ADVERTISEMENT

ಮತ್ತೊಂದು ಗೆಲುವಿನ ಕನಸಲ್ಲಿ ರೈಡರ್ಸ್:ಸಂಕಷ್ಟದಲ್ಲಿ ಚಾರ್ಜರ್ಸ್

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2012, 19:30 IST
Last Updated 23 ಏಪ್ರಿಲ್ 2012, 19:30 IST

ಕೋಲ್ಕತ್ತ (ಪಿಟಿಐ): ಕೈಗೆಟುಕದ ಹಣ್ಣಾಗಿಯೇ ಉಳಿದಿದೆ ಗೆಲುವು! ಹೌದು; ಡೆಕ್ಕನ್ ಚಾರ್ಜರ್ಸ್ ತಂಡಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಿಯ ಐದನೇ ಅವತರಣಿಕೆಯಲ್ಲಿ ಇನ್ನೂ ಒಂದೂ ಗೆಲುವು ಸಿಕ್ಕಿಲ್ಲ. ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಮಂಗಳವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿಯಾದರೂ ಸೋಲಿನ ಸರಪಣಿಯ ಕೊಂಡಿ ಕಳಚುವುದೇ?

ಪ್ರತಿಯೊಂದು ಪಂದ್ಯಕ್ಕೆ ಮುನ್ನ ಇಂಥದೊಂದು ಪ್ರಶ್ನೆ ಕುಮಾರ ಸಂಗಕ್ಕಾರ ನಾಯಕತ್ವದ ತಂಡವನ್ನು ಕಾಡಿದೆ. ಪಂದ್ಯದ ಕೊನೆಗೆ ಮತ್ತೆ ನಿರಾಸೆ. ಬೆನ್ನಿಗೆ ಬಿದ್ದಿರುವ ಸೋಲಿನ ಭೂತ ಬಿಡುತ್ತಲೇ ಇಲ್ಲ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ 74 ರನ್‌ಗಳ ಭಾರಿ ಅಂತರದ ನಿರಾಸೆಯೊಂದಿಗೆ ಆರಂಭವಾದ ಮುಗ್ಗರಿಸುವ ಮುಳ್ಳಿನ ಹಾದಿಗೆ ಕೊನೆಯೇ ಇಲ್ಲ. ಮುಂಬೈ ಇಂಡಿಯನ್ಸ್, ರಾಜಸ್ತಾನ್ ರಾಯಲ್ಸ್ ಹಾಗೂ ಡೆಲ್ಲಿ ಡೇರ್‌ಡೆವಿಲ್ಸ್  ಎದುರೂ ಅದೇ ದುರಂತ ಕಥೆ ಮುಂದುವರಿಯಿತು.

ಕಟಕ್‌ನಲ್ಲಿ ಗೌತಮ್ ಗಂಭೀರ್ ನಾಯಕತ್ವದ ರೈಡರ್ಸ್ ವಿರುದ್ಧವೂ ಐದು ವಿಕೆಟ್‌ಗಳ ಅಂತರದ ಸೋಲು. ಬಾರಾಬತಿ ಕ್ರೀಡಾಂಗಣದಲ್ಲಿ ಹಿಂದೆ ಉತ್ತಮ ಫಲವನ್ನು ಪಡೆದ ಇತಿಹಾಸವನ್ನು ಹೊಂದಿದ್ದರೂ, ಡೆಕ್ಕನ್ ಚಾರ್ಜರ್ಸ್‌ಗೆ ಅದೃಷ್ಟ ಒಲಿಯಲಿಲ್ಲ.

ಆಡಿದ ಐದೂ ಪಂದ್ಯಗಳಲ್ಲಿ  ಸೋಲು ಚಾರ್ಜರ್ಸ್‌ಗೆ ಸಹನೀಯವಲ್ಲ. ಈಗಾಗಲೇ ಸಾಕಷ್ಟು ಒತ್ತಡದಲ್ಲಿ ಸಿಲುಕಿರುವ ಅದನ್ನು ಮತ್ತೊಮ್ಮೆ ಮಣಿಸುವುದು ನೈಟ್ ರೈಡರ್ಸ್ ಗುರಿ. ಈಡನ್ ಗಾರ್ಡನ್ಸ್‌ನಲ್ಲಿನ ಪಂದ್ಯ ಇದಾಗಿದ್ದು, `ಗೌತಿ~ ಪಡೆಗೆ ಅಪಾರ ಅಭಿಮಾನಿಗಳ ಬೆಂಬಲ ಸಿಗುವುದಂತೂ ಖಚಿತ. ಇಂಥ ಪರಿಸ್ಥಿತಿಯಲ್ಲಿ `ಸಂಗಾ~ ಬಳಗದವರು ಸಾಕಷ್ಟು ಪರಿಶ್ರಮದಿಂದ ಆಡಬೇಕು.

ಪಂದ್ಯ ಆರಂಭ: ರಾತ್ರಿ 8.00ಕ್ಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.