಿಲ್ಲ.

ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣ ಕೇಳಿಬಂದಾಗ ನಾನು ವೈಯಕ್ತಿವಾಗಿ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ದೂರ ಸರಿದಿದ್ದೆ. ಆದ್ದರಿಂದ ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ನಾನು ಏಕೆ ದೂರ ನಿಲ್ಲಬೇಕು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.